Kannada News |Dinamaanada Hemme | Dinamaana.com | 01-07-2024
‘ಧನಮಯಂ ಜಗತ್’ಹಣವಿಲ್ಲದೇ ಬರಿಗೈಲಿನ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟ. ಮನುಷ್ಯನ ಹುಟ್ಟಿದಾಗಿನಿಂದಾ ಹಿಡಿದು, ಕೊನೆಗೆ ಆತನ ಶವಸಂಸ್ಕಾರದವರೆಗೂ ಹಣದ ಪಾತ್ರ ಬಹು ದೊಡ್ಡದು.
ಸಂಸದರಾಗಿದ್ದು ಪವಾಡ…
ಹೀಗಿರುವಾಗ, ಇಂತಹ ಕಾಲಘಟ್ಟದಲ್ಲಿ ಕಾಸಿಲ್ಲದೇ ಸರ್ಕಾರಿ ಉನ್ನತಾಧಿಕಾರಿಯಾಗಿದ್ದ ವ್ಯಕ್ತಿಯೊಬ್ಬರು ಈ ಬಾರಿಯ/ಈಗಿನ ಕಾಲಮಾನದ ಚುನಾವಣೆಯಲ್ಲಿ ಅದು ಸಂಸದರಾಗಿ ಗೆದ್ದು ಬರುತ್ತಾರೆಂದರೆ ಅದೊಂದು ಪವಾಡ ಸದೃಶ್ಯ ಸನ್ನಿವೇಶವೇ ಅಲ್ಲವೇ!.
ಕೈಯಲ್ಲಿ ಕಾಸುಯಿಲ್ಲದೆ ಗೆದ್ದ ಸಾಧಕ …
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬರಬೇಕಾದರೆ ಲಕ್ಷಗಳ ಲೆಕ್ಕದಲ್ಲಿ, ಕೊನೇಪಕ್ಷ ಕಾರ್ಪೋರೇಟರ್ ಎಲೆಕ್ಷನ್‌ನಲ್ಲಿ ಆತ ಗೆಲುವು ಸಾಧಿಸಬೇಕೆಂದರೆ, ಈವತ್ತಿನ ಕಾಲದಲ್ಲಿ ಕೋಟಿ ಲೆಕ್ಕದಲ್ಲಿ, ಶಾಸಕ/ಸಂಸದರಾಗಿ ಆಯ್ಕೆಯಾಗಲೂ ಎರಡಂಕಿ ಕೋಟಿ ರೂ. ಕೆಲವೆಡೆ ಮೂರಂಕಿಯ ಕೋಟಿ ರೂ.ಗಳ ಹಣ ವ್ಯಯವಾಗುತ್ತದೆ. ಮೇಲಾಗಿ ರಾಜಕೀಯದ ಕಟ್ಟಕಡೆಯ ಏನೇನೋ ಅಸ್ತ್ರದವರೆಗೂ ಬಳಕೆಯಾಗುತ್ತದಲ್ಲದೇ, ಕೆಟ್ಟಕೆಟ್ಟ ತಂತ್ರಗಳು-ಕುತಂತ್ರಗಳು ಚುನಾವಣೆಯ ಅಖಾಡದಲ್ಲಿ ಚಲಾಯಿಸಲ್ಪಡುತ್ತದೆ.
ಹೀಗೆ ಕುಟಿಲ ರಾಜಕೀಯ ತಂತ್ರಗಾರಿಕೆಯಲ್ಲಿ, ಧನಬಲ-ಜನಬಲದ ಪ್ರಭಾವದಲ್ಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ವಿಜಯ ಸಾಧಿಸಿ ಬರುವ ಈವತ್ತಿನ ಕಾಲದಲ್ಲಿ, ಇದ್ಯಾವ ಬಲವನ್ನೂ ಹೊಂದಿರದ ದಲಿತ ತರುಣನೋರ್ವ ಕೇವಲ ತನ್ನ ಐಎಎಸ್ ಪದವಿಯ, ಪ್ರಾಮಾಣಿಕ ಸೇವಾ ಹಿನ್ನೆಲೆಯ ಮೌಲ್ಯಗಳಿಂದಷ್ಟೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬರುತ್ತಾರೆಂದರೆ… ನಂಬುವುದು ಕಷ್ಟ ಸಾಧ್ಯವೇ ಅಲ್ಲವೇ? ಅಂತಹ ಅಪರೂಪದ ವ್ಯಕ್ತಿಯೊಬ್ಬರ ಪರಿಚಯವನ್ನು ತಡವಾಗಿದ್ದರೂ, ಅಡವಾಗಿಯೇ ಈ ರೀತಿ ಮಾಡಿಕೊಳ್ಳಬಹುದು…
ಕರ್ನಾಟಕ ಕೇಡರ್ ಆಯ್ಕೆ ಮಾಡಿಕೊಂಡು ಉಡುಪಿಯ ಜಿಲ್ಲಾಧಿಕಾರಿಯಾಗಿ ಬಂದಂತಹ ಈ ಸೀದಾಸಾದ ಅಧಿಕಾರಿ… ಸಸಿಕಾಂತ ಸೆಂಥಿಲ್ ಎಂಬ ಐದೂವರೆ ಅಡಿಯ ಸಾಧಾರಣ ಎತ್ತರ, ಗೌರವರ್ಣವಲ್ಲದ ಕಪ್ಪು ಬಣ್ಣ, ಬಟ್ಟಲುಗಣ್ಣುಗಳ, ಬ್ಯಾಗಿ ಪ್ಯಾಂಟಿನ ತರುಣ ಡಿಸಿ ಆತ.
ತನ್ನ ಮಡದಿಯಾದವಳದ್ದೂ ಅದೇ ರೀತಿಯ ಹೊಂಗನಸು. ಒಂದು ಚಿಕ್ಕ ಚೊಕ್ಕದಾದ ಕುಟುಂಬಕ್ಕೆ ಹೇಳಿ ಮಾಡಿಸಿದಂತಹ ದಾಂಪತ್ಯದ ಜೋಡಿಯಿದು! ಇಂತಿಪ್ಪ ಐಎಎಸ್ ಅಧಿಕಾರಿಗೆ ವಿಲಕ್ಷಣ ವ್ಯವಸ್ಥೆಯಲ್ಲಿ ಏನಾದರೂ ಸಾಧಿಸಬೇಕೆಂಬ ಆಲೋಚನೆ ಚಿಗುರೊಡೆಯುತ್ತದೆ.
ವ್ಯವಸ್ಥೆಯ ವಿರುದ್ದ ಈಜುವ ಮಹಾದಾಸೆ
“ಆರಂಭದಲ್ಲಿ ತಾನಂದುಕೊಂಡಂತೆ ಏನೂ ನಡೆಯುತ್ತಿಲ್ಲ ಎಂಬ ಅಳುಕು ಭಾವವಾದರೂ, ಐಎಎಸ್ ಪದವಿಯನ್ನು ತನ್ನದಾಗಿಸಿಕೊಂಡು ಮುಂದಿನ ಭವ್ಯ ಕನಸನ್ನು ನನಸಾಗಿಸಿಕೊಳ್ಳುವ ಹಂಬಲ ತರುಣ ಸಸಿಕಾಂತ್ ಸೆಂಥಿಲ್‌ನದ್ದು. ಹೀಗೆ ಹೆಜ್ಜೆಹೆಜ್ಜೆಗೂ ತಮ್ಮ ಪ್ರಯತ್ನದಲ್ಲಿ ಅಧೀರನಾಗುವಂತೆ ಮಾಡುವ ಈ ವ್ಯವಸ್ಥೆಯೆಂಬ ಪ್ರವಾಹದ ಎದುರಾಗಿ ಈಜ ಬೇಕೆಂಬ ಮಹದಾಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ.
ಹಾಗಾಗಿ ನಮ್ಮಲ್ಲಿನ ಈ ಕಲುಷಿತ ರಾಜಕೀಯ ವ್ಯವಸ್ಥೆಯನ್ನೇ ಮೊದಲು ಬದಲಿಸುವ ನಿಟ್ಟಿನಲ್ಲಿ, ಅಲ್ಲಿ ನೈಜ ಜನಪರವಾದ-ಪ್ರಜಾತಂತ್ರ ವ್ಯವಸ್ಥೆಯ ಮರುಸ್ಥಾಪನೆಯ ಮಹದುದ್ದೇಶದಿಂದ ರಾಜಕೀಯಕ್ಕೆ ಧುಮುಕುವ, ಅಲ್ಲಿ ಸೆಣೆಸುವ ಸದುದ್ದೇಶದಿಂದಲೇ ಚುನಾವಣಾ ಕಣಕ್ಕೆ ಜಿಗಿತ” ಅದಕ್ಕನುಗುಣವಾಗಿ ಅಲ್ಪಸಂಖ್ಯಾತರ-ದಲಿತರ ಮೇಲೆ ನರೇಂದ್ರ ಮೋದಿಯವರ ನೇತೃತ್ವದ ಓಆಂ ಸರ್ಕಾರ ದೌರ್ಜನ್ಯವೆಸಗುತ್ತಿದೆಯೆಂಬ ಮಾತುಗಳು…ಸರಿ, ಇದು ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಸಾಧನಾಪಥದಲ್ಲಿ ಕಾಣುತ್ತಾ ಬಂದ ಸ್ವಪ್ನಗಳು-ಅವು ಸಾಕಾರಗೊಂಡ ರೀತಿ…
ಆ ನಂತರದಲ್ಲಿ ಈ ಐಎಎಸ್ ಅಧಿಕಾರಿಯ ಕೆಲವು ನಿಂತ ನಿಲುವಲ್ಲಾಗುತ್ತಾ ಬಂದಂತಹ ಬದಲಾವಣೆಗಳು, ಆ ಕ್ಷಣಕ್ಕೆ ತೆಗೆದುಕೊಂಡು ಬಂದಂತಹ ನಿರ್ಧಾರಗಳು ನಿಜಕ್ಕೂ ರೋಚಕವೆನಿಸುವಂತಹದ್ದು!
ಸೇವೆಗಾಗಿ ಮಕ್ಕಳೇ ಬೇಡ…
ಆವತ್ತು ಅವರೇ ಅಂದುಕೊಂಡಂತೆ, ತಮ್ಮ ಮಡದಿಯೊಂದಿಗೆ ತಮ್ಮ ನಿರ್ಧಾರಗಳನ್ನು ಮುಂದಿಡುತ್ತಾ “ಮಕ್ಕಳಿದ್ದರೆ ನಮ್ಮ ಕನಸಿಗೆ ತೊಡಕಾಗುವರು, ಮಕ್ಕಳು ಬೇಡ ನಾನು ರಾಜೀನಾಮೆ ಸಲ್ಲಿಸುತ್ತೇನೆ, ನೀನು ಕೆಲಸ ಮಾಡು… ನಿನ್ನ ಸಂಬಳದಲ್ಲಿ ನನ್ನನ್ನು ಸಾಕು, ನಾನು ಡಿಸಿಯಾಗಿ ಗಳಿಸಿದ್ದು ಇದೊಂದು ಬುಲೆಟ್. ಇದನ್ನು ಯಾರಿಗಾದರೂ ಕೊಟ್ಟು ಬಿಡು. ಡಿಸಿ ಕೆಲಸವೇ ಬೇಡವೆನ್ನುವುದಾದರೆ ಅದರ ಸಂಬಳದಿಂದ ಕೊಂಡ ಈ ವಾಹನವು ಬೇಡ, ಅದನ್ನೂ ಕೊಟ್ಟು ಬಿಡು ಎಂದು ಸೂಟ್‌ಕೇಸ್ ಹಿಡಿದು ಡಿಸಿ ಬಂಗ್ಲೆಯಿಂದ ಹೊರಬಿದ್ದಿದ್ದರು ಈ ಐಎಎಸ್ ಅಧಿಕಾರಿ.
ಹಾಗೆ ಹೊರಗೆ ಕಾಲಿಡುತ್ತಲೇ ತೆರೆದುಕೊಂಡಿದ್ದು ಬೇರೆಯದೇ ವಾತಾವರಣ! ಹೇಳಿ ಕೇಳಿ, ರಾಜಕೀಯ ರಂಗಕ್ಕೆ ಪ್ರವೇಶಿಸಲು ಉದ್ದೇಶಿಸಿದ್ದ ಈ ಮಾಜಿ ಐಎಎಸ್ ಅಧಿಕಾರಿಯನ್ನು, ಅದಾಗಲೇ ಕೆಲ ರಾಜಕೀಯ ಪಕ್ಷಗಳು ಕೈ ಬೀಸಿ ಕರೆಯತೊಡಗಿದವು. ಆದರೆ, ಈತ ಯೋಚಿಸಿದ್ದೇ ಬೇರೆ… ‘ಜಾತಿ ಧರ್ಮಗಳ ಆಧಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳು ಬೇಡ ‘ ಒಂದು ಚೈತನ್ಯ ಕಳೆದುಕೊಂಡು ನೇಪಥ್ಯಕ್ಕೆ ಸರಿದಂತಹ ಪಕ್ಷವನ್ನೇ ಸೇರಿಕೊಂಡು, ಅಲ್ಲಿಂದ ಸ್ವಸಾಮರ್ಥ್ಯದ ಪಯಣಕ್ಕೆ, ಸವಾಲೆನಿಸುವಂತಹ ಸಾಹಸೀ ಕಾರ್ಯಕ್ಕೆ ಮುಂದಾಗುವ ಮನಸ್ಸು ಮಾಡುತ್ತಾರೆ.
ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಜೀವ ..
ಅದಕ್ಕೆ ತಕ್ಕ ಹಾಗೆ ತಮಿಳುನಾಡಿನಲ್ಲಿ ಕಾಂಗ್ರೆಸ್ ತಳ ಹಿಡಿದ ಪಕ್ಷವಾಗಿತ್ತು, ಆಗ ಈ ಐಎಎಸ್ ಅಧಿಕಾರಿ ಕಾರ್ಯೋನ್ಮುಖರಾಗುತ್ತಾರೆ ನೋಡಿ… ಹೇಗೂ ಕಾಂಗ್ರೆಸ್ ಒಂದು ಐತಿಹಾಸಿಕ ಪಕ್ಷ, ಅದಕ್ಕೆ ಬ್ರಿಟಿಷ್ ಸರ್ಕಾರದ ಕೆಲವು ಕಟ್ಟುನಿಟ್ಟಿನ ಆಡಳಿತಾತ್ಮಕ ಚಹರೆಯ ಮೊಹರಿದೆ, ಹಾಳುಬಿದ್ದು ಹೋದ ಆ ಪಕ್ಷದ ತತ್ವದ ಸಿದ್ಧಾಂತಕ್ಕೆ ಮತ್ತೆ ಜೀವಕಳೆ ತುಂಬುವುದೇ ಸವಾಲ್… ಎಂಬಿತ್ಯಾದಿ ನಿಲುವುಗಳನ್ನು ತಾಳಿದವರೇ ಕಾಂಗ್ರೆಸ್‌ನಂತಹ ಪಕ್ಷದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.
ಅದೇ ಬಗೆಯಾಗಿ ತಮಿಳುನಾಡಿನ ಅಸೆಂಬ್ಲಿ ಚುನಾವಣೆಯಲ್ಲಿ ಶೂನ್ಯ ಮಟ್ಟದಲ್ಲಿದ್ದ ಕಾಂಗ್ರೆಸ್‌ಗೆ ನಂಬಲ ಅಸಾಧ್ಯವಾದ ಸ್ಥಾನವನ್ನು ದೊರಕಿಸಿಕೊಟ್ಟು, ಅದರ ನಾಯಕರಾದ ರಾಹುಲ್ ಗಾಂಧಿಯವರ ಕಣ್ಣಿಗೆ ಬಿದ್ದರಲ್ಲದೇ ಅವರ ಆತ್ಮೀಯ ವಲಯದಲ್ಲಿ ಒಬ್ಬರಾಗುತ್ತಾರೆ.
ಕರುನಾಡಿನಲ್ಲಿ ವಾರ್ ರೂಂ ಹೆಡ್ ..
ಸರಿ, ಅದಕ್ಕೆ ತಕ್ಕ ಹಾಗೆ ಕಳೆದ ವರ್ಷ ಕರುನಾಡಿನಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ತಡಮಾಡದೇ ಸೆಂಥಿಲ್‌ರವರಿಗೆ, “ಕರ್ನಾಟಕದಲ್ಲಿ ನಿಮ್ಮ ಚಾಣಾಕ್ಷತನವನ್ನು ತೋರಿಸಿರಿ, ವಾರ್ ರೂಮ್ ಹೆಡ್ ಆಗಿರಿಎಂದರು ರಾಹುಲ್ ಗಾಂಧಿ.
ಅಲ್ಲೂ ತಮ್ಮ ಕೈ ಚಳಕ ತೋರಿಸಿ, ಕರ್ನಾಟಕದಲ್ಲಿ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಲೋಕಸಭೆಯ ಚುನಾವಣೆ ಬಂತು “ದೆಹಲಿಗೆ ಬಂದು ವಾರ್ ರೂಂ ನೋಡಿಕೊಳ್ಳಿ” ಎಂದಿತು ಪಕ್ಷ, ಅದಕ್ಕೆ ಸಮ್ಮತಿಸುತ್ತಾರೆ ಸೆಂಥಿಲ್.
ಅದು ಮೊನ್ನೆಯ ಲೋಕಸಭಾ ಚುನಾವಣೆಯ ಸನ್ನಿಹಿತ ಸಂದರ್ಭ, ಇನ್ನೇನು ನಾಮಪತ್ರ ಸಲ್ಲಿಕೆಗೆ ನಾಲ್ಕು ದಿನಗಳಷ್ಟೇ ಇರುವಂತಹದ್ದು, ಮುಂದಿನ ವಿಮಾನದಲ್ಲಿ ನಿಮ್ಮ ರಾಜ್ಯವಾದ ತಮಿಳುನಾಡಿಗೆ ಹೋಗಿ, ತಿರುವಳ್ಳೂರು ಕ್ಷೇತ್ರಕ್ಕೆ ನೀವೇ ಅಭ್ಯರ್ಥಿ… ಕೂಡಲೇ ನಾವು ಹೇಳಿದ ಕ್ಷೇತ್ರಕ್ಕೆ ಹೋಗಿ ಇಳಿಯಿರಿ ಎಂದು ಆಜ್ಞಾಪಿಸುತ್ತದೆ ಹೈಕಮಾಂಡ್. ಅಂತಹ ಸಂದರ್ಭದಲ್ಲಿ ಹಣಕಾಸಿನ ಅನುಕೂಲವಿಲ್ಲದಿದ್ದರೂ ಸೆಂಥಿಲ್‌ರವರ ಪತ್ನಿ ವಿಮಾನದ ಟಿಕೆಟ್ ಬುಕ್ ಮಾಡುತ್ತಾರೆ, ಭವಿಷ್ಯನಿಧಿಗೆ ಎಂದು ಜೋಪಾನ ಮಾಡಿದ್ದ ಒಂದಿಷ್ಟು ಹಣ ಹೀಗೆ ಖರ್ಚಾಗುತ್ತದೆ!
ನೀವೇ ಹಣ ಹೊಂದಿಸಿಕೊಂಡು ಗೆದ್ದು ಬನ್ನಿ….
ಲೋಕಸಭಾ ಚುನಾವಣಾ ಕಣಕ್ಕೆ ಧುಮುಕುವಂತಹ ಅಭ್ಯರ್ಥಿಯೋರ್ವ ಹೀಗೆ ಕೈಯಲ್ಲಿ “ಮೂರು ಮುಕ್ಕಾಲು ರೂಪಾಯಿ”ಯಂತಹ ಚಿಲ್ಲರೆ ಹಣವಿಟ್ಟುಕೊಂಡು ಅದ್ಯಾವ ಧೈರ್ಯದ ಮೇಲೆ ಈ ಮಕ್ಕಳು ಮರಿಯಿಲ್ಲದ ಮನುಷ್ಯ ಮುಂದಡಿಯಿಟ್ಟಿರಬಹುದು ಯೋಚಿಸಿ? ಅಲ್ಲದೇ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಮೋದಿ ಸರಕಾರ ಬೇರೆ ಮುಟ್ಟುಗೋಲು ಹಾಕಿತ್ತು. ಹಾಗಾಗಿ ‘ನೀವೇ ಹಣ ಹೊಂದಿಸಿಕೊಂಡು ಗೆದ್ದು ಬನ್ನಿ ಎಂದಿತು’ ಕಾಂಗ್ರೆಸ್ ಪಕ್ಷ.
“ಜೀವನದಲ್ಲಿ ಯಾರೆದುರೂ ಕೈ ಚಾಚಿಲ್ಲ, ಚಾಚುವುದು ಇಲ್ಲ” ಎಂದು ಬಿಟ್ಟರು ಮಾಜಿ ಜಿಲ್ಲಾಧಿಕಾರಿ. ಸರಿ, ಸಮಾನ ಮನಸ್ಕರಾದ ಗೆಳೆಯರೊಂದಿಗೆ ನೋಡೋಣ ಎಂದು ಚುನಾವಣಾ ಪ್ರಚಾರಕ್ಕೆ ಹೋದರು.
ಮಾರಲು ಮನೆಯಿದೆ …
ಅಲ್ಲಿ ಕಂಡದ್ದು, ಅದ್ಭುತ ಉತ್ಸಾಹ… “ಕಲೆಕ್ಟರ್ ಗೆದ್ದಂತೆಯೇ ; ಆದರೆ, ನಾವು ಚಿಂತಿಸುತ್ತಿರುವುದು 5 ಲಕ್ಷದ ಅಂತರವನ್ನು”ಎಂದಿದ್ದರು ಮಿತ್ರ ಪಕ್ಷವಾದ ಡಿಎಮ್‌ಕೆಯ ಜಿಲ್ಲಾಧ್ಯಕ್ಷರು. “ಖರ್ಚಿಗೇನು ಮಾಡುತ್ತೀರಿ” ಎಂದು ಸ್ನೇಹ ಬಳಗ ಕೇಳಿದಾಗ “ಏನು ಮಾಡುವುದು ಮಾರಲು ಊರಲ್ಲೊಂದು ಮನೆಯಿದೆ, ಯಾರೂ ತಗೆದುಕೊಳ್ಳುತ್ತಿಲ್ಲ” ಎಂಬ ಈ ಮಾಜಿ ಐಎಎಸ್ ಅಧಿಕಾರಿಯ ಮಾತಿಗೆ…
ಸ್ನೇಹಿತ ವರ್ಗವೆಲ್ಲಾ ಭಾವುಕರಾಗಿ ಕಣ್ಣೀರಾಗಿ ಬಿಡುತ್ತಾರೆ! ಇಂತಹ ಎಲ್ಲಾ ಸನ್ನಿವೇಶಗಳು ಚುನಾವಣೆ ಗೆದ್ದು ಬಂದ ‘ಬರಿಗೈ ದಾಸ ಸಸಿಕಾಂತ್ ಸೆಂಥಿಲ್’ ರಿವೈಂಡ್ ಮಾಡಿ ನೋಡಿದಾಗ… ಹೆಮ್ಮೆಯಿಂದ ಈ ತರುಣನ ಎದೆ ಈಷ್ಟಗಲವಾಗುತ್ತೆ! ತನ್ನ ಸಾಹಸಗಾಥೆಗೆ ಸಂದ ಫಲವಾಗಿ ಇವರಿಗೆ ಲಭಿಸಿದಂತಹ ಮತ 796956, ಹಾಗೆಯೇ ಲೀಡ್‌ನತ್ತ ಗಮನಹರಿಸಿದಾಗ ಗೆದ್ದಿರುವ ಮತಗಳ ಅಂತರ 4,79,000. ವಾರೇವ್ಹಾ ಸಸಿಕಾಂತ್ ಸೆಂಥಿಲ್‌ರವರೇ, ಬಲುದೊಡ್ಡ ಹೊಂಗನಸನ್ನು ಹೊತ್ತವರು, ಬಲು ನಿಸ್ವಾರ್ಥದ ಸೇವೆಯಲ್ಲಿ ವಿಶ್ವಾಸವಿಟ್ಟುಕೊಂಡು ಬಂದ, ಈ ಎಲ್ಲಾ ಮೌಲ್ಯಗಳಿಗೆ ಬರಿಗೈ ದಾಸನಿಗೂ ಭರ್ಜರಿ ಗೆಲುವು ಪ್ರಾಪ್ತವಾಗಬಲ್ಲದು ಎಂಬುವುದನ್ನು ನಿರೂಪಿಸಿಕೊಟ್ಟಿದ್ದೀರಿ… “ಹ್ಯಾಟ್ಸಾಫ್ ಟು ಯೂ ಸರ್”…
-ಬಿ.ಆರ್.ತಾರಾ