ದಾವಣಗೆರೆ ನ.17: ಅರವತ್ತು ವರ್ಷ ಮೇಲ್ಪಟ್ಟವರು ಹಿರಿಯ ನಾಗರಿಕರಾಗಿದ್ದು, ತಮ್ಮ ಸ್ವಂತ ಗಳಿಕೆ ಅಥವಾ ತಮ್ಮ ಒಡೆತನದ ಆಸ್ತಿಯಿಂದ ತಮ್ಮನ್ನು ಪೋಷಿಸಿಕೊಳ್ಳಲು ಸಾಧ್ಯವಾಗದ ಪಾಲಕರು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಸಂರಕ್ಷಣಾ ಕಾಯ್ದೆಯಡಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಾಗೂ ಹಿರಿಯ ನಾಗರಿಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪಾಲಕರ ಪೋಷಕರ ಸಂರಕ್ಷಣಾ ಕಾಯ್ದೆ-2007ರ ಅರಿವು ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
Read also : ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣಬೇಕು. ತಂದೆ-ತಾಯಿ ನಮ್ಮ ದೇವರಿದ್ದಂತೆ. ಯಾರೇ ಆಗಲಿ ತಮ್ಮ ಹೆತ್ತವರನ್ನು ದೇವರಂತೆ ಕಾಣಬೇಕು. ಮಕ್ಕಳು ಅಥವಾ ಮೊಮ್ಮಕ್ಕಳು ತಮ್ಮ ಪಾಲಕರನ್ನು ಪೋಷಿಸುವ ಜವಾಬ್ದಾರಿ ಹೊಂದಿರುತ್ತಾರೆ. ಅಥವಾ ಅವರ ರಕ್ತ ಸಂಬಂಧಿಯೂ ಸಹ ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಬದ್ಧರಾಗಿರುತ್ತಾರೆ. ಆದರೆ ಇಂತಹ ಹೆತ್ತವರು ಅಥವಾ ಹಿರಿಯ ನಾಗರಿಕರು ಯಾರ ರಕ್ಷಣೆಗೂ ಒಳಪಡದಿದ್ದರೆ, ಈ ಕಾಯ್ದೆಯಡಿಯಲ್ಲಿ ರಚಿಸಲಾದ ನ್ಯಾಯಮಂಡಳಿಯ ಸಹಾಯ ಪಡೆದು, ಅರ್ಜಿ ಸಲ್ಲಿಸಿ ಜೀವನಾಂಶದ ಪರಿಹಾರ ಪಡೆಯಬಹುದು ಎಂದರು.
ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಸಂರಕ್ಷಣಾ ಕಾಯ್ದೆಯಡಿ ಲಭ್ಯವಿರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳು ಪಡೆಯ ಬಹುದಾಗಿದೆ. ಹಿರಿಯ ನಾಗರಿಕರು ಕುಟುಂಬದಲ್ಲಿ ತಮ್ಮ ಮಕ್ಕಳಿಗೆ ಭಾಗಾಂಶ, ದಾನಪತ್ರ, ವಿಲ್ ಇತರ ದಾಖಲೆಗಳನ್ನು ವರ್ಗಾವಣೆ ಮಾಡಿ ಬಳಿಕ ಅಂತಹ ಮಕ್ಕಳಿಂದ ಸರಿಯಾದ ಪೋಷಣೆ, ರಕ್ಷಣೆ ಸಿಗದೆ ಕಿರುಕುಳಕ್ಕೆ ಒಳಗಾದಾಗ ತಮ್ಮ ವ್ಯಾಪ್ತಿಯಲ್ಲಿ ಇರುವ ಉಪ-ವಿಭಾಗಾಧಿಕಾರಿ ಗಳನ್ನು ಭೇಟಿ ಮಾಡಿ ಸಮಸ್ಯೆ ತಿಳಿಸಿ ನಂತರ ಸೂಕ್ತ ದಾಖಲೆಗಳನ್ನು ರದ್ದು ಮಾಡುವ ಅಧಿಕಾರ ಆ ಅಧಿಕಾರಿಗಳಿಗಿದೆ. ಸಂಬಂಧಪಟ್ಟ ಆಸ್ತಿಯು ಮತ್ತೆ ವಾರಸುದಾರರ ಹೆಸರಿಗೆ ಲಭಿಸುತ್ತದೆ.
ಪ್ರತಿಯೊಬ್ಬ ಹಿರಿಯ ನಾಗರಿಕರು ಆತ್ಮಸ್ಥೆರ್ಯ ಕಳೆದುಕೊಳ್ಳದೆ ಧೈರ್ಯವಾಗಿ ಜೀವನ ನಡೆಸುವಂತೆ ಮನವಿ ಮಾಡಿದ ಅವರು, ನಿಮಗೆ ಏನೇ ಸಮಸ್ಯೆಯಿದ್ದರೂ ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಭೇಟಿ ಮಾಡುವಂತೆ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪನಿರ್ದೇಶಕ ರಾಜಾನಾಯ್ಕ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಕೆ.ಕೆ ಪ್ರಕಾಶ, ಕಾರ್ಮಿಕ ಅಧಿಕಾರಿ ಪ್ರಸನ್ನ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತ, ಡಿಡಿಪಿಐ ಕೊಟ್ರೇಶ್ ಉಪಸ್ಥಿತರಿದ್ದರು.
