ಮೂರರ ಈ ಮಹಾ ಬೆರಗಿಗೆ ಮುನ್ನ ಮತ್ತೊಂದು ಬೆರಗು ಮೂಡಿದೆ. ಅದು ಮೊನ್ನೆಯ 2025 – 26 ರ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದಾವಣಗೆರೆ ವೃತ್ತಿ ರಂಗಾಯಣಕ್ಕೆ ರುಪಾಯಿ ಮೂರು ಕೋಟಿ ನೀಡಿರುವ ಬೆರಗು ಅದಾಗಿದೆ. ಹರಿಹರ ತಾಲೂಕು ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಪೂರ್ಣ ಪ್ರಮಾಣದ ಸಮುಚ್ಛಯ, ಮೂಲ ಸೌಕರ್ಯಗಳು ಸೇರಿದಂತೆ ಥಿಯೇಟರ್ ಮ್ಯುಜಿಯಮ್ ನಿರ್ಮಾಣ ಮಾಡಲು ಮೂರು ಕೋಟಿ ಹಣ ಘೋಷಿಸಿದ್ದಾರೆ. ನಮ್ಮ ದಾವಣಗೆರೆ ರಂಗಾಯಣದ ಮನವಿಗೆ ದೊರಕಿದ ಪ್ರತಿಫಲ ಅದಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರಕಾರಕ್ಕೆ ಮನದುಂಬಿದ ಕೃತಜ್ಞತೆಗಳು.
ಅಂತೆಯೇ ಅದರಿಂದಾಗಿ ಇದೇ ಮಾರ್ಚ್ 15,16,17 ರಂದು ದಾವಣಗೆರೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿರುವ ರಾಷ್ಟ್ರೀಯ ವೃತ್ತಿ ರಂಗೋತ್ಸವಕ್ಕೆ ಉತ್ಸಾಹದ ವಿನೂತನ ರಂಗು ಮೂಡಿದಂತಾಗಿದೆ. ದಾವಣಗೆರೆ ರಂಗಾಯಣ ಜನ್ಮ ತಾಳಿದ್ದು ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ. ಅಂದಿನ ನಮ್ಮ ಯತ್ನವೂ ಸ್ಮರಣಾರ್ಹ. 2018 ಫೆಬ್ರವರಿ ಮಾಹೆಯಲ್ಲಿ ಅವರು ಬಜೆಟ್ ಮಂಡನೆ ಮಾಡಿದಾಗ ‘ವೃತ್ತಿ ರಂಗಭೂಮಿ ಕೇಂದ್ರ’ ಹೆಸರಿನಿಂದ ಅದು ಮಂಜೂರುಗೊಂಡಿತು.
ಮುಂದಿನ ದಿನಗಳಲ್ಲಿ ಅದು “ವೃತ್ತಿ ರಂಗಭೂಮಿ ರಂಗಾಯಣ” ಎಂದು ಪರಿವರ್ತನೆಯಾಗಿ ಏಳು ವರುಷಗಳು ಕಳೆದಿರುವ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ತಮ್ಮ ಹದಿನಾರನೇ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿಯ ಆಯವ್ಯಯದಲ್ಲಿ ದಾವಣಗೆರೆ ರಂಗಾಯಣಕ್ಕೆ ಕಾಯಕಲ್ಪದ ಸಂಕಲ್ಪ ದೊರಕಿದೆ. ಕರ್ನಾಟಕ ರಾಜ್ಯಾದ್ಯಂತ ವ್ಯಾಪ್ತಿ ಹೊಂದಿರುವ ದಾವಣಗೆರೆ ರಂಗಾಯಣವು ರಂಗ ಸಂಸ್ಕೃತಿಯ ಸ್ವಾಯತ್ತತೆಯನ್ನು ಉಳಿಸಿಕೊಂಡು ತನ್ನ ಸ್ವರೂಪವನ್ನು ಕಂಡುಕೊಳ್ಳ ತೊಡಗಿದೆ. ಆ ದಿಕ್ಕಿನಲ್ಲಿ ಈ ವೃತ್ತಿ ರಂಗೋತ್ಸವ ಗಮನಾರ್ಹ ಯತ್ನವೆಂದು ಭಾವಿಸಬೇಕಿದೆ.
ಅಂದಹಾಗೆ ಇದು ದಾವಣಗೆರೆ ರಂಗಾಯಣದ ಪ್ರಥಮ “ರಾಷ್ಟ್ರೀಯ ವೃತ್ತಿ ರಂಗೋತ್ಸವ” ಆಗಿದೆ. ಮೂರು ಹಗಲು ಮತ್ತು ಮೂರು ರಾತ್ರಿಗಳ ಕಾಲ ರಂಗದ ಮಹಾ ಬೆರಗು. ಏಳೆಂಟು ಬಗೆಯ ಕಾರ್ಯಕ್ರಮಗಳು ಜರುಗುತ್ತಲಿವೆ. ರಂಗಸಂಸ್ಕೃತಿಯ ದಿವಿನಾದ ಸಾಕ್ಷಿಯಂತಿರುವ ಮುಖ್ಯಮಂತ್ರಿ ಚಂದ್ರು ಅವರು ವೃತ್ತಿ ರಂಗೋತ್ಸವ – 2025 ಉದ್ಘಾಟಿಸುವರು.
ದಾವಣಗೆರೆಯ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ರಂಗನಾಟಕಗಳ ಉದ್ಘಾಟನೆ ನೆರವೇರಿಸುವರು. ಶ್ರೀನಿವಾಸ ಜಿ. ಕಪ್ಪಣ್ಣ ಸಮಾರೋಪ ಭಾಷಣ ಮಾಡುವರು. ಇದೆಲ್ಲಾ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಜರುಗುತ್ತಿರುವುದು ಅದರ ವಿಭಿನ್ನ ರಂಗಚಿಂತನೆಗೆ ಮೆರಗು ಮೂಡಿಸಿದೆ. ಅದರಲ್ಲೂ ನೂತನ ಬಯಲು ರಂಗಮಂದಿರದ ಚೆಂದನೆಯ ವಿನ್ಯಾಸದಲ್ಲಿ ಮೂರು ದಿನ – ರಾತ್ರಿಗಳ ರಂಗ ಸಂಭ್ರಮ ಅದಾಗಿದೆ. ಪ್ರತಿ ದಿನ ಜರುಗುವ ವೃತ್ತಿ ರಂಗಭೂಮಿ ಕುರಿತಾದ ವಿಚಾರ ಸಂಕಿರಣಗಳಲ್ಲಿ ಮೂಡಿಬರುವ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಇರಾದೆಯೂ ನಮ್ಮದು. ವೃತ್ತಿರಂಗ ಪರಂಪರೆಯ ಸೂಕ್ಷ್ಮತೆ, ಜೀವಚೈತನ್ಯ ಗುರುತಿಸಬಹುದಾದ ಚಿಂತನೆಗಳು ಅಲ್ಲಿರಬಲ್ಲವು.
ಮೂರು ರಾತ್ರಿ; ಕನ್ನಡ, ತಮಿಳು, ತೆಲುಗು ನಾಟಕಗಳ ಹಬ್ಬ. ಮೊದಲಿಗೆ ಕನ್ನಡದ ನಾಟಕ. ಅದು ಗದಗಿನ ಪ್ರಸಿದ್ಧ ನಾಟಕಕಾರ ಮಹಾದೇವ ಹೊಸೂರ ಬರೆದ ‘ಅಕ್ಕ ಅಂಗಾರ ತಂಗಿ ಬಂಗಾರ’ ಎಂಬ ಸಾಮಾಜಿಕ ನಾಟಕ. ಈಗಾಗಲೇ ಕೊಪ್ಪಳ ಮತ್ತು ಬನಶಂಕರಿ ಜಾತ್ರೆಗಳಲ್ಲಿ ಲಕ್ಷ ಲಕ್ಷ ಪ್ರೇಕ್ಷಕ ಪ್ರಭುಗಳ ಮನಸೂರೆಗೊಂಡ ನಾಟಕ ಇದಾಗಿದೆ. ಅಕ್ಕ ತಂಗಿಯರಿಬ್ಬರೂ ಒಬ್ಬನೇ ಯುವಕನ ಮೋಹಪಾಶದ ಬಲೆಯಲ್ಲಿ ಬೀಳುವ, ಭರಪೂರ ಕಚಗುಳಿಯುಳ್ಳ ಕಥನ ವಸ್ತು. ಸಂಮೋಹಕ ವಿನೋದ ಉಕ್ಕಿಸುವಲ್ಲಿ ಅದು ಮೊದಲ ಸಾಲಿನ ರಂಗಕಾವ್ಯವೇ ಹೌದು. ಅಂದಹಾಗೆ ಜೇವರ್ಗಿ ರಾಜಣ್ಣ ನಿರ್ದೇಶನ ಮತ್ತು ನಿರ್ಮಾಣ ತಂಡದ ನಾಟಕವಿದು. ಕಿರುತೆರೆಯ ತಾರೆಯರಾದ ಸುಜಾತಾ ಮತ್ತು ನೀಲಾ ಎಂಬ ಜೇವರ್ಗಿ ಸೋದರಿಯರ ಮನೋಜ್ಞ ಅಭಿನಯದ ರಸದೌತಣ. ವರ್ತಮಾನದ ವೃತ್ತಿ ರಂಗ ನಾಟಕಗಳಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ರಂಗಪ್ರಯೋಗ. ನೀವ್ಯಾರೂ ಮಿಸ್ ಮಾಡಿಕೊಳ್ಳುವ ಛಾನ್ಸೇ ಇಲ್ಲ.
ಅಂದಹಾಗೆ ಎರಡನೇ ದಿನದ್ದು ತಮಿಳು ನಾಟಕ. ಪಾಂಡಿಚೆರಿಯ ವೆಲಿಪ್ಪಡೈ ಥಿಯೇಟರ್ ಮೂಮೆಂಟ್ ತಂಡದ “ನಡಾಪಾವಾಡೈ” ಎಂಬ ಗಂಭೀರ ಚಿಂತನೆಗೆ ತೊಡಗಿಸುವ ಸ್ತ್ರೀ ಪರ ಒಲವಿನ ಪ್ರಯೋಗಶೀಲ ರಂಗನಾಟಕ. ಹೆಣ್ಣೊಬ್ಬಳು, ತಂದೆಯ ಶವಸಂಸ್ಕಾರ ನಿರ್ವಹಿಸುವ ದಿಟ್ಟ ಸಾಹಸದ ನಿಲುವು. ನಾಟಕದುದ್ದಕ್ಕು ಓತಪ್ರೋತ ಪ್ರವಹಿಸುವ ಪ್ರಗತಿಪರ ತಾತ್ವಿಕತೆಯನ್ನು ಮೆರೆಯುತ್ತದೆ. ಇದನ್ನು ಎಸ್. ರಾಮಸಾಮಿ ರಚಿಸಿ, ನಿರ್ದೇಶಿಸಿದ್ದಾರೆ.
ಮೂರನೇ ದಿನದ ತೆಲುಗು ನಾಟಕದ ಹೆಸರು ಮಾಯಾಬಜಾರ್. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ತೆಲಂಗಾಣ ಸುರಭಿ ತಂಡದ ನಾಟಕ. ನೂರಾ ನಲವತ್ತು ವರ್ಷಗಳಷ್ಟು ಹಳತಾದುದು ಸುರಭಿ ತಂಡ. ಶ್ರೀ ವೆಂಕಟೇಶ್ವರ ‘ಸುರಭಿ’ ನಾಟಕ ಮಂಡಳಿ ಅದಾಗಿದೆ. ಒಂದೇ ಕುಟುಂಬದ ನಲವತ್ತಕ್ಕೂ ಹೆಚ್ಚು ಮಂದಿ ಕಲಾವಿದರಿಂದ ಮಾಯಾಬಜಾರ ರೂಪುಗೊಂಡಿದೆ. ಇಲ್ಲಿ ಹತ್ತು ಹಲವು ಚಮತ್ಕಾರ, ಕೌತುಕ, ಪೌರಾಣಿಕ ಸನ್ನಿವೇಶಗಳು ನಾಟಕದ ತುಂಬಾ ತುಂಬಿ ತುಳುಕುತ್ತವೆ. ಕ್ಷಣ ಕ್ಷಣಕೂ ಪ್ರೇಕ್ಷಕರ ಕುತೂಹಲ ಕೆರಳಿಸುವ ಸುಸಂಪನ್ನ ಮಾಯಾಲೋಕವನ್ನೇ ಸೃಷ್ಟಿಸುವ ನಾಟಕ. ಮಾಯಾಬಜಾರ ನೋಡಲು ಮರೆಯದಿರಿ. ಮರೆತು ಮರುಗದಿರಿ.
ರಂಗಭೂಮಿಯ ಭಾವದೊಡಲು ತುಂಬಿ ತುಳುಕಿದಾಗ ಭಾಷೆಯೆಂಬುದು ತೊಡಕಾಗದು. ಹೀಗಾಗಿ ತೆಲುಗು ಮತ್ತು ತಮಿಳು, ಕನ್ನಡಿಗರಿಗೆ ಬಾರದ ಭಾಷೆಯೆನಿಸಿದರೂ ರಂಗಸಂವಹನಕ್ಕೆ ಅಡ್ಡಿಯೆನಿಸದು. ಇನ್ನುಳಿದಂತೆ ಇಡೀ ಉತ್ಸವವೆಂದರೆ ವೃತ್ತಿ ರಂಗದ ಎಲ್ಲ ಆಯಾಮಗಳ ಕುರಿತು ಮತ್ತದರ ಬದಲಾಗುತ್ತಿರುವ ರಂಗ ಸ್ವರೂಪದ ಮೇಲೆ ಬೆಳಕು ಚೆಲ್ಲುವ ವಿಚಾರಧಾರೆಗಳ ಮೊತ್ತ. ಪ್ರತಿದಿನ ಮುಂಜಾನೆ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಭಿನ್ನ ಚಿಂತನೆಯ ವಿಚಾರ ಸಂಕಿರಣಗಳು.
ಉತ್ಸವದ ಮತ್ತೊಂದು ಮಹತ್ವದ ವಿಷಯವೆಂದರೆ; ಡಾ. ಶೃತಿರಾಜ್ ಮತ್ತು ಸಂಗಡಿಗರಾದ ನಂದಾದೇವಿ, ಅಸ್ಮಿತಾ ಅವರಿಂದ ವೃತ್ತಿ ರಂಗದ ರಂಗಸಂಗೀತ ಪರಂಪರೆಯನ್ನು ಬಿಂಬಿಸುವ ರಂಗಗೀತೆಗಳ ಗಾಯನ. ಇಡೀ ಉತ್ಸವಕ್ಕೆ ಮೆರಗು ನೀಡುವಂತಹ ಇನ್ನೊಂದು ಸಂಗತಿಯೆಂದರೆ ಅಜ್ಜಂಪುರದ ಎ.ಎಸ್. ಕೃಷ್ಣಮೂರ್ತಿ ಸಂಪಾದಿಸಿರುವ ರಂಗ ದಾಖಲೆಗಳ ಪ್ರದರ್ಶನ. ಅವು ಏನಿಲ್ಲವೆಂದರೂ ಅರ್ಧ ಶತಮಾನದಷ್ಟು ಸಮೃದ್ಧ ಆಯುಷ್ಯ ಹೊಂದಿವೆ. ನಾಕೈದು ದಶಕಗಳಷ್ಟು ಹಿಂದಿನಿಂದಲೂ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ರಂಗ ದಾಖಲೆಗಳು. ಅರ್ಧ ಶತಮಾನದಿಂದ ಕೃಷ್ಣಮೂರ್ತಿ ಸಂಗ್ರಹಿಸಿದ ಸಹಸ್ರ ಸಹಸ್ರ ಸಂಖ್ಯೆಯ ದಾಖಲೆಗಳನ್ನು ಸಾಗಣೆ ಮಾಡುವುದೇ ದುಸ್ತರ. ನಾಕೈದು ಕ್ವಿಂಟಲ್ ಭಾರದ ಅವುಗಳನ್ನು ಜತನವಾಗಿ ಸಾಗಿಸಲು ಮಿನಿ ಲಾರಿಯೇ ಆಗಬೇಕು. ಮೂವರು ಕೆಲಸಗಾರರೇ ಬೇಕು. ಇಂತಹ ಅಪರೂಪದ ದಾಖಲೆಗಳನ್ನು ಸಂಪಾದಿಸಿರುವ ಕೃಷ್ಣಮೂರ್ತಿ, ಬೆಳಗಾವಿಯಲ್ಲಿ ಜರುಗಿದ ಎರಡನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದ್ದಾರೆ.
ಇಂತಹ ಅಪರೂಪದ ರಂಗಸೇವೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯು ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಕೃಷ್ಣಮೂರ್ತಿ ಅವರ ಸಮಗ್ರ ರಂಗದಾಖಲೆಗಳ ಸಂಗ್ರಹದ ಪ್ರದರ್ಶನ. ಅಲ್ಲದೇ ಅತ್ಯಪರೂಪದ ರಂಗ ನಾಟಕದ ಪುಸ್ತಕಗಳು ಮೂರು ದಿವಸವೂ ಪ್ರದರ್ಶನಗೊಳ್ಳುತ್ತವೆ. ಅದರ ಜತೆಗೆ ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಚಿತ್ರಕಲಾ ಶಿಬಿರದಲ್ಲಿ ರಚಿಸಿದ ಮತ್ತೊಂದು ಮಹತ್ವದ ಚಿತ್ರಕಲಾ ಪ್ರದರ್ಶನ. ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸೃಜನಾತ್ಮಕ ರಂಗಕಲೆಯನ್ನು ಬಿಂಬಿಸುವ ಹತ್ತು ಹಲವು ಪೇಂಟಿಂಗ್ಸ್. ವೃತ್ತಿ ರಂಗಭೂಮಿ ನಾಟಕಗಳು ಮತ್ತು ಆಧುನಿಕ ರಂಗನಾಟಕ ದೃಶ್ಯಗಳ ಸೃಜನಶೀಲ ಚಿತ್ರಗಳು ಅಲ್ಲಿವೆ. ಅದರಲ್ಲೂ ಬಹುಮಾನಿತ ಚಿತ್ರಗಳ ಪ್ರದರ್ಶನ. ಅದರಲ್ಲಿ ರಂಗೋತ್ಸವದ ಲಾಂಛನವೂ ಇರಬಲ್ಲದು.
Read also : Davanagere | ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ : ವಿರೇಂದ್ರ ಕುಂದುಗೋಳ
ಮರೆತಿದ್ದೆ ; ಹಿರಿಯ ರಂಗ ಕಲಾವಿದರೊಂದಿಗೆ ಸಂವಾದ ಮತ್ತು ರಂಗಗೌರವವೂ ಇರುತ್ತದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ನಾಟಕ ವಿಮರ್ಶಾ ಸ್ಪರ್ಧೆ ಕೂಡಾ ಏರ್ಪಡಿಸಲಾಗಿದೆ. ಮೂರು ದಿವಸ ಜರುಗುವ ಈ ನಾಟಕಗಳನ್ನು ನೋಡಿ ವಿಮರ್ಶೆ ಬರೆಯಬೇಕು. ಈ ಸ್ಪರ್ಧೆಯಲ್ಲಿ ಬಹುಮಾನಕ್ಕೆ ಭಾಜನಗೊಂಡವರನ್ನು ಇದೇ ಮಾರ್ಚ್ 27 ರಂದು ಜರುಗುವ ವಿಶ್ವರಂಗಭೂಮಿ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಬನ್ನಿ ವೃತ್ತಿ ದಾವಣಗೆರೆ ರಂಗಾಯಣದ ಪ್ರಥಮ ರಂಗೋತ್ಸವದ ಸಡಗರದಲ್ಲಿ ಸಂಭ್ರಮಿಸೋಣ.
ಮಲ್ಲಿಕಾರ್ಜುನ ಕಡಕೋಳ
9341010712