ದಾವಣಗೆರೆ (Davanagere): ಅಪರಾಧ ಪತ್ತೆ ಹಾಗೂ ತನಿಖಾ ವ್ಯವಸ್ಥೆ ಬಲಿಷ್ಠಗೊಳಿಸಲು ಪೊಲೀಸ್ ಕರ್ತವ್ಯ ಕೂಟ ಸಹಕಾರಿಯಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ (East Zone Police) ಪೂರ್ವ ವಲಯ ಪೊಲೀಸ್ ಕರ್ತವ್ಯ ಕೂಟ ಉದ್ಘಾಟಿಸಿ ಮಾತನಾಡಿದರು.
ಪೊಲೀಸರು ಹೆಚ್ಚು ಕೌಶಲ್ಯ ಹೊಂದುವುದರಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ. ಪೊಲೀಸರ ನೈಪೂಣ್ಯತೆ ವೃದ್ಧಿಗೆ ಕರ್ತವ್ಯ ಕೂಟ ಮಹತ್ವದ ಪಾತ್ರ ವಹಿಸಲಿದೆ. ಇಲ್ಲಿ ಕಲಿಯುವ ಕೌಶಲ್ಯ ದೀರ್ಘಾವಧಿವರೆಗೆ ನೆರವಾಗುತ್ತದೆ ಎಂದರು.
ಅಪರಾಧ ಪತ್ತೆ ಮಾಡಿ ಪ್ರಕರಣ ನೋಂದಾಯಿಸಿ, ಆರೋಪ ಪಟ್ಟಿ ದಾಖಲಿಸುವುದರ ಜತೆಗೆ ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸುವುದರಲ್ಲಿ ಪೊಲೀಸರ ಜವಾಬ್ದಾರಿ ಮಹತ್ವದ್ದಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯನ್ನು ಅಧಿಕಾರಿಗಳು ಜವಾಬ್ದಾರಿಯಿಂದ ಗಮನಿಸಬೇಕು. ಉದಾಸೀನತೆ ತೋರಬಾರದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ತನಿಖೆಯಲ್ಲಿ ಕೌಶಲ್ಯ ಹೆಚ್ಚಿಸಿಕೊಂಡರೆ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ವೈಜ್ಞಾನಿಕವಾಗಿ ತನಿಖೆ ನಡೆಸಬೇಕು. ಡಿಜಿಟಲ್ ಸಾಕ್ಷಿಯನ್ನು ಪ್ರಾಥಮಿಕ ಸಾಕ್ಷಿಗಳೆಂದು ಪರಿಗಣಿಸಲಾಗುತ್ತಿದೆ. ಕಂತೆ ಕಡತಗಳಿಗಿಂತ ವಿಡಿಯೋ ಸಾಕ್ಷಿ ಅನುಕೂಲಕವಾಗಿರುತ್ತದೆ. ಕೆಲವೊಮ್ಮೆ ಸಿ.ಸಿ. ಕ್ಯಾಮೆರಾ ಸಾಕ್ಷಿಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದರು.
ಪೊಲೀಸ್ ಕರ್ತವ್ಯ ಕೂಟದ ನೋಡಲ್ ಅಧಿಕಾರಿ ಹಾಗೂ ಡಿವೈಎಸ್‌ಪಿ ಎ.ಕೆ. ರುದ್ರೇಶ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಎಸ್ಪಿ ವಿಜಯಕುಮಾರ ಎಂ. ಸಂತೋಷ್, ಜಿ. ಮಂಜುನಾಥ್, ಆರ್‌ಎಫ್‌ಎಸ್‌ಎಲ್ ಉಪ ನಿರ್ದೇಶಕಿ ಛಾಯಾ ಕುಮಾರಿ ಇದ್ದರು.