ದಾವಣಗೆರೆ : ಗುಣಪಡಿಸುವ ಕೈಗಳ, ಕಾಳಜಿಯುಳ್ಳ ಹೃದಯಗಳ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುವ ವೈದ್ಯ ಸಮೂಹಕ್ಕೆ ಸಮಾಜ ಎಂದೆಂದಿಗೂ ಋಣಿಯಾಗಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ ಹೇಳಿದರು.
ದಾವಣಗೆರೆ ಜಿಲ್ಲಾ ನ್ಯಾಯಾಂಗದಿಂದ ಮಂಗಳವಾರ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಒತ್ತಡಮಯ ಜೀವನ ಶೈಲಿಗೆ ಮನುಷ್ಯ ಹಲವಾರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ.ವೈದ್ಯ ಸಮೂಹದ ಮುಂದೆಯೂ ಸವಾಲುಗಳಿವೆ. ಕಾಲಕಾಲಕ್ಕೆ ವೈದ್ಯಕೀಯ ಲೋಕ ಸಂಬಂಧಿತ ವಿಷಯಗಳಿಗೆ ಸಂಬಂಧಪಟ್ಟಂತೆ ಚರ್ಚೆ, ಉಪನ್ಯಾಸಗಳ ಮೂಲಕ ಜನರನ್ನು ತಲುಪಬೇಕಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ, ನ್ಯಾಯಾಂಗದಿಂದ ವೈದ್ಯರನ್ನು ಕರೆಸಿ ಸನ್ಮಾನಿಸಿರುವುದು ನಮ್ಮಲ್ಲಿ ಮತ್ತಷ್ಟು ಜವಾಬ್ದಾರಿ ಹಾಗೂ ನೈತಿಕ ಪ್ರಜ್ಞೆ ಮೂಡಲು ಕಾರಣವಾಗಿದೆ ಎಂದರು.
ಇಂದಿನ ನಾಗರಿಕ ಸಮಾಜ ನಾಗಾಲೋಟದಿಂದ ಓಡುತ್ತಿದೆ.ಇಂತಹ ಸಂದರ್ಭದಲ್ಲಿ ಆಧುನಿಕ ಸಂಪರ್ಕ ಸಾಧನಗಳು ಜನರಲ್ಲಿ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ತಪ್ಪು ಸಂದೇಶವನ್ನು ರವಾನಿಸುತ್ತಿರವುದು ದುರದೃಷ್ಟಕರ ಎಂದು ಸಮಾಜಮುಖಿ ಕಾರ್ಯಗಳಿಗೆ ಹೆಸರಾದ ಮತ್ತೋರ್ವ ವೈದ್ಯೆ ಡಾ.ಶಾಂತಾಭಟ್ ವಿಷಾದ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳಿಂದ ಪ್ರಶಂಸೆಗೆ ಪಾತ್ರರಾಗಿ ಅನುಪಮ ಸೇವೆಗಾಗಿ ಪ್ರಶಸ್ತಿ ಪುರಸ್ಕೃತ ಡಾ.ರಾಘವನ್ ಮತ್ತು ಡಾ.ನಾಗೇಂದ್ರಪ್ಪರವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು.
ಡಾ.ರಾಘವನ್ ಮಾತನಾಡಿ, ಸಮಾಜದಲ್ಲಿ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳಿಗಿಂತಲೂ ಹೆಚ್ಚಾಗಿ ಇಂದಿನ ಬದಲಾದ ಜೀವನ ಶೈಲಿ,ಮಾನಸಿಕ ಒತ್ತಡಗಳಿಂದಾಗಿ ಮರಣಹೊಂದುವವರ ಸಂಖ್ಯೆ ಗಣನೀಯವಾಗಿದೆ.ಇದು ಪ್ರಸ್ತುತ ಶೇ.ಅರವತ್ತೇಳರ ಪ್ರಮಾಣದಲ್ಲಿದೆ ಈ ಕುರಿತಂತೆ ಯುವಜನತೆಯಲ್ಲಿ ಅರಿವನ್ನು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಮಂಜಪ್ಪ ಅಣ್ಣಯ್ಯನವರ್ ಮಾತನಾಡಿ, ವೈದ್ಯರ ಮಾನವೀಯ ದೃಷ್ಟಿಯಿಂದಾಗಿಯೇ ಅರ್ಧದಷ್ಟು ಬಡವರ ಕಾಯಿಲೆಗಳು ವಾಸಿಯಾಗಬಲ್ಲವು.ಶ್ರೀಮಂತ ರೋಗಿಗೆ ಡಾಕ್ಟರ್ ಆಗಿ ಕಂಡ ಅದೇ ವೈದ್ಯ,ಬಡವನಿಗೆ ದೇವರಾಗಿ ಕಾಣಿಸುತ್ತಾನೆ ಇಂತಹ ಸ್ತುತ್ಯ ಕಾರ್ಯಕ್ಕೆ ವೈದ್ಯರನ್ನು ಅಭಿನಂದಿಸುತ್ತೇನೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ ಸ್ವಾಗತಿಸಿದರು.
ವೈದ್ಯರಾದ ರೇಣುಕಾರಾಧ್ಯ, ಸುಭಾಶ್ಚಂದ್ರ ಹಾಗೂ ನ್ಯಾಯಾಧೀಶರಾದ ಪ್ರವೀಣಕುಮಾರ್, ಶ್ರೀರಾಮ ಹೆಗಡೆ, ಶಿವಪ್ಪ ಸಲಗರೆ,ನಿವೇದಿತಾ ಹಾಗೂ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ , ಕೋರ್ಟ್ ಮ್ಯಾನೇಜರ್ ಅಶ್ವಿನಿ ಕುಮಾರ್ ಹಾಗೂ ನ್ಯಾಯಾಂಗ ಸಿಬ್ಬಂದಿಗಳು ಹಾಜರಿದ್ದರು.