ದಾವಣಗೆರೆ: ‘ಅಧಿಕಾರಿಗಳಿಗೆ ಹಳ್ಳಿಗಳ ಸಮಸ್ಯೆ ದರ್ಶನ ಆಗಬೇಕು. ಆಗ ಮಾತ್ರ ಆ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ’ ಎಂಬ ನಿಟ್ಟಿನಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮಾಯಕೊಂಡ ಕ್ಷೇತ್ರದಲ್ಲಿರುವ ವಾಸ್ತವ ಸಮಸ್ಯೆಗಳ ದರ್ಶನ ಮಾಡಿಸಿದರು.
ಮೀಸಲು ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವಾದ ಮಾಯಕೊಂಡದಲ್ಲಿ ಮಂಗಳವಾರ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿಗಳಿಗೆ ಪಾಳು ಬಿದ್ದ ಉಪಮಾರುಕಟ್ಟೆ, ಅಪೂರ್ಣಗೊಂಡ ಕಾಮಗಾರಿ, ಕಳಪೆ ರಸ್ತೆ ಕಾಮಗಾರಿ, ಬಾಲಕಿಯರ ವಿದ್ಯಾರ್ಥಿ ನಿಲಯ ಸೇರಿದಂತೆ ವಿವಿಧ ವಾಸ್ತವ ಜ್ವಲಂತ ಸಮಸ್ಯೆಗಳ ದರ್ಶನ ಮಾಡಿಸಿದರು.
ಬೆಳಗ್ಗೆಯಿಂದಲೇ ಶಾಸಕರೊಂದಿಗೆ ತೆರಳಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು, ಮೊದಲಿಗೆ ಮಾಯಕೊಂಡದಲ್ಲಿ ಪಾಳು ಬಿದ್ದ ಉಪಮಾರುಕಟ್ಟೆ ವೀಕ್ಷಿಸಿದರು.
ಬಳಿಕ ಸರ್ಕಾರಿ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ಬಾಲಕಿಯರ ವಸತಿ ನಿಲಯ, ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಕಳಪೆ ಕಾಮಗಾರಿ, ಅಪೂರ್ಣಗೊಂಡ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ, ಈ ಭಾಗದ ರೈತರಿಗೆ ಉಪಯೋಗವಾಗಲಿದೆ ಎಂಬ ಉದ್ದೇಶದಿಂದ ಉಪಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ ಇದಕ್ಕೆ ಕಾಯಕಲ್ಪವಿಲ್ಲದೆ ಪಾಳು ಬಿದ್ದಿದೆ. ಇಲ್ಲಿನ ವರ್ತಕರಿಗೆ ರಿಯಾಯ್ತಿ ದರದಲ್ಲಿ ಟ್ರೇಡ್ ಲೈಸನ್ಸ್ ನೀಡಿ ಬಾಡಿಗೆ ಕೊಟ್ಟರೆ ಅಡಿಕೆ, ಮೆಕ್ಕೆಜೋಳ ವ್ಯಾಪಾರ ಮಾಡಲು ಅನುಕೂಲವಾಗಲಿದೆ. ಅಲ್ಲದೇ ಮೂರು ಗೋದಾಮುಗಳು ಖಾಲಿ ಉಳಿದು ಪಾಳು ಬಿದ್ದಿವೆ. ಅವುಗಳನ್ನು ಬಾಡಿಗೆ ಕೊಡುವ ವ್ಯವಸ್ಥೆ ಮಾಡಬೇಕು. ಈ ಭಾಗದಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ಬಹಳ ತೊಂದರೆ ಆಗುತ್ತದೆ. ಫೈರ್ ಇಂಜಿನ್ ದಾವಣಗೆರೆಯಿಂದ ಇಲ್ಲಿಗೆ ಬರುವಷ್ಟರಲ್ಲಿ ಎಲ್ಲವೂ ಭಸ್ಮವಾಗಿರುತ್ತದೆ. ಹೀಗಾಗಿ ಇಲ್ಲಿ ಅಗ್ನಿ ಶಾಮಕ ದಳದ ಠಾಣೆ ತೆರೆಯಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಕೂಡಲೇ ಈ ಬಗ್ಗೆ ತೆಗೆದುಕೊಂಡು ವರ್ತಕರಿಗೆ ರಿಯಾಯ್ತಿ ದರದಲ್ಲಿ ಟ್ರೇಡ್ ಲೈಸನ್ಸ್ ನೀಡಿ ವರ್ತಕರಿಗೆ ಅನುಕೂಲ ಕಲ್ಪಿಸುತ್ತೇವೆ. ಕೂಡಲೇ ಅಗ್ನಿ ಶಾಮಕ ದಳದ ಠಾಣೆ ತೆರೆಯಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
100 ಮಕ್ಕಳಿರುವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ೨೫೦ ಮಕ್ಕಳಿದ್ದಾರೆ. ಕೊಠಡಿಗಳ ಸಮಸ್ಯೆಗಳಿಂದ ಒಂದು ಕೊಠಡಿಯಲ್ಲಿ ೧೦ರಿಂದ ೧೫ ಮಕ್ಕಳಿದ್ದು, ಅವ್ಯವಸ್ಥೆಯಿಂದ ಕೂಡಿದೆ. ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ಕಳಪೆ ಕಾಮಗಾರಿ, ಅಪೂರ್ಣ ಕಾಮಗಾರಿ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕೆಂದರು. ಈ ಕುರಿತು ತುರ್ತು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಎಸ್.ಕೆ. ಅಣಜಿ ಚಂದ್ರಣ್ಣ, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ವೆಂಕಟೇಶ್, ಖರೀದಿದಾರರ ಸಂಘದ ಅಧ್ಯಕ್ಷ ಜಾವೇದ್, ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಮುಖಂಡರಾದ ಗೋಪಾಲ್, ರುದ್ರಣ್ಣ, ಜಗಣ್ಣ, ಮಂಜಣ್ಣ, ಪರಸಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೈಕ್‌ನಲ್ಲಿ ತೆರಳಿ ಕೆರೆ ವೀಕ್ಷಿಸಿದ ಡಿಸಿ, ಶಾಸಕರು…ಬೈಕ್‌ನಲ್ಲಿ ತೆರಳಿದ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಮಾಯಕೊಂಡದಿಂದ ಸುಮಾರು ಐದಾರು ಕಿ.ಮೀ. ದೂರದ ಗುಡ್ಡದಲ್ಲಿರುವ ಕೆಂಚಮಾರನಹಳ್ಳಿ ಕೆರೆಯನ್ನು ಮಳೆಯ ನಡುವೆಯೂ ನಡೆದುಕೊಂಡು ಹೋಗಿ ವೀಕ್ಷಣೆ ಮಾಡಿದರು.ಈ ಹಿಂದೆ ಇಲ್ಲಿರುವ ಕೆರೆಯನ್ನು ಮಿನಿ ಜಲಾಶಯವನ್ನಾಗಿ ಮಾಡಿದರೆ ಅಂತರ್ಜಲ ಮಟ್ಟ ಹೆಚ್ಚಿಸಬಹುದು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.ಈ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕೆಂಚಮಾರನಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕ ಕೆ.ಎಸ್.ಬಸವಂತಪ್ಪ, ಇಲ್ಲಿ ಮಿನಿ ಜಲಾಶಯ ನಿರ್ಮಿಸುವುದರಿಂದ ಈ ಭಾಗದ 30 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಬಹುದು. ಅಲ್ಲದೇ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆ ನೀಗಿಸಬಹುದು. ಮುಖ್ಯವಾಗಿ ಕಾಡು ಪ್ರಾಣಿಗಳಿಗೆ ನೀರುಣಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು.ಈ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಇಲ್ಲಿನ ಕೆಂಚಮಾರನಹಳ್ಳಿ ಕೆರೆ ಅಭಿವೃದ್ಧಿಗೆ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಭರವಸೆ ನೀಡಿದರು.