ದಾವಣಗೆರೆ: ಮಹಿಳೆ ಆರ್ಥಿಕ ಸ್ವಾವಲಂಬಿಯಾಗಿ, ಸ್ವಾಭಿಮಾನಿಯಾಗಿ, ಉದ್ಯಮಿಯಾಗಿ ಬೆಳೆಯಬೇಕಾಗಿದೆ. ಮಹಿಳಾ ಶಕ್ತಿ ದೇಶದ ಅತ್ಯುನ್ನತ ಶಕ್ತಿಯಾಗಿದ್ದು, ಆತ್ಮಸ್ಥೈರ್ಯ ಬೆಳೆಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ವಿರಕ್ತಮಠದ ಡಾ.ಬಸವ ಪ್ರಭು ಸ್ವಾಮೀಜಿ ಹೇಳಿದರು.
ನಗರದ ಶ್ರೀ ಅಂಬಾಭವಾನಿ ಕಲ್ಯಾಣ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ದಾವಣಗೆರೆ, ಪೂಜಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ದಾವಣಗೆರೆ ಎ ವಲಯ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮ ಸುಭೀಕ್ಷೆಗಾಗಿ ವರಮಹಾಲಕ್ಷ್ಮಿ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಗೆ `ಸುಜ್ಞಾನ ನಿಧಿ ಶಿಷ್ಯವೇತನ’ ಮಂಜೂರಾತಿ ಪತ್ರ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಮಹಿಳೆಯರು ಸಂಘಟಿತರಾಗಿ ಕಷ್ಟದಲ್ಲಿರುವ, ನೋಂದವರ ಕಣ್ಣೀರು ಒರೆಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಘಟನೆಗಳು ಮಾಡಬೇಕಾಗಿದೆ ಎಂದರು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಮ ಸಮಾಜ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಮಹಿಳೆಗೂ ಸ್ವಾತಂತ್ರ್ಯ, ಸಮಾನತೆ ನೀಡಿದರು. ಶಿವಶರಣೆ ಅಕ್ಕಮಹಾದೇವಿ ವಿಶ್ವದ ಮೊದಲ ಕವಯತ್ರಿಯಾಗಿ ಹೊರಹೊಮ್ಮಲು ಸಾಧ್ಯವಾಯಿತು. ಅಂಬೇಡ್ಕರ್ ಅವರ ಸಂವಿಧಾನ ಸಹ ಮಹಿಳೆಗೆ ಅನೇಕ ಹಕ್ಕುಗಳನ್ನು ನೀಡಿದೆ. ಅದರಲ್ಲಿ ಪ್ರಮುಖವಾಗಿ ಆಸ್ತಿ ಖರೀದಿಸುವ, ಪಿತ್ರಾರ್ಜಿತ ಆಸ್ತಿಯಲ್ಲೂ ಸಮನಾಗಿ ಆಸ್ತಿ ಪಾಲು ಕೇಳುವ ಅವಕಾಶವನ್ನೂ ಸಹ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿಗಳಿಗೆ ಗೌರವ ಕೊಡುವ ಮನೋಭಾವ ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ಮೊಬೈಲ್ ಗೀಳು, ಗಾಂಜಾ, ಅಫೀಮು, ಗುಟುಕಾ, ಸಿಗರೇಟು ಮುಂತಾದ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಿ, ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕಾದ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಹೇಳಿದರು.
ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಅಗತ್ಯವಿದೆ. ಬಾಲ್ಯದಲ್ಲಿಯೇ ಸರಿಯಾದ ಶಿಕ್ಷಣ ನೀಡಿದರೆ ದೇಶದ ಸತ್ಪ್ರಜೆಯಾಗಲು ಸಾಧ್ಯವಿದೆ. ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, `ಮನೆಯೆ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು’ ಎನ್ನುವಂತೆ ತಾಯಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕಾಗಿದೆ. ಧರ್ಮ, ಸಂಸ್ಕೃತಿ, ನೆಲ, ಜಲ ಕಾಪಾಡುವಲ್ಲಿ ತಾಯಂದಿರ ಪಾತ್ರ ಕೂಡ ಪ್ರಮುಖವಾದುದು ಎಂದರು.
ಡಿವೈಎಸ್ಪಿ ರುದ್ರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷರಾದ ಚೇತನಾ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಚಿತ್ರದುರ್ಗದ ಪ್ರಾದೇಶಿಕ ನಿರ್ದೇಶಕರಾದ ಬಿ. ಗೀತಾ, ದಾವಣಗೆರೆ ನಿರ್ದೇಶಕ ಎಂ.ಲಕ್ಷ್ಮಣ್, ಯೋಜನಾಧಿಕಾರಿ ಶ್ರೀನಿವಾಸ್, ಕೃಷಿ ಅಧಿಕಾರಿ ಪ್ರವೀಣ್, ಮೇಲ್ವಿಚಾರಕರಾದ ನೇತ್ರಾವತಿ, ನವೀನ್, ದಾಕ್ಷಾಯಿಣಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.