ಕಲಬುರ್ಗಿ : ಕಟ್ಟಡ ಕಾರ್ಮಿಕರ ಮಹಿಳೆಯರ ಜೋಡಿ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು ಮತ್ತು ಮೃತಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತಉ ನೀಡಬೇಕು ಎಂದು CWFI ಒತ್ತಾಯಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ . ಕಲಬುರ್ಗಿ ಹೊರವಲಯದ ತಾವರಗೇರಾ ಕ್ರಾಸ ಬಳಿ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಕರೆದೊಯ್ದ ಇಬ್ಬರು ಮಹಿಳೆಯರನ್ನು ಭೀಕರವಾಗಿ ಕೊಲೆ ಮಾಡಿರುವ ಹೀನ ಕೃತ್ಯವನ್ನು ಖಂಡಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಲು ಆಗ್ರಹಿಸಿದ್ದಾರೆ.
ಏ.7 ರಂದು ಕಲಬುರಗಿಯ ಗಂಜ್ ನಾಕಾದ ಬಳಿ ಕಟ್ಟಡ ಕಾರ್ಮಿಕರಾದ ಶರಣಮ್ಮ ಗಂಡ ಅಂಬಾದಾಸ್ ಕೇರಿ, ಸಾ: ಕೆರಿ ಅಂಬಲಗಾ ತಾ : ಆಳಂದ ಹಾಗೂ ಚಂದಮ್ಮ ಗಂಡ ಬಾಬುರಾವ್ ತಾಜ ಸುಲ್ತಾನಪೂರ್ ಗ್ರಾಮದ ನಿವಾಸಿಯಾಗಿರುವ ಇಬ್ಬರು ಮಹಿಳೆಯರನ್ನು ಕೆಲ ಗುತ್ತಿಗೆದಾರರು ಹಾಗೂ ಮಾಲೀಕ ವೇಷದಾರಿಗಳು ದಿನಗೂಲಿ ಲೆಕ್ಕದಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ದುಷ್ಕರ್ಮಿಗಳು ಹೊರವಲಯದಲ್ಲಿ ಈ ಇಬ್ಬರು ಕೊಲೆ ಮಾಡಿ ಅವರ ಚಿನ್ನ-ಒಡವೆಗಳು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕೃತ್ಯ ನಡೆದು 03 ದಿನಗಳು ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿರುವುದು ಅತ್ಯಂತ . ಖಂಡನಾರ್ಹ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬರ ಮತ್ತು ಭೀಕರ ಬಿಸಿಲಿನ ನಡುವೆಯೂ ಒಂದೊತ್ತಿನ ಉಟಕ್ಕಾಗಿ ಕಷ್ಟ ಪಡುವ ಸಾವಿರಾರು ಕಾರ್ಮಿಕರ ಜೀವ ಹಾಗೂ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹಾಗೂ ನ್ಯಾಯ ನೀಡಬೇಕಾದ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆಯ ಪ್ರಾದೇಶಿಕ ಆಯುಕ್ತರು ಕೂಡ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವುದು ಅತ್ಯಂತ ವಿಷಾಧದ ಸಂಗತಿ.
ಕೊಲೆಗೀಡಾದ ಇಬ್ಬರು ಮಹಿಳೆಯರಿಗೆ ಕಲ್ಯಾಣ ಮಂಡಳಿಯ ನಿಯಮಗಳನ್ವಯ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೃತಪಟ್ಟ ಮಹಿಳೆಯರ ಪ್ರತಿ ಕುಟುಂಬಕ್ಕೆ ಕನಿಷ್ಟ 10 ಲಕ್ಷ ರೂ. ಪರಿಹಾರ ನೀಡಬೇಕು. ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಕಲಬುರ್ಗಿಯೂ ಸೇರಿ ರಾಜ್ಯದ ಇತರೆಡೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಅಗತ್ಯ ಸುರಕ್ಷತೆ ಹಾಗೂ ಭದ್ರತಾ ವ್ಯವಸ್ಥೆ ಯನ್ನು ಖಾತ್ರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.