ದಾವಣಗೆರೆ ಏ.18 : ಬೇಸಿಗೆ ಬಂತೆಂದರೆ ಬಿಸಿಲಿನ ತಾಪಕ್ಕೆ ಯಾವ ಊಟವು ರುಚಿಸದು ಮತ್ತು ಬಾಯಾರಿಕೆ ತಣಿಸಲು ತಂಪು ಪಾನೀಯಗಳಿಗೆ ಮೊರೆ ಹೋಗುವವರೇ ಹೆಚ್ಚು, ಆಯುಷ ಇಲಾಖೆ ಜನರ ಆರೋಗ್ಯ ವೃದ್ಧಿ ಜೊತೆಗೆ ಬಿಸಿಲಿನ ಬಾಯಾರಿಕೆ ದಾಹ ಕಡಿಮೆ ಮಾಡಲು ಆಯುಷ ಪದ್ದತಿಯ ಚಿಂಚಾ ಪಾನಕದ ಪರಿಚಯ ಮಾಡಿದ್ದು ಇದು ಆರೋಗ್ಯ ಸಂರಕ್ಷಣೆಗೆ ಬಹು ಉಪಯೋಗಿ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.
ಗುರುವಾರ ಆಯುಷ ಇಲಾಖೆಯಿಂದ ಪರಿಚಯಿಸುತ್ತಿರುವ ಆರೋಗ್ಯಕರ ಆಯುಷ ಪಾನಕ ಪರಿಚಯ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಿಂಚಾ ಪಾನಕ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಪಾನಕ ಸ್ವಾಧಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗಾದೆಯ ಮಾತು, ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮ್ಮ ಮನೆಯಲ್ಲಿಯೇ ಸಿಗುವ ವಸ್ತುಗಳಲ್ಲಿಯೇ ಆರೋಗ್ಯ ವೃದ್ಧಿ, ಸಂರಕ್ಷಣೆ, ರೋಗನಿರೋಧಕ ಅಂಶಗಳಿರುತ್ತವೆ. ಆದರೆ ನಮಗೆ ಅವನ್ನು ತಯಾರಿಸಿಕೊಳ್ಳುವ ವಿಧಾನದ ಅರಿವಿರಬೇಕು. ಆಯುಷ ಇಲಾಖೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿ ತಯಾರಿಸಬಹುದಾದ ಚಿಂಚಾ ಪಾನಕ ಅಂದರೆ ಹುಣಸೆ ಹಣ್ಣಿನ ಪಾನಕ ಎಂದು ಇದನ್ನು ಕರೆಯಲಾಗುತ್ತದೆ. ಇದರಿಂದ ಬಾಯಾರಿಕೆ ಕಡಿಮೆ, ಜೊತೆಗೆ ದೇಹದಲ್ಲಿನ ಉಷ್ಣತೆಯನ್ನು ತಗ್ಗಿಸಲಿದ್ದು ಮಲಬದ್ದತೆ ನಿವಾರಿಸಲಿದೆ, ಇದು ಆರೋಗ್ಯಕರ ಪಾನಿಯವಾಗಿದೆ ಎಂದರು.
ಚಿಂಚಾ ಪಾನಕ ತಯಾರಿಸುವ ವಿಧಾನ;. 5 ಲೀಟರ್ ಪಾನಕ ತಯಾರಿಸಲು 100 ಗ್ರಾಂ ಹುಣಸೆ ಹಣ್ಣು, 40 ಗ್ರಾಂ ಬೆಲ್ಲದ ಪುಡಿ, 10 ಗ್ರಾಂ ಜೀರಿಗೆ ಪುಡಿ, 5 ಗ್ರಾಂ ಕಾಳು ಮೆಣಸಿನ ಪುಡಿ, 5 ಗ್ರಾಂ ಸೈಂಧವ ಲವಣ ಮಿಶ್ರಣ ಮಾಡಬೇಕು. ಸೇವನೆ ಮಾತ್ರ 50 ರಿಂದ 100 ಮಿಲಿಯಷ್ಟು ಅಗತ್ಯ ನೀರು ಸೇರಿಸಿಕೊಂಡು ಕುಡಿಯಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಜಿಲ್ಲಾ ಆಯುಷ ಅಧಿಕಾರಿ ಡಾ.ಯೋಗೇಂದ್ರಕುಮಾರ್, ಎನ್.ಐ.ಸಿ.ಅಧಿಕಾರಿ ಉದಯ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಠದ್, ಆಯುಷ ವೈದ್ಯರಾದ ಡಾ.ಸುರೇಶ್ ಕುಮಾರ್ ಎಂ.ಸಿ ಇತರರು ಉಪಸ್ಥಿತರಿದ್ದರು.