ಹರಿಹರ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟವನ್ನು ತಡೆಯಬೇಕೆಂದು ನಗರದ ಗುರುಭವನದಲ್ಲಿ ಗುರುವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಸಮುದಾಯದ ಮುಖಂಡರು ಆಗ್ರಹಿಸಿದರು.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿದೆ. ಅಂಗಡಿ, ಹೋಟಲ್, ಮನೆಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಮಟ್ಕಾ ಜೂಜಾಟದ ಅರ್ಭಟವೂ ಇದೆ. ಮದ್ಯ ಮತ್ತು ಮಟ್ಕಾದ ವ್ಯಸನಕ್ಕೆ ಈಡಾಗಿರುವ ಪರಿಶಿಷ್ಟ ಹಾಗೂ ಇತರೆ ಸಮುದಾಯದ ಯುವಕರ ಬದುಕು ಬರಡಾಗುತ್ತಿದೆ, ಕುಟುಂಬದವರು ಉಪವಾಸಕ್ಕೆ ಈಡಾಗುತ್ತಿದ್ದಾರೆ. ಈ ಜ್ವಲಂತ ಸಮಸ್ಯೆ ನಿವಾರಣೆ ಮಾಡಬೇಕೆಂದು ಸಮುದಾದಯ ಹಲವು ಮುಖಂಡರು ಮಾತನಾಡಿ ಅಧಿಕಾರಿಗಳಿಗೆ ಆಗ್ರಹಿಸಿದರು.
ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಕಡ್ಲೆಗೊಂದಿ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಗ್ರಾಮದ ನಿರ್ವಸತಿಕರಿಗೆ ವಸತಿ ಯೋಜನೆ ರೂಪಿಸಬೇಕು, ಕೊಕ್ಕನೂರು ಗ್ರಾಮದ ಡಾ.ಬಾಬು ಜಗಜೀವನರಾಮ್ ಭವನಕ್ಕೆ ವಿದ್ಯುತ್ ಸೌಲಭ್ಯ, ಬೆಳ್ಳೂಡಿಯಲ್ಲಿ ಅಪೂರ್ಣವಾಗಿರುವ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಬೇಕು, ಭಾನುವಳ್ಳಿಯಲ್ಲಿ ಶಿಥಿಲಗೊಂಡ ಅಂಬೇಡ್ಕರ್ ಭವನ ತೆರವುಗೊಳಿಸಿ ಹೊಸ ಭವನ ನಿರ್ಮಾಣ ಮಾಡಬೇಕಿದೆ ಎಂದರು.
ಮುಖಂಡ ವಿಶ್ವನಾಥ ಮೈಲಾಳ ಮಾತನಾಡಿ, ಈ ಸಭೆಯಲ್ಲಿ ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ. ಈ ಸಭೆ ಕಾಟಾಚರಕ್ಕೆ ನಡೆಸಲಾಗುತ್ತಿದೆ, ಕಾನೂನಿನ ಬೆಂಬಲ ಇದ್ದರೂ ಅಸ್ಪøಷ್ಯರ ನಿರೀಕ್ಷಿತ ಅಭಿವೃದ್ಧಿ ಆಗುತ್ತಿಲ್ಲ ಎಂದ ಆರೋಪಿಸಿದರು.
Read also : ಶಿಕ್ಷಣ ಮನುಷ್ಯನಲ್ಲಿ ವಿವೇಕ ಮತ್ತು ಪ್ರಜ್ಞಾವಂತಿಕೆ ಬೆಳೆಸುವ ಶಕ್ತಿಯಾಗಿದೆ : ಇಮ್ಮಡಿ ಶ್ರೀಗಳು
ಸಂಗೀತ ಕಲಾವಿದ ಅಣ್ಣಪ್ಪ ಅಜ್ಜೇರ್ ಮಾತನಾಡಿ, ಗುತ್ತೂರು ಗ್ರಾಮದಲ್ಲಿ ಪರಿಶಿಷ್ಟರಿಗೆ ರುದ್ರಭೂಮಿ ಇಲ್ಲ, ಮಳೆಗಾದಲ್ಲಿ ನದಿಯಲ್ಲಿ ಪ್ರವಾಹ ಬಂದಾಗ ಮೃತರ ಅಂತ್ಯ ಸಂಸ್ಕಾರ ಮಾಡುವುದು ದುಸ್ತರವಾಗುತ್ತಿದೆ. ತಾಲ್ಲೂಕು ಮತ್ತು ಜಿಲ್ಲಾಡಳಿತ ರುದ್ರಭೂಮಿಗೆ ಜಮೀನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಗ್ರಾಮಾಂತರ ಡಿವೈಎಸ್ ಪಿ ಬಸವರಾಜ್ ಬಿ.ಎಸ್. ಮಾತನಾಡಿ, ಸಭೆಯಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಕ್ರೂಢೀಕರಿಸಿ ಸಂಬಂಧಿತ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಸೂಚಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದೆಂದು ಹೇಳಿದರು.
ಇನ್ ಸ್ಪೆಕ್ಟರ್ ಗಳಾದ ಆರ್.ಎಫ್ ದೇಸಾಯಿ, ಸುರೇಶ್ ಸಗರಿ, ಬಿಇಒ ಡಿ.ದುರುಗಪ್ಪ, ಸಿಡಿಪಿಒ ಪ್ರಿಯದರ್ಶಿನಿ ದಲಿತ ಸಮುದಾಯದ ಮುಖಂಡರಾದ ರಾಜನಹಳ್ಳಿ ನಾಗೇಂದ್ರಪ್ಪ, ಕೆ.ಬಿ.ಮಂಜುನಾಥ್, ಕೊಟ್ರೇಶ್, ಹರಳಹಳ್ಳಿ ಹನುಮಂತಪ್ಪ, ಎ.ಕೆ ಭೂಮೇಶ್, ಎಚ್.ಸುಧಾಕರ, ಕೊತ್ವಾಲ್ ಹನುಮಂತಪ್ಪ, ಬೇವಿನಹಳ್ಳಿ ಶಿವರಾಂ, ಧೂಳೆಹೊಳೆ ಪರಶುರಾಮ್, ತಿಪ್ಪೇಶ್, ಬೆಳ್ಳೂಡಿ ಹಾಲೇಶ್, ಆರ್.ವಿಜಯಕುಮಾರ್, ವೈ.ಬಿ.ಪ್ರಭಾಕರ್, ಸಂತೋಷ ನೋಟದವರ, ಜಿ.ಕೆ.ಪಂಚಾಕ್ಷರಿ ಹಾಗೂ ಇತರರಿದ್ದರು.
