ದಾವಣಗೆರೆ,ಜ.09 (Davanagere): ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಬೂನಾದಿ ಹಾಕುವುದು ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವುದು ಇದೆಲ್ಲವು ಶಾಲಾ ಹಂತದಲ್ಲಿಯೇ ಆಗುವಂತಹ ಶಿಕ್ಷಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣನವರ್ ಹೇಳಿದರು.
ಗುರುವಾರ (ಜ.9) ರಂದು ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ದಾವಣಗೆರೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಉತ್ತರ, ದಕ್ಷಿಣ ಹಾಗೂ ಚನ್ನಗಿರಿ ವಲಯದ ಸಿ.ಆರ್.ಪಿ ಗಳಿಗೆ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ, ನ್ಯಾಯಧೀಶರು, ವೈದ್ಯ, ವಿಜ್ಞಾನಿಗಳು, ಸಂಶೋಧಕರು, ಅಭಿಯಂತರರು ಹಾಗೂ ಇನ್ನಿತರ ಅಧಿಕಾರಿಗಳನ್ನಾಗಿ ಸೃಷ್ಠಿಸಬಹುದು ಹಾಗೂ ಮಣ್ಣನ್ನು ಮೂರ್ತಿಯನ್ನಾಗಿ ಮಾಡಬಹುದು, ಶಿಲೆಗೆ ಕಲೆಯ ರೂಪ ಕೊಡಬಹುದು, ಶಾಲಾ ಹಂತದಲ್ಲಿ ತಂಬಾಕು ನಿಯಂತ್ರಣ ಸಮಿತಿಯನ್ನು ರಚಿಸಿ ಶಾಲಾ ವ್ಯಾಪ್ತಿಯಲ್ಲಿ ತಂಬಾಕು ಬಳಕೆಯಾಗದಂತೆ ಕ್ರಮವಹಿಸುವುದು ಮತ್ತು ಮಕ್ಕಳು ಪ್ರೌಢಾವಸ್ಥೆಯಲ್ಲಿ ದಾರಿ ತಪ್ಪುವುದನ್ನು ನಿಲ್ಲಿಸುವುದು ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ತಂಬಾಕು ಮುಕ್ತ ಯುವ ಪೀಳಿಗೆಯನ್ನಾಗಿಸಬೇಕೆಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ ರಾಘವನ್ ಮಾತನಾಡಿ, ಪ್ರತಿನಿತ್ಯ 293 ಜನ ಮಕ್ಕಳು 13-15 ರ ವಯೋಮಾನದವರು ತಂಬಾಕನ್ನು ಸೇವಿಸಲು ಪ್ರಾರಂಭಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಹಾಗಾಗಿ ತಂಬಾಕು ಬಳಕೆಗೆ ಮಕ್ಕಳು ಬಲಿಯಾಗದಂತೆ ಕ್ರಮ ವಹಿಸುವುದು ತಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಮತ್ತು ಜಿಲ್ಲೆಯ ಎಲ್ಲಾ ಶಾಲೆಗಳನ್ನ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ. ಎ.ಎಲ್ ಮಾತನಾಡಿ ಸರ್ಕಾರ ನೀಡಿರುವ ಅವರವರ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಪ್ರಮುಖವಾಗಿ ಕಣ್ಣಾರೆ ನೋಡಿದ ತಪ್ಪನ್ನು ನಾವು ಕಡೆಗಣಿಸದೆ ಸರಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಎಲ್ಲಾ ಸಿ.ಆರ್.ಪಿ ಗಳು ತಮ್ಮ ಹಂತದಲ್ಲಿರುವ ಎಲ್ಲಾ ಶಾಲೆಗಳನ್ನು ಪರಿಶೀಲಿಸಿ ತಂಬಾಕು ನಿಯಂತ್ರಣ ಕೋಶಕ್ಕೆ ವರದಿಯನ್ನು ಸಲ್ಲಿಸಬೇಕೆಂದು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪಯೋಜನಾ ಸಮನ್ವಯ ಅಧಿಕಾರಿ ರವಿ, ದಂತ ವಿಭಾಗದ ಮುಖ್ಯಸ್ಥರಾದ ಡಾ. ತಿಪ್ಪೇಸ್ವಾಮಿ ಪಿ.ಎಂ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುಳ.ಎನ್.ಪಿ, ಜಿಲ್ಲಾ ಸಲಹೆಗಾರರಾದ, ಸತೀಶ್ ಕಲಹಾಳ್ ಸಮಾಜ ಕಾರ್ಯಕರ್ತರಾದ, ಶೈಲಾ ಶಾಮನೂರು ಮತ್ತು ಎಲ್ಲಾ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳು, ಉತ್ತರ, ದಕ್ಷಿಣ ಹಾಗೂ ಚನ್ನಗಿರಿ ವಲಯದ ಸಿ.ಆರ್.ಪಿ ಗಳು ಭಾಗವಹಿಸಿದ್ದರು.