ಚನ್ನಗಿರಿ (DAVANAGERE) : ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಮಾಜದ ಜವಾಬ್ದಾರಿಯುತ ನಾಗರೀಕರು ಕೈ ಜೋಡಿಸಬೇಕಾಗಿದ್ದು ಸಮಾಜದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಆಗಾಗ್ಗೆ ಮಾಹಿತಿಯನ್ನು ನೀಡುತ್ತಾ ಸಮಾಜ ಘಾತುಕ ಕೆಲಸವನ್ನು ಮಾಡುವ ದುಷ್ಟ ಶಕ್ತಿಗಳನ್ನು ಮಟ್ಟಹಾಕಲು ಸಹಕಾರ ನೀಡಬೇಕು ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಹೇಳಿದರು.
ಶನಿವಾರ ಸಂಜೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಪೊಲೀಸ್ ಇಲಾಖೆಯ (DISTRICT POLICE )ವತಿಯಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, ಈ ದಿನ ಪೊಲೀಸ್ ಇಲಾಖೆಯ ಸಿಬ್ಬಂದ್ದಿಗಳ ಕರ್ತವ್ಯ ಲೋಪದ ಬಗ್ಗೆ, ಟ್ರಾಕ್ಟರ್ ಗಳಿಗೆ ರಿಪ್ಲೇಕ್ಟರ್ ಗಳನ್ನು ಅಳವಡಿಸುವ ಬಗ್ಗೆ, ಗಾಂಜಾ ಮಾರಾಟ, ಅಕ್ರಮ ಮಧ್ಯ ಮಾರಾಟದ ಬಗ್ಗೆ ದೂರು ನೀಡಿದ್ದು ನಮ್ಮ ಇಲಾಖೆಯಲ್ಲಿ ಯಾರಾದರೂ ಸಿಬ್ಬಂದ್ದಿಗಳು ಕರ್ತವ್ಯ ಲೋಪ ಮಾಡಿದರೆ ತಕ್ಷಣವೇ ನನ್ನ ಗಮನಕ್ಕೆ ತನ್ನಿ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಳೆದ 10 ವರ್ಷಗಳಿಂದ ಗಂಜಾ ಮಾರಾಟ ಮಾಡುವುದು ಕಡಿಮೆ ಯಾಗಿದ್ದು ಗಂಜಾ ಮಾರಾಟ ವನ್ನು ಸಂಪೂರ್ಣವಾಗಿ ಮಟ್ಟಹಾಕಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.
Read also : DAVANAGERE : ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸರಕಾರ ಮುಂದಾಗಲಿ : ಕೆ.ರಾಘವೇಂದ್ರ ನಾಯರಿ
ತಾಲೂಕಿನ ನಲ್ಲೂರು ಗ್ರಾಮದ ಪೊಲೀಸ್ ಠಾಣೆಯನ್ನು ಉನ್ನತ ದರ್ಜೆಗೆ ಏರಿಸಲು ಈಗಾಗಲೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದು ಅದಷ್ಟು ಶೀಘ್ರದಲ್ಲಿಯೇ ಈ ಪೊಲೀಸ್ ಠಾಣೆಯನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದು ಹೇಳುತ್ತಾ ತಾವರೆಕೆರೆ ಗ್ರಾಮದಲ್ಲಿರುವ ಪೊಲೀಸ್ ಠಾಣೆಯ ಕಟ್ಟಡ ಸಂಪೂರ್ಣ ಶಿಥೀಲಾವಸ್ಥೆಯಲ್ಲಿದ್ದು ಇದನ್ನು ತೆರವು ಗೊಳಿಸಲು ಶಿಫಾರಸ್ಸು ಮಾಡಿದ್ದು ತಾತ್ಕಾಲಿಕವಾಗಿ ಬೇರೆ ಕಟ್ಟಡದಲ್ಲಿ ಪೊಲೀಸ್ ಠಾಣೆಯನ್ನು ನಡೆಸಲು ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೇಸ್ ಪಕ್ಷದ ಮುಖಂಡ ಗಿರೀಶ್ ಮಾತನಾಡಿ, ಚನ್ನಗಿರಿ ಪಟ್ಟಣದಲ್ಲಿ ಪುಟ್ ಪಾತ್ ಗಳ ಮೇಲೆ ಗೂಡಂಗಡಿಗಳನ್ನು ಇಟ್ಟಿದ್ದು ಇದರಿಂದ ಪಾದಾಚಾರಿಗಳಿಗೆ ಸಂಚರಿಸಲು ತೊಂದರೆಯಾಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತಾ ಪಟ್ಟಣದ ಆಯ್ದ ಕೆಲ ಭಾಗಗಳಲ್ಲಿ ಟ್ರಾಪಿಕ್ ಸಿಗ್ನಲ್ ಗಳನ್ನು ಅಳವಡಿಸಬೇಕು ಎಂದು ಇಲಾಖೆಗೆ ಸಲಹೆಯನ್ನು ನೀಡಿದರು.
ಬಿಜೆಪಿ ಯುವಮೋರ್ಚಾ ಮಾಜಿ ಅಧ್ಯಕ್ಷ ಜೆ.ದರ್ಶನ್ ಮಾತನಾಡಿ, ಚನ್ನಗಿರಿಯಲ್ಲಿ ಅಕ್ರಮವಾಗಿ ಮತಾಂತರ ಮತ್ತು ರಾತ್ರಿಯ ಸಮಯದಲ್ಲಿ ಕೆಲ ಯುವಕರು ವಿಲಿಂಗ್ ಮಾಡುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆಯ ಸಿಬ್ಬಂದ್ದಿಗಳಿಗೆ ಹಲವಾರು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದಾಗ ಎಸ್.ಪಿ. ಮಾತನಾಡಿ, ಅಕ್ರಮವಾಗಿ ಮತಾಂತರ ಮಾಡುವವರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಮತ್ತು ರಾತ್ರಿಯ ಸಮಯದಲ್ಲಿ ವಿಲಿಂಗ್ ಮಾಡುವ ಪ್ರದೇಶಗಳಲ್ಲಿ ಪೊಲೀಸ್ ಬೀಟ್ ಗಳನ್ನು ಹೆಚ್ಚಿಸಬೇಕು ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಂತೋಷ್, ಮಂಜುನಾಥ್, ಡಿ,ವೈ.ಎಸ್.ಪಿ ರುದ್ರಪ್ಪ ಉಜ್ಜನಕೊಪ್ಪ, ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಮುಸ್ಲಿಂ ಸಮಾಜದ ಮುಖಂಡರಾದ ಅಮಾನುಲ್ಲಾ, ಸರ್ಧಾರ್, ರವಿಚಂದ್ರ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.