ದಾವಣಗೆರೆ (Davanagere): ರಾಜಕಾರಣದಲ್ಲಿ ನಮ್ಮ ಸಮಾಜದ, ಶೋಷಿತ ವರ್ಗದವರನ್ನು ಬೆಳೆಯುತ್ತಿರುವವರಿಗೆ ಯಾವುದೇ ಕಾರಣಕ್ಕೂ ಅಡ್ಡಿಪಡಿಸಬೇಡಿ. ಅವರನ್ನೂ ಪ್ರೋತ್ಸಾಹಿಸಿ ಬೆಳೆಸಿ. ನಿಮ್ಮಲ್ಲಿರುವ ಭಯ, ಆತಂಕ ನಮ್ಮನ್ನು ತುಳಿಯುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಅವಕಾಶ ಕೊಡಬೇಡಿ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿನ ರೋಟರಿ ಭವನದಲ್ಲಿ ಜಿಲ್ಲಾ ಹಾಲುಮತ ಮಹಾಸಭಾ, ಜಿಲ್ಲಾ ಕುರುಬರ ಸಂಘ, ಸಮಾಜದ ಎಲ್ಲಾ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಜಯಂತಿ ಮತ್ತು ಕುರುಬ (ಹಾಲುಮತ) ಜಯಂತಿ ಹಾಗೂ ಸಮಾಜದ ಗುರುಗಳು, ಮಾಜಿ ಸಂಸದ ಚನ್ನಯ್ಯ ಒಡೆಯರ್ ಅವರ ಸುಪುತ್ರ ಡಾ. ಉದಯ ಶಂಕರ್ ಒಡೆಯರ್ ಅವರಿಗೆ ಹಾಲುಮತ ಚೇತನ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
1995ರಿಂದ 2000 ಮಧ್ಯದಲ್ಲಿ ದಾವಣಗೆರೆಯಲ್ಲಿ ಏನೇ ಆಗು ಹೋಗುಗಳಾದರೂ ಕುರುಬರ ನೇತೃತ್ವದಲ್ಲಿ ನಡೆಯುತಿತ್ತು ಎಂಬುದು ನನ್ನ ತಿಳುವಳಿಕೆ. ಅಷ್ಟೊಂದು ಪ್ರಬಲವಾಗಿದ್ದ ಸಮಾಜವು ಹಿಡಿತ ಕಳೆದುಕೊಂಡಿದೆ. ಬೇರೆಯವರು ಆಕ್ರಮಿಸಿಕೊಂಡಿದ್ದಾರೆ. ದಾವಣಗೆರೆ ಲೋಕಸಭೆ ಚುನಾವಣೆ ಮುಗಿದ ಬಳಿಕವೂ ನನ್ನನ್ನು ವೇದಿಕೆಗೆ ಆಹ್ವಾನಿಸಲು ಹತ್ತು ಬಾರಿ ಯೋಚಿಸುತ್ತಾರೆ. ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದರೆ ಮನೆಗೆ ಬಿಟ್ಟುಕೊಳ್ಳುವುದಿಲ್ಲ ಎಂಬ ಭಯ ಇದ್ದಲೂ ಇರಬಹುದು ಎಂದು ಅಭಿಪ್ರಾಯಪಟ್ಟರು.
ಎಲ್ಲರ ಜೊತೆ ಒಡನಾಟ ಶುರುವಾಗಿದೆ. ಮುಂಬರುವ ದಿನಗಳಲ್ಲಿ ನಿಮ್ಮೆಲ್ಲರನ್ನೂ ಹೆಚ್ಚಾಗಿ ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತೇನೆ. ನಿಮ್ಮ ಆರೈಕೆಯೂ ಬೇಕಾಗುತ್ತದೆ. ನನಗೆ ನನ್ನ ಸಮಾಜದ ಮೇಲೆ ಅಭಿಮಾನ, ಪ್ರೀತಿ ಇರುವುದಕ್ಕೋಸ್ಕರವೇ ರಾಜಕಾರಣಕ್ಕೆ ಬಂದೆ. ಐಎಎಸ್ ಕೋಚಿಂಗ್ ಸೆಂಟರ್ ಕಟ್ಟಿ ಎಲೆಮರೆಯ ಕಾಯಿಯಂತೆ ಇರಬಹುದಿತ್ತು. ಆದ್ರೆ ಕುರುಬ ಸಮಾಜದ ಮಕ್ಕಳು, ಬಡವರ ಮಕ್ಕಳು ಮತ್ತು ಶೋಷಿತರಿಗೆ ವಿಶೇಷ ಕಾಳಜಿ ವಹಿಸಿ ಕೋಚಿಂಗ್ ನೀಡಲಾಗುತ್ತಿದೆ ಎಂದ ಅವರು, ಹೆಚ್ಚಿನ ಸೇವೆ ಮಾಡಲು ಇರುವುದು ರಾಜಕೀಯ ಒಂದೇ ಮಾರ್ಗ ಎಂದು ಅರಿತು ರಾಜಕಾರಣಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
ನಾನು ಬೆಂಗಳೂರಿನಲ್ಲಿ ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸಿದ ಬಳಿಕ ಮೈಸೂರಿಗೆ ಸಮಾಜದ ಮುಖಂಡರು ಬಂದಿದ್ದರು. ದಾವಣಗೆರೆಗೆ ಹೋದರೆ ಶಾಮನೂರು ಶಿವಶಂಕರಪ್ಪ ಕುಟುಂಬ ಹಾಗೂ ಮೈಸೂರಿಗೆ ಬಂದರೆ ಸಿಎಂ ಸಿದ್ದರಾಮಯ್ಯರ ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂದಿದ್ದರು. ಆಗ ಮೈಸೂರಿಗೆ ಆಹ್ವಾನಿಸಿದ್ದರು. ತಾಲೂಕುಗಳು ಪರಿಚಯ ಇವೆ. ನನ್ನ ತಂದೆ ಅಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ನಾನೂ ಪಿಡಿಒ ಆಗಿ ಕೆಲಸ ಮಾಡಿದ್ದೆ ಎಂಬ ಕಾರಣಕ್ಕೆ ಕರೆದಿದ್ದರು. ಇನ್ನು ದಾವಣಗೆರೆಗೆ ಬಂದುಬಿಡಿ ಎಂಬ ಆಹ್ವಾನವೂ ಇತ್ತು. ಆಗ ಮೈಸೂರು ಅಥವಾ ದಾವಣಗೆರೆಗೆ ಹೋಗಬೇಕಾ ಎಂಬ ಗೊಂದಲ ಉಂಟಾಗಿತ್ತು. ಅಂತಿಮವಾಗಿ ದಾವಣಗೆರೆಗೆ ಬಂದು ಜನರ ಪ್ರೀತಿ, ವಿಶ್ವಾಸ, ನಂಬಿಕೆಗೆ ಕಟ್ಟಿಬಿದ್ದು ಸ್ಪರ್ಧೆ ಮಾಡಿ ಹಲವು
ಪಾಠ ಕಲಿತೆ ಎಂದು ನೆನಪು ಮಾಡಿಕೊಂಡರು.
ನಾನು ಬೆಳೆದ ವಾತಾವರಣ, ನಾನು ಶಿಕ್ಷಣ ಪಡೆದಿದ್ದು, ತಂದೆ ಕುರುಬರ ಹಾಸ್ಟೆಲ್ ನಲ್ಲಿ ಉಳಿದು ಓದಿ ಇಲ್ಲೇ ಕೆಲಸ ಮಾಡಿದವರು. ತಾಯಿಯೂ ಇದೇ ಊರಿನವರು. ಸಂಬಂಧಿಕರೂ ಇದ್ದಾರೆ. ಹಾಗಾಗಿ, ದಾವಣಗೆರೆಗೆ ಬಂದರೆ ಒಳ್ಳೆಯ ರಾಜಕಾರಣ ಮಾಡಬಹುದು ಎಂದುಕೊಂಡು ಬಂದೆ. ಇಲ್ಲಿಗೆ ಬಂದ ಮೇಲೆ ಗೊತ್ತಾಗಿದ್ದು ದಾವಣಗೆರೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿ ಇದ್ದು, ಪ್ರಜಾಪ್ರಭುತ್ವ ಅಭಿವೃದ್ಧಿಗೆ ಮಾರಕ ಎಂಬುದು ಓದಿಕೊಂಡು ತಿಳಿದುಕೊಂಡಿದ್ದ ನಮಗೆ ಅರಿವಾಯಿತು. ಮೈಸೂರಿನಲ್ಲಿ ಈ ಪರಿಸ್ಥಿತಿ ಇಲ್ಲ, ದಾವಣಗೆರೆಯಲ್ಲಿ ಇದೆ ಎಂದು ತಿಳಿಸಿದರು.
ಮುಡಾ ಹಗರಣದಲ್ಲಿ ಭ್ರಷ್ಟಾಚಾರ ಇಲ್ಲದೇ ಉತ್ತಮ ಆಡಳಿತ ನೀಡಿದ್ದ ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸಿ, ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ನಡೆದಿತ್ತು. ಆಗ ನೈತಿಕವಾಗಿ ಸಿಎಂಗೆ ಬೆಂಬಲಿಸಿದ್ದೆ. ಆಗ ಶಾಮನೂರು ಶಿವಶಂಕರಪ್ಪರು ಯಾವುದೇ ಹೇಳಿಕೆ ನೀಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಪ್ರಮುಖ ಕಾರಣ ಸಿದ್ದರಾಮಯ್ಯನವರು. ಆದರೂ ಯಾಕೆ ಬೆಂಬಲ ನೀಡಿಲ್ಲವೆಂದು ಮೊದಲು ಪ್ರಶ್ನೆ ಮಾಡಿದ್ದೇ ನಾನು. ನಾವು ಯಾವಾಗಲೂ ಧೈರ್ಯದಿಂದ ಪ್ರಶ್ನೆ ಮಾಡಿದಾಗ ಬಿಸಿ ತಟ್ಟುತ್ತದೆ.
ಮೈಸೂರಿನಲ್ಲಿ ಸಿದ್ದರಾಮಯ್ಯರ ಪರ ಕಾಂಗ್ರೆಸ್ ದೊಡ್ಡ ಸಭೆ ಆಯೋಜಿಸಿತ್ತು. ಆ ಕ್ಷಣ ಸ್ವಾಭಿಮಾನ ಬಿಟ್ಟು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿದ್ದರೂ ಹೋಗಿದ್ದೆ. ಬೆಳೆಯುವವರನ್ನು ತುಳಿಯುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿದೆ ಎಂಬುದು ಎಲ್ಲರಿಗೂ ಗೊತ್ತು. ವೇದಿಕೆ ಮೇಲೆ ಯಾರೂ ಕರೆಯಲಿಲ್ಲ. ಕೈಕಟ್ಟಿ ನಿಂತಿದ್ದೆ. ಸೇವಾದಳದಲ್ಲಿದ್ದ ಹಾಲಪ್ಪನವರು ಗುರುತಿಸಿ ವೇದಿಕೆ ಮೇಲೆ ಕೂರಿಸಿದರು ಎಂದು ವಿವರಿಸಿದರು.
ಯಾವಾಗ ನಮ್ಮ ಜೀವನ ಗಟ್ಟಿ ಇರುತ್ತದೆಯೋ, ಸ್ವಾಭಿಮಾನಿಯಾಗಿ, ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಪ್ರಬಲರಾಗಿದ್ದರೆ ಯಾರಿಗೂ ಹೆದರುವ ಪ್ರಶ್ನೆ ಇಲ್ಲ. ಸಮಾಜದವರು, ಶೋಷಿತರಿಗೆ ಸ್ಥಾನಮಾನ ಕೊಟ್ಟಿದ್ದಕ್ಕೆ ಧನ್ಯವಾದ ಹೇಳೋಣ. ಹಾಗೆಂದು ಗುಲಾಮರಾಗಿ ಬದುಕುವುದು ಬೇಡ ಎಂದು ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು.
ಕುರುಬ ಜಯಂತಿ ಮಹತ್ವದ್ದು. ಇತಿಹಾಸ, ಸಂಸ್ಕೃತಿ ಅರಿವಾದಾಗ ನಮ್ಮಲ್ಲಿ ಬಾಂಧವ್ಯ, ಆತ್ಮೀಯತೆ, ಒಗ್ಗಟ್ಟು ಬೆಳೆಯುತ್ತದೆ. ಎರಡು ತಿಂಗಳಿಗೊಮ್ಮೆ ನಾವೆಲ್ಲರೂ ಸೇರೋಣ. ನಾವು ತಪ್ಪು ಮಾಡಿದ್ದರೆ ತಿಳಿಸಿ ಸರಿಪಡಿಸಿಕೊಳ್ಳುತ್ತೇವೆ. ಪದೇ ಪದೇ ಇಂಥ ಕಾರ್ಯಕ್ರಮಗಳು ನಡೆದರೆ ವಿಚಾರ ವಿನಿಮಯ, ಚಿಂತನ -ಮಂಥನ ಆಗುತ್ತದೆ. ಎಲ್ಲರನ್ನೂ ಬೆಳೆಸೋಣ. ಆಗ ಬೇರೆಯವರಿಗೆ ಭಯ ಹುಟ್ಟುತ್ತದೆ. ಒಳ್ಳೆಯ ವಿಚಾರ, ಪ್ರಾಮಾಣಿಕತೆ, ಉದ್ದೇಶ ಇದ್ದರೆ ಸಮಾರಂಭಕ್ಕೆ ಜನರು ಕರೆಯದೇ ಇದ್ದರೂ ಬಂದೇ ಬರುತ್ತಾರೆ. ಆಗ ದೊಡ್ಡ ಶಕ್ತಿಯಾಗಿ ಬೆಳೆದೇ ಬೆಳೆಯುತ್ತೇವೆ. ಇಂಥ ಅನಿವಾರ್ಯತೆಯೂ ಇದೆ ಎಂದು ಪ್ರತಿಪಾದಿಸಿದರು.
ಸಮಾಜದ ಅಧಿಕಾರಿಗಳು ಆತಂಕದಲ್ಲಿದ್ದಾರೆ. ಪೋಸ್ಟಿಂಗ್, ಬಡ್ತಿ ಸೇರಿದಂತೆ ಸಮಸ್ಯೆಗಳು ಬಂದರೆ ಯಾರ ಬಳಿ ಹೋಗಬೇಕು ಎಂಬ ಪ್ರಶ್ನೆ ಎದ್ದಿದೆ. ರಾಜಕಾರಣ ಮತ್ತು ಸಮಾಜದ ಮಧ್ಯೆ ಸೇತುವೆಯಾಗಿರುವುದು ಅಧಿಕಾರಿಗಳು. ನಮ್ಮ ಸಮಾಜದವರು, ಶೋಷಿತರಿಗೆ ಸೌಲಭ್ಯ ತಲುಪಿಸಲು ಕಷ್ಟವಾಗುತ್ತದೆ. ಇನ್ನಾರಿಗೋ ಗುಲಾಮಗಿರಿಯಾಗಿ ಇರಬೇಕಾಗುತ್ತದೆ. ಸ್ವಾಭಿಮಾನಕ್ಕೆ ವಿರುದ್ಧವಾಗಿ ಹೋಗುವಂಥ ಸಮಯ ಬರುತ್ತದೆ. ನಮ್ಮ ಭಯ, ಸ್ವಹಿತಾಸಕ್ತಿ ಮರೆತು ಸಂಘಟಿತರಾಗೋಣ. ಪ್ರತಿಭೆಗಳಿಗೆ ವೇದಿಕೆಗಳನ್ನು ಸೃಷ್ಟಿ ಕಲ್ಪಿಸಿಕೊಡೋಣ ಎಂದು ವಿನಯ್ ಕುಮಾರ್ ಹೇಳಿದರು.
Read also : ಬಾಲಕನನ್ನು ಅಡಕೆ ಮರಕ್ಕೆ ಕಟ್ಟಿ ಹಲ್ಲೆ : ಇಬ್ಬರ ಬಂಧನ
ಹೊಸದುರ್ಗ ಶ್ರೀ ಕನಕ ಗುರುಪೀಠ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ. ಉದಯ ಶಂಕರ್ ಒಡೆಯರ್ ಅವರಿಗೆ ಹಾಲುಮತ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಕನಕ ಪಟ್ಟಣ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಚ್. ಜಿ. ಸಂಗಪ್ಪ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕಿಕೆರೆ ಸಿದ್ಧಪ್ಪ, ರೈತ ಹೋರಾಟಗಾರ ಸತೀಶ್ ಕೊಳೇನಹಳ್ಳಿ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಹೆಚ್. ಜಿ. ಗಣೇಶಪ್ಪ, ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಭಕ್ತ ಕನಕದಾಸ ಸಂಗೊಳ್ಳಿ ಹೋರಾಟ ಸಮಿತಿ ಅಧ್ಯಕ್ಷ ಪಿ. ಜೆ. ರಮೇಶ್, ಎಸ್. ಎಂ. ಸಿದ್ದಲಿಂಗಪ್ಪ, ಎಂ. ಮಂಜುನಾಥ್, ಕುಂಬಳೂರು ವಿರುಪಾಕ್ಷಪ್ಪ, ಹೆಚ್. ವೈ. ಶಶಿಧರ್ ಮತ್ತಿತರರು ಹಾಜರಿದ್ದರು.