ದಾವಣಗೆರೆ : ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (AIBEA) ಸುದೀರ್ಘವಾದ ಹೋರಾಟದ ಫಲವಾಗಿ 1969 ರ ಜುಲೈ 19 ರಂದು ಜಾರಿಗೆ ಬಂದ ಬ್ಯಾಂಕ್ ರಾಷ್ಟ್ರೀಕರಣವು ಜನತೆಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿದ ದೇಶದ ಬಹುದೊಡ್ಡ ಆರ್ಥಿಕ ಕ್ರಾಂತಿಯಾಗಿದೆ. ದೇಶವನ್ನು ಆರ್ಥಿಕವಾಗಿ ಸಬಲವಾಗಿಸುವ ನಿಟ್ಟಿನಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿರುವ ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು ಬ್ಯಾಂಕ್ ಉದ್ಯೋಗಿಗಳು ಮಾತ್ರವಲ್ಲದೆ ದೇಶದ ಜನತೆ ಆಚರಿಸಬೇಕು ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್‌ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಕರೆ ನೀಡಿದರು.
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಬ್ಯಾಂಕ್ ರಾಷ್ಟ್ರೀಕರಣದ 55 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಮಾತಾಡಿದರು.
1969 ರ ಜುಲೈ 19 ರಂದು ಅಂದಿನ ಪ್ರಧಾನಿಗಳಾಗಿದ್ದ ದಿವಂಗತ ಇಂದಿರಾ ಗಾಂಧಿಯವರು ಖಾಸಗಿ ವಲಯದ ಒಡೆತನದಲ್ಲಿದ್ದ 14 ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವದರ ಮೂಲಕ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದರು. 1980 ರ ಎಪ್ರಿಲ್ 15 ರಂದು ಮತ್ತೆ 6 ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಬ್ಯಾಂಕ್ ರಾಷ್ಟ್ರೀಕರಣದ ಫಲವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಯಿತು. ಬ್ಯಾಂಕಿಂಗ್ ಸೌಲಭ್ಯವು ದೇಶದ ಮೂಲೆ ಮೂಲೆಗೂ ತಲುಪುವಂತಾಯಿತು. ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ, ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿ ಸೇರಿದಂತೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಬ್ಯಾಂಕ್ ರಾಷ್ಟ್ರೀಕರಣವು ಗಮನಾರ್ಹವಾದ ಕೊಡುಗೆಯನ್ನು ನೀಡಿದೆ ಎಂದರು.
ಸರ್ಕಾರದ ಖಾಸಗೀಕರಣ ನೀತಿಯ ಫಲವಾಗಿ ಇದೇ 22 ರಿಂದ ಆರಂಭ ವಾಗಲಿರುವ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸರ್ಕಾರವು ಮುಂದಾಗುವ ಸಾಧ್ಯತೆ ಇದೆ ಎನ್ನುವ ಸುದ್ದಿಗಳು ಮಾಧ್ಯಮದಲ್ಲಿ ಬಿತ್ತರವಾಗುತ್ತಿದೆ. ತಿದ್ದುಪಡಿಗೆ ಸಂಸತ್ತು ಅನುಮೋದನೆ ನೀಡಿದರೆ ಅದೊಂದು ರಾಷ್ಟ್ರೀಯ ದುರಂತಕ್ಕೆ ಕಾರಣವಾಗಲಿದೆ ಎಂದು ಹೇಳಿದರು.
ಸರಕಾರವು ಖಾಸಗೀಕರಣಕ್ಕೆ ಮುಂದಾದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಜನಸಾಮಾನ್ಯರ 180 ಲಕ್ಷ ಕೋಟಿಗೂ ಹೆಚ್ಚಿನ ಠೇವಣಿ ಹಣದ ಸುರಕ್ಷತೆಗೆ ಅಪಾಯ ಎದುರಾಗಲಿದೆ. 2023-24 ರ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು 1,41,203 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳು ದೇಶದ ಆಸ್ತಿ. ಅದನ್ನು ಇನ್ನಷ್ಟು ಬಲಗೊಳಿಸಲು ಸರಕಾರವು ಮುಂದಾಗಬೇಕೇ ವಿನಹ ಖಾಸಗೀಕರಣಗೊಳಿಸಬಾರದು ಎಂದು ಹೇಳಿದರು.
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷ ಅಜಿತ್‌ಕುಮಾರ್ ನ್ಯಾಮತಿ ಮಾತನಾಡಿ, ಸರಕಾರದ ಅನೇಕ ಯೋಜನೆಗಳು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕವೇ ಜನರನ್ನು ತಲುಪುತ್ತಿವೆ. ಖಾಸಗೀ ಬ್ಯಾಂಕುಗಳು ತಮ್ಮ ಲಾಭಕ್ಕಾಗಿ ಕಾರ್ಯ ನಿರ್ವಹಿಸುತ್ತವೆಯೇ ಸೇವಾ ಮನೋಭಾವನೆಯಿಂದ ಅಲ್ಲ ಎಂದರು.
ಸಂಘದ ಕಾರ್ಯದರ್ಶಿ ಹೆಚ್.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಧ್ಯೇಯವಾಕ್ಯದಂತೆ “ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕಾಗಿ ಬಳಕೆಯಾಗಬೇಕೇ ವಿನಹ ಖಾಸಗಿ ಕಂಪನೆಗಳ ಲೂಟಿಗಾಗಿ ಅಲ್ಲ” ಹಾಗೂ “ಬ್ಯಾಂಕಿಂಗ್ ಸೌಲಭ್ಯಗಳು ನಾಗರೀಕರ ಮೂಲಭೂತ ಹಕ್ಕಾಗಬೇಕು ಎನ್ನುವ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು.
ದಾವಣಗೆರೆ ಚಿತ್ರದುರ್ಗ ಜಿಲ್ಲಾ ನಿವೃತ್ತ ಬ್ಯಾಂಕ್ ನೌಕರರ ಒಕ್ಕೂಟದ ಉಪ ಪ್ರಧಾನ ಕಾರ್ಯದರ್ಶಿ ಹೆಚ್.ಸುಗುರಪ್ಪ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಖಜಾಂಚಿ ಕೆ.ವಿಶ್ವನಾಥ್ ಬಿಲ್ಲವ, ಉಪಾಧ್ಯಕ್ಷರುಗಳಾದ ಎಂ.ಎಂ.ಸಿದ್ದಲಿಂಗಯ್ಯ, ಆರ್.ಆಂಜನೇಯ, ಜಂಟಿ ಕಾರ್ಯದರ್ಶಿಗಳಾದ ಸಿ.ಪರಶುರಾಮ, ಎಂ.ಡಿ.ವಿದ್ಯಾಸಾಗರ್, ಶ್ರೀನಿವಾಸ ಎನ್.ವಿ, ಡಿ.ಎನ್.ಅಣ್ಣಪ್ಪ ನಂದಾ ಹಾಗೂ ಇತರ ಪದಾಧಿಕಾರಿಗಳಾದ ಎಂ.ರಮೇಶ್, ಪ್ರಶಾಂತ್ ಶ್ರೀನಿವಾಸ್, ಡಿ.ಹರ್ಷದ್, ನಾಗಭೂಷಣ ಎನ್.ಪಿ., ಗಜೇಂದ್ರ ಎಸ್, ಮತ್ತಿತರರು ಉಪಸ್ಥಿತರಿದ್ದರು.