ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯವು ತನ್ನ ವ್ಯಾಪ್ತಿಯ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 12,706 ವಿದ್ಯಾರ್ಥಿಗಳಿಗೆ ಇದೇ 30ರಂದು ನಡೆಯುವ ಹದಿಮೂರನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಿದೆ.
ಇದೇ ಸಂದರ್ಭದಲ್ಲಿ 45 ವಿದ್ಯಾರ್ಥಿಗಳು 87 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರೆ, 70 ಸಂಶೋಧನಾರ್ಥಿಗಳು ಪಿಎಚ್.ಡಿ. ಪದವಿಯನ್ನು ಕುಲಾಧಿಪತಿಗಳೂ ಆಗಿರುವ ಗೌರವಾನ್ವಿತ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರಿಂದ ಸ್ವೀಕರಿಸಲಿದ್ದಾರೆ. ಈ ಬಾರಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ನಯನ ಎನ್.ಬಿ ಒಟ್ಟು ಏಳು ಪದಕಗಳೊಂದಿಗೆ ಚಿನ್ನದ ಹುಡುಗಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರೊ. ಕುಂಬಾರ, ಈ ಬಾರಿಯೂ ಚಿನ್ನದ ಪದಕಗಳ ಬೇಟೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇದಲ್ಲದೆ 30 ಮಹಿಳೆಯರು ಪಿಎಚ್.ಡಿ. ಪದವಿ ಪಡೆದಿರುವುದು ವಿಶೇಷ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ಮಹಿಳೆಯರೇ ಉನ್ನತಿ ಸಾಧಿಸುತ್ತಿರುವುದು ಗಮನಾರ್ಹ ಎಂದರು.
ಪ್ರಸಕ್ತ ಘಟಿಕೋತ್ವದಲ್ಲಿ ಒಟ್ಟು 87 ಸ್ವರ್ಣ ಪದಕಗಳು 45 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಚಿನ್ನ ಗಳಿಕೆಯಲ್ಲಿಯೂ ಮಹಿಳೆಯರೇ ಮುಂಚೂಣಿಯಲ್ಲಿದ್ದು, 35 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 10 ಪದಕಗಳು ಪುರುಷ ವಿದ್ಯಾರ್ಥಿಗಳ ಪಾಲಾಗಿವೆ. ಸ್ನಾತಕ ಪದವಿಯಲ್ಲಿ 11 ಮಹಿಳಾ ಹಾಗೂ 2 ಪುರುಷ ವಿದ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯ 32 ವಿದ್ಯಾರ್ಥಿಗಳಲ್ಲಿ 24 ಮಹಿಳಾ ಹಾಗೂ 8 ಪುರುಷ ವಿದ್ಯಾರ್ಥಿಗಳು 65 ಸ್ವರ್ಣ ಪದಕಗಳನ್ನು ಗಳಿಸಿದ್ದಾರೆ ಎಂದು ಹೇಳಿದರು.
ಸ್ನಾತಕೋತ್ತರ ಪದವಿಯ ಎಂಬಿಎ ವಿಭಾಗದ ದೀಪಾ ಆರ್ ತಲಾ ನಾಲ್ಕು ಸ್ವರ್ಣ ಪದಕಗಳನ್ನು ಪಡೆದಿದ್ದಾರೆ. ಗಣಿತಶಾಸ್ತ್ರ ವಿಭಾಗದ ಕವನ ಪಿ.ಎಂ, ಜೀವರಸಾಯನಶಾಸ್ತ್ರ ವಿಭಾಗದ ರುಚಿತಾ ಡಿ, ಭೌತವಿಜ್ಞಾನ ವಿಭಾಗ ಪುಟ್ಟರಾಜ ಎಂ.ಆರ್, ಪ್ರಾಣಿಶಾಸ್ತ್ರ ವಿಭಾಗ ಪುಷ್ಪಾ ಜೆ, ಇಂಗ್ಲಿಷ್ ವಿಭಾಗದ ವಿಜಯಲಕ್ಷಿ್ಮ ಬಿ.ಎಂ, ಮತ್ತು ಕನ್ನಡ ವಿಭಾಗದ ಅನುಷಾ ಎಂ.ಎಂ. ಅವರು ತಲಾ ಮೂರು ಚಿನ್ನಗಳೊಂದಿಗೆ ಹೆಚ್ಚು ಚಿನ್ನದ ಪದಕ ಗಳಿಸಿದವರ ಪಟ್ಟಿಗೆ ಸೇರಿದ್ದಾರೆ ಎಂದು ತಿಳಿಸಿದರು.
Read also : ಉತ್ತಮ ಚಾಲಕರಾಗಿರಲು ಉತ್ತಮ ಆರೋಗ್ಯ ಅವಶ್ಯ : ಎಸ್ಪಿ ಉಮಾ ಪ್ರಶಾಂತ್
ಇವರಲ್ಲದೆ ಅರ್ಥಶಾಸ್ತ್ರ ವಿಭಾಗದಲ್ಲಿ ಎಸ್ಬಿಸಿ ಪ್ರಥಮ ದರ್ಜೆ ಕಾಲೇಜಿನ ಕೋನೇನ್ ತಬಸುಮ್, ಪತ್ರಿಕೋದ್ಯಮ ವಿಭಾಗದ ಚಂದನ ವಿ.ಎಂ, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಪ್ರದೀಪಕುಮಾರ ಬಿ, ಸಸ್ಯಶಾಸ್ತ್ರ ವಿಭಾಗದ ಪ್ರಿಯಾ ಎಂ, ಎಂಪಿಇಡಿಯಲ್ಲಿ ಗಗನ ಎ.ಎಂ, ರಸಾಯನಶಾಸ್ತ್ರ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚೌಡೇಶ್ವರಿ ಟಿ, ಗಣಕ ವಿಜ್ಞಾನ ವಿಭಾಗದ ಸುಮತಿ ಎಚ್.ಪಿ, ಆಹಾರ ತಂತ್ರಜ್ಞಾನ ವಿಭಾಗದ ನಿತೀಶ್ ಕೆ.ಗೌಡ, ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಗಾಯತ್ರಿ ದೀಪಿಕಾ ಬಿ ಅವರು ತಲಾ ಎರಡು ಬಂಗಾರದ ಪದಕಗಳನ್ನು ತಮ್ಮ ಮುಡಿಗೇರಿಸಲಿದ್ದಾರೆ.
ಅರ್ಥಶಾಸ್ತ್ರ ವಿಭಾಗದಲ್ಲಿ ಶಿವಗಂಗೋತ್ರಿ ಆವರಣದ ಕಾವ್ಯಾ ಆರ್, ಕನ್ನಡ ವಿಭಾಗದಲ್ಲಿ ಚಿತ್ರದುರ್ಗ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ಬೋರಯ್ಯ ಸಿ.ಸಿ, ರಾಜ್ಯಶಾಸ್ತ್ರ ವಿಭಾಗದ ಸಿಂಧು ಎಚ್ ಮತ್ತು ಅಮೂಲ್ಯ ಜಿ.ಎಂ., ಸಮಾಜಶಾಸ್ತ್ರ ವಿಭಾಗದಲ್ಲಿ ಶುಭಾ ಪಿ.ಒ, ಉರ್ದು ವಿಭಾಗದಲ್ಲಿ ಶುಬ್ನಮ್ ಬಳಿಗಾರ, ಎಂಎಸ್ಡಬ್ಲು್ಯ ವಿಭಾಗದಲ್ಲಿ ಚಿಕ್ಕಮ್ಮ ಎಂ., ಎಂ.ಕಾಂನಲ್ಲಿ ತೇಜರಾಜ ಎಸ್.ಎ, ಎಂಬಿಎ ವಿಭಾಗದಲ್ಲಿ ಪಾವನಿ ಎಸ್, ಪಲ್ಲವಿ ಕೆ.ಎಸ್, ಎಂಇಡಿಯಲ್ಲಿ ಸಮ್ರಿನ್ ಎಂ., ಜೀವರಸಾಯನಶಾಸ್ತ್ರ ವಿಭಾಗದ ಜೈವಿಕ ತಂತ್ರಜ್ಞಾನ ವಿಭಾಗದ ಧನರಾಜ್ ಆರ್.ಕೆ, ಅಪರಾಧಶಾಸ್ತ್ರ ವಿಭಾಗದ ಐಶ್ವರ್ಯ ಒ.ಎಸ್, ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಬಾಳಾಸಾಹೇಬ ಸುರಪುರ ಅವರು ಒಂದೊಂದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ನಾತಕ ಕಲಾ ಪದವಿ(ಬಿಎ)ಯಲ್ಲಿ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕ ಡಿ.ಆರ್., ವಾಣಿಜ್ಯ (ಬಿ.ಕಾಂ) ಪದವಿಯಲ್ಲಿ ದಾವಣಗೆರೆ ಎಜಿಬಿ ಪ್ರಥಮ ದರ್ಜೆ ಕಾಲೇಜಿನ ಕೀರ್ತನಾ ಎಸ್ ಮತ್ತು ಶಿಕ್ಷಣ (ಬಿಇಡಿ) ಪದವಿಯಲ್ಲಿ ದಾವಣಗೆರೆಯ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಕಾಲೇಜಿನ ಹಜ್ಮಾ ಜೆ. ಅವರು ತಲಾ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದರು.
ದೃಶ್ಯಕಲಾ ಮಹಾವಿದ್ಯಾಲಯದ ಐಶ್ವರ್ಯ ಎಲಿಗಾರ, ಬಿಸಿಎ ಪದವಿಯಲ್ಲಿ ಇಂಟರ್ಫೇಸ್ ಕಂಪ್ಯೂಟರ್ ಅಪ್ಲಿಕೇಶನ್ ಕಾಲೇಜಿನ ಪಿ.ವೆಂಕಟದುರ್ಗಾ ಪ್ರಸಾದ, ಬಿಎಸ್ಸಿಯಲ್ಲಿ ಎ.ವಿ.ಕಮಲಮ್ಮ ಕಾಲೇಜಿನ ಹಬೀಬಾ ಮಿಸ್ಬಾ ಅವರು ತಲಾ ಎರಡು ಚಿನ್ನ ಗಳಿಸಿದ್ದಾರೆ. ಬಿಪಿಇಡಿಯಲ್ಲಿ ಮಲ್ಲಾಡಿಹಳ್ಳಿಯ ಶತಮಾನೋತ್ಸವ ದೈಹಿಕ ಶಿಕ್ಷಣ ಕಾಲೇಜಿನ ನಾಗವೇಣಿ ಬಿ., ಬಿಬಿಎನಲ್ಲಿ ಆರ್ಜಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ದಿಶಾ ಜೈನ್, ಗಣಿತಶಾಸ್ತ್ರದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಡಿಆರ್ಎಂ ಕಾಲೇಜಿನ ಸುಶ್ಮಿತಾ ರಾವ್ ಹಾಗೂ ದೃಶ್ಯ ಕಲಾ ಕಾಲೇಜಿನ ನವ್ಯ ಎ.ಆರ್. ತಲಾ ಒಂದು ಚಿನ್ನದ ಪದಕವನ್ನು ಪಡೆದಿದ್ದಾರೆ.
ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 12706 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ವಿವಿಧದ ಸ್ನಾತಕ ಪದವಿಗಳಲ್ಲಿ 6401 ಮಹಿಳಾ ಹಾಗೂ 4283 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 10684 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆಯಲಿದ್ದಾರೆ. ಇನ್ನು 1191 ಮಹಿಳಾ ಹಾಗೂ 831 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 2022 ವಿದ್ಯಾರ್ಥಿಗಳು ವಿವಿಧ ಸ್ನಾತಕೋತ್ತರ ಪದವಿಯನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದ ಪರೀಕ್ಷೆಗಳಲ್ಲಿ ಸ್ನಾತಕ ಪದವಿಯಲ್ಲಿ ಶೇಕಡ 58.77 ರಷ್ಟು ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇಕಡ 91.41 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದರು.
ಘಟಿಕೋತ್ಸವ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಗೌರವಾನ್ವಿತ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದು, ರ್ಯಾಂಕ್ ವಿಜೇತರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡುವರು.
ವಿಶ್ವವಿದ್ಯಾನಿಲಯದ ಗೌರವಾನ್ವಿತ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿದ್ದು, ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಎರಡು ಮತ್ತು ಮೂರನೇ ರ್ಯಾಂಕ್ ವಿಜೇತರಿಗೆ ಪದವಿ ಪ್ರದಾನ ಮಾಡುವರು.
ಡಿಆರ್ಡಿಒ ಮಾಜಿ ಮಹಾನಿರ್ದೇಶಕರು, ಕೇಂದ್ರ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಗಳು ಹಾಗೂ ಸಲಹೆಗಾರರೂ ಆಗಿದ್ದ ಪದ್ಮವಿಭೂಷಣ ಡಾ.ವಾಸುದೇವ ಕೆ. ಅತ್ರೆ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ವಂದನಾ, ವಿವಿಧ ನಿಕಾಯಗಳ ಡೀನರಾದ ಪ್ರೊ.ಕೆ.ವೆಂಕಟೇಶ, ಪ್ರೊ.ಎಂ.ಯು.ಲೋಕೇಶ, ಪ್ರೊ.ಗೋವಿಂದಪ್ಪ, ಪ್ರೊ.ಶ್ರೀನಿವಾಸ, ಸಿಂಡಿಕೇಟ್ ಮತ್ತು ಅಕಾಡೆಮಿಕ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.
