ದಾವಣಗೆರೆ – ಟಿವಿ ಸ್ಟೇಷನ್ ಕೆರೆಗೆ ಬುಧವಾರ ಪಾಲಿಕೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತೆರಳಿ ಪರಿಶೀಲನೆ ಮಾಡಿದರು.
ನಗರಕ್ಕೆ ಕುಡಿಯುವ ನೀರು ಒದಗಿಸಲು ಟಿವಿ ಸ್ಟೇಷನ್ ಕೆರೆಯನ್ನು ಭರ್ತಿ ಮಾಡಿ ನೀರು ಪೂರೈಕೆ ಮಾಡಲಾಗುತ್ತಿದೆ.
ಈ ಕೆರೆಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿ 4 ಅಡಿಗೆ ಕುಸಿದಿದ್ದು ಮುಂದಿನ 15 ದಿನಗಳಿಗಾಗುವಷ್ಟು ನೀರಿನ ಸಂಗ್ರಹವಿರುತ್ತದೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಭದ್ರಾ ಕಾಲುವೆ ಮೂಲಕ ನೀರು ತುಂಬಿಸಲಾಗುತ್ತಿದೆ. ನೀರಿನ ಪ್ರಮಾಣ ಎಷ್ಟು ಬರುತ್ತಿದೆ, ಮುಂದಿನ ಎಷ್ಟು ದಿನಗಳು ನೀರು ಪೂರೈಕೆ ಮಾಡಬಹುದೆಂದು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕೆರೆಯಲ್ಲಿ ನೀರು 9 ಮೀಟರ್ ಇರಬೇಕಾಗಿದ್ದು, ಪ್ರಸ್ತುತ 4 ಅಡಿ ಇರುತ್ತದೆ. ಕೆರೆಗೆ ಮುಂದಿನ ದಿನಗಳಿಗಾಗುವಷ್ಟು ನೀರು ಸಂಗ್ರಹ ಮಾಡಲು ಸೂಚನೆ ನೀಡಿದ ಅವರು, ಜನರು ಸಹ ಬೇಸಿಗೆ ಕಳೆಯುವ ವರೆಗೆ ನೀರಿನ ಮಿತ ಬಳಕೆ ಮಾಡಬೇಕೆಂದು ಮನವಿ ಮಾಡಿದರು.
ಪಾಲಿಕೆ ಆಯುಕ್ತರಾದ ರೇಣುಕಾ, ಡಿಯುಡಿಸಿ ಯೋಜನಾ ನಿರ್ದೇಶಕ ಮಹಾಂತೇಶ್ ಉಪಸ್ಥಿತರಿದ್ದರು.