ದಾವಣಗೆರೆ ಸೆ.25 (Davanagere) : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳಾ ರಕ್ಷಣೆಗೆ ಮೊದಲ ಆದ್ಯತೆಯಾಗಿದ್ದು ಮಹಿಳೆಯರ ರಕ್ಷಣೆಗೆ ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ ದುರ್ಗಾಪಡೆ ಹೆಚ್ಚಿಸಬೇಕೆಂದು ಸಂಸದರಾದ ಡಾ;ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಬುಧವಾರ (ಸೆ.25) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನರು ಶಾಂತಿ, ನೆಮ್ಮದಿಯಿಂದಿರಲು ಕಾನೂನು ಸುವ್ಯವಸ್ಥೆ ಚನ್ನಾಗಿರಬೇಕು. ವೈದ್ಯರು, ಮಹಿಳೆಯರು ಹಾಗೂ ಸಾರ್ವಜನಿಕರ ಸುರಕ್ಷತೆ ಬಹಳ ಮುಖ್ಯವಾಗಿದ್ದು ಇದಕ್ಕಾಗಿ ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ, ಪಟ್ಟಣಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹೆಚ್ಚು ಅಳವಡಿಸಬೇಕು. ಮುಂದಿನ ದಿನಗಳಲ್ಲಿ ದಸರಾ ಹಬ್ಬ ಸೇರಿದಂತೆ ಅನೇಕ ಕಡೆ ಗಣೇಶಮೂರ್ತಿ ವಿಸರ್ಜನೆ ಇರುವುದರಿಂದ ಹೆಚ್ಚಿನ ನಿಗಾವಹಿಸಬೇಕು. ಕೆಲವು ಗ್ರಾಮೀಣ ಭಾಗದಲ್ಲಿ ಮನೆಯಿಂದ ಹೋದ ಒಂದು ಗಂಟೆಯಲ್ಲಿ ಕಳ್ಳತನ ಮಾಡಲಾಗಿದೆ ಎಂಬ ವರದಿಯಾಗಿದೆ. ಇದಾಗದಂತೆ ತಡೆಗಟ್ಟುವ ಮೂಲಕ ಮಹಿಳೆಯರ ಸರಗಳ್ಳತನ, ಮಹಿಳೆಯರು ಒಂಟಿಯಾಗಿ ಹೋಗುವಾಗ ಬೆದರಿಕೆ ಒಡ್ಡುವವರ ಮೇಲೆ ನಿಗಾವಹಿಸಲು ಕ್ಯಾಮೆರಾಗಳನ್ನು ಹೆಚ್ಚಳ ಮಾಡಲು ತಿಳಿಸಿ ಇದಕ್ಕಾಗಿ ಅಗತ್ಯವಿರುವ ಅನುದಾನದ ಅವಕಾಶ ಮಾಡಿಕೊಳ್ಳಲು ತಿಳಿಸಿದರು.
ವೈದ್ಯರ ಹಾಗೂ ಮಹಿಳಾ ವೈದ್ಯರ ಸುರಕ್ಷತೆಗಾಗಿ ಚಿಗಟೇರಿ ಆಸ್ಪತ್ರೆ ಸೇರಿದಂತೆ ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ರಾತ್ರಿವೇಳೆ ಚಿಗಟೇರಿ ಆಸ್ಪತ್ರೆಯಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲು ತಿಳಿಸಿ ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳು ಕ್ರಮವಹಿಸಬೇಕೆಂದರು.
Read also : Davanagere | ನೇಕಾರ ಸಮ್ಮಾನ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ
ಜನಸ್ನೇಹಿ ಇಲಾಖೆಗಳಾಗಲಿ; ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಸರ್ಕಾರಿ ಇಲಾಖೆಗಳಿಗೆ ಆಗಮಿಸಲಿದ್ದು ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಅಲ್ಲಿ ಸಾರ್ವಜನಿಕರು ಶೌಚಾಲಯಗಳ ಬಳಕೆಗೆ ಅವಕಾಶ ಮಾಡಿಕೊಟ್ಟು ಇವುಗಳ ನಿರ್ವಹಣೆ ಮಾಡಬೇಕು. ಸರ್ಕಾರಿ ಇಲಾಖೆಗಳಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವ ಮೂಲಕ ಅವರಿಗೆ ಬೇಕಾಗಿರುವ ಮಾಹಿತಿಯನ್ನು ನೀಡುವ ಮೂಲಕ ಸಂಕಷ್ಟದಲ್ಲಿದ್ದಲ್ಲಿ ಅವರಿಗೆ ಸಿಗಬಹುದಾದ ಯೋಜನೆಗಳ ಮಾಹಿತಿಯನ್ನು ನೀಡಬೇಕು. ಇಲಾಖೆಗಳಿಗೆ ಭೇಟಿ ನೀಡಿದ ಸಾರ್ವಜನಿಕರು ಅರ್ಹರಿದ್ದಲ್ಲೂ ಸೌಲಭ್ಯಕ್ಕಾಗಿ ಜನಪ್ರತಿನಿಧಿಗಳ ಬಳಿ ಬರುವಂತಾಗಬಾರದು ಎಂದರು.
ಪಶುಸಂಗೋಪನಾ ಚಿಕಿತ್ಸಾ ಸೌಲಭ್ಯ ಹೆಚ್ಚಳಕ್ಕೆ ಸೂಚನೆ; ಜಿಲ್ಲೆಯು ಹೈನುಗಾರಿಕೆಯಲ್ಲಿಯು ಮುಂದಿದ್ದು ಹಸು, ಎಮ್ಮೆ, ಕುರಿಗಳ ಸಾಕಾಣಿಕೆ ಮಾಡುತ್ತಿದ್ದಾರೆ. ಜಾನುವಾರುಗಳು ವಿವಿಧ ಖಾಯಿಲೆಗಳಿಗೆ ತುತ್ತಾದಾಗ ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ಸ್ಥಿತಿ ಇದೆ ಎಂದು ಜನರು ಕೇಳುತ್ತಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿನ 153 ಪಶು ಚಿಕಿತ್ಸಾಲಯಗಳಲ್ಲಿ ಇರುವ ಸಿಬ್ಬಂದಿಗಳಿಗೆ ತರಬೇತಿ ನೀಡುವುದು ಮತ್ತು ಮೈತ್ರಿ, ಪಶುಸಖಿಗಳಿಗೆ ತರಬೇತಿ ಕೊಡಿಸಿ ರೈತರ ಜಾನುವಾರುಗಳ ಚಿಕಿತ್ಸೆಗೆ ಕ್ರಮ ವಹಿಸಲು ಪಶುಸಂಗೋಪನಾ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಸಂಸದರ ಆದರ್ಶಗ್ರಾಮ ಆಯ್ಕೆ ಮಾಡಲು ಸೂಚನೆ; ಜಿಲ್ಲೆಯಲ್ಲಿನ ಎಲ್ಲಾ ತಾಲ್ಲೂಕುಗಳಲ್ಲಿ ಒಂದು ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಬೇಕು. ಈ ಗ್ರಾಮ ಹೆಚ್ಚು ಜನಸಂಖ್ಯೆಯಿಂದ ಕೂಡಿದ್ದು ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರಬೇಕು. ಅಂತಹ ಗ್ರಾಮ ಆಯ್ಕೆ ಮಾಡಬೇಕು, ಈ ಸಂಸದರ ಆದರ್ಶಗ್ರಾಮ ಯೋಜನೆಗೆ ಯಾವುದೇ ಪ್ರತ್ಯೇಕ ಅನುದಾನ ಇರುವುದಿಲ್ಲ. ಇರುವ ಯೋಜನೆಗಳನ್ನೆ ಬಳಕೆ ಮಾಡಿಕೊಂಡು ಅಲ್ಲಿ ಎಲ್ಲಾ ವಲಯಗಳಲ್ಲಿ ಅಭಿವೃದ್ದಿ ಮಾಡುವುದೇ ಇದರ ವಿಶೇಷವಾಗಿದೆ ಎಂದರು.
ಶುದ್ದ ಕುಡಿಯುವ ನೀರು ಪೂರೈಸಿ; ಗ್ರಾಮೀಣ ಭಾಗ ಸೇರಿದಂತೆ ನಗರ, ಪಟ್ಟಣ ಪ್ರದೇಶದಲ್ಲಿನ ಓವರ್‍ಹೆಡ್ ಟ್ಯಾಂಕ್‍ಗಳ ಸ್ವಚ್ಛತೆ ಮಾಡಿ ಕ್ಲೋರಿನೇಷನ್ ಮಾಡಿ, ಪೈಪ್ ಒಡೆದು ನೀರು ಸೋರಿಕೆಯಾಗುತಿದ್ದಲ್ಲಿ ಅದನ್ನು ಸರಿಪಡಿಸಿ ಆಗಿಂದಾಗ್ಗೆ ನೀರಿನ ಪರೀಕ್ಷೆ ಮಾಡಿಸಬೇಕು. ಹೊನ್ನಾಳಿ ತಾ; ಕತ್ತಿಗೆ ಗ್ರಾಮಕ್ಕೆ ಹೋದಾಗ ಅಲ್ಲಿನ ಜನರು ಪ್ಲೋರೈಡ್ ಅಂಶ ಹೆಚ್ಚಿದ್ದರಿಂದ ಕುಡಿಯುವ ನೀರಿನ ತೊಂದರೆಯಾಗಿದೆ ಎಂದು ನನ್ನ ಗಮನಕ್ಕೆ ತಂದಿದ್ದಾರೆ ಎಂದಾಗ ಸಿಇಓ ಅವರು ಶುದ್ದ ಕುಡಿಯುವ ನೀರಿನ ಘಟಕ ಈ ಗ್ರಾಮಕ್ಕೆ ನೀಡಲಾಗುತ್ತದೆ ಎಂದರು.
ವಿದ್ಯಾರ್ಥಿ ಸಾಲ, ಪಿಂಚಣಿ ಹಣ ಸಾಲಕ್ಕೆ ಮುರಿದುಕೊಳ್ಳದಿರಲು ಸೂಚನೆ; ಪ್ರತಿಭಾನ್ವಿತ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‍ಗಳ ವ್ಯಾಸಂಗಕ್ಕೆ ಹೋಗಲು ಬ್ಯಾಂಕ್‍ಗಳಿಂದ ಯಾವುದೇ ಷರತ್ತುಗಳಿಲ್ಲದೇ ಶೈಕ್ಷಣಿಕ ಸಾಲ ಕೊಡಬೇಕು. ಆದರೆ ಕೆಲವು ಬ್ಯಾಂಕ್‍ಗಳು ಇಂತಹ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನೆ ನೀಡುವುದಿಲ್ಲ. ಬಾಪೂಜಿಯಲ್ಲಿ ಅಂತಿಮ ವರ್ಷದಲ್ಲಿ ಬಿಇ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ತಂದೆ, ತಾಯಿ ಇಲ್ಲ, ಈ ವಿದ್ಯಾರ್ಥಿನಿ ಪ್ರವೇಶ ಕೈಬಿಟ್ಟು ಹೋದಂತಹ ವಿಷಯ ಕೇಳಿದಾಗ ನೋವುಂಟಾಯಿತು. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳಿಗೆ ಲೀಡ್ ಬ್ಯಾಂಕ್‍ನಿಂದ ಸರಿಯಾದ ನಿರ್ದೇಶನ ನೀಡಲು ತಿಳಿಸಿದರು.
ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ನೀಡಲಾಗುತ್ತಿದೆ, ಆದರೆ ಬ್ಯಾಂಕ್‍ನವರು ಅವರ ಸಾಲಕ್ಕೆ ಮುರಿದುಕೊಳ್ಳುತ್ತಿದ್ದಾರೆ ಎಂಬ ಸಾಕಷ್ಟು ದೂರುಗಳಿವೆ. ಮಾಸಾಶನವನ್ನು ಅವರ ಜೀವನ ನಿರ್ವಹಣೆಗಾಗಿ ಸರ್ಕಾರ ಸಾಮಾಜಿಕ ಭದ್ರತೆಗಾಗಿ ನೀಡುತ್ತಿದೆ. ಈ ಹಣವನ್ನು ಅವರ ಸಾಲಕ್ಕೆ ಜಮಾ ಮಾಡಿಕೊಳ್ಳುವ ಕ್ರಮ ಸರಿಯಲ್ಲ ಎಂದಾಗ ಜಿಲ್ಲಾಧಿಕಾರಿಯವರು ಸಾಲಕ್ಕೆ ಮುರಿದುಕೊಂಡ ಓರ್ವ ಶಾಖೆಯ ಬ್ಯಾಂಕ್ ಮ್ಯಾನೇಜರ್ ಮೇಲೆ ಆರ್.ಬಿ.ಐ.ಗೆ ವರದಿ ಮಾಡಲಾಗಿದೆ ಎಂದರು.
ಗುಣಾತ್ಮಕ ಕಾಮಗಾರಿ, ಪಾರದರ್ಶಕತೆಗೆ ಒತ್ತು ; ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗುವ ಅಭಿವೃದ್ದಿ ಕಾಮಗಾರಿಗಳು ಗುಣಾತ್ಮಕವಾಗಿರಬೇಕು. ಮತ್ತು ಟೆಂಡರ್‍ನಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗಳಾಗಬಾರದು. ಸಾರ್ವಜನಿಕರು ಸಮಸ್ಯೆ ತರುವಂತಿರಬಾರದು. ಪ್ರತಿ ತ್ರೈಮಾಸಿಕದಲ್ಲಿ ದಿಶಾ ಸಭೆ ನಡೆಸಿ ಕೇಂದ್ರ ಪುರಸ್ಕøತ ಯೋಜನೆಗಳ ಸಮಗ್ರವಾಗಿ ಪರಿಶೀಲನೆ ನಡೆಸಲಾಗುತ್ತದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ಕುಟುಂಬದಂತೆ ಕೆಲಸ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಿದಾಗ ಜನರು ನೆಮ್ಮದಿಯಿಂದಿರಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.