ದಾವಣಗೆರೆ (Davanagere): ಯಾವುದೇ ಮತ, ಧರ್ಮ, ಭೇದಗಳಿಲ್ಲದೆ ಎಲ್ಲಾ ಮಕ್ಕಳಿಗೂ ಉಚಿತ ಪುಸ್ತಕಗಳನ್ನು ವಿತರಿಸಿದ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಹೇಳಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರುವಾರ ಡಾ.ಎಚ್.ಎಫ್. ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ದಾವಣಗೆರೆ ಘಟಕ ಮತ್ತು ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಆಶ್ರಯದಲ್ಲಿ ಆಯೋಜಿಸಿದ್ದ ಪುಸ್ತಕ ವಾಚನ ಸಹಾಯ ಯೋಜನೆಯ 23 ಶಾಲೆಗಳ ಫಲಾನುಭವಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆ ದೇಶಗಳಲ್ಲಿ ಲಿಪಿಯೇ ಇಲ್ಲದಿರುವಾಗ ಭಾರತದಲ್ಲಿ ಗುರುಕುಲಗಳಿದ್ದವು. ಸಾಹಿತ್ಯ ಉತ್ತುಂಗದಲ್ಲಿತ್ತು. ಕೈಗಾರಿಕಾ ನಗರ ಹಾಗೂ ವಾಣಿಜ್ಯ ನಗರವಾದ ದಾವಣಗೆರೆ ಇಂದು ಶೈಕ್ಷಣಿಕ ನಗರವಾಗಿದೆ. ಅದಕ್ಕೆ ಕಾರಣವೆಂದರೆ ಅನೇಕ ದಾನಿಗಳು ಶೈಕ್ಷಣಿಕ
ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕೋಶ ಓದುವುದರಿಂದ ದೇಶ ಸುತ್ತುವುದರಿಂದ ಜ್ಞಾನ ಹೆಚ್ಚಾಗುತ್ತದೆ ಎಂದರು.
ಮೊಬೈಲ್ ತಲೆ ತಗ್ಗಿಸಿ ನನ್ನನ್ನು ನೋಡಿ, ನಿಮ್ಮನ್ನು ತಲೆ ಎತ್ತದಂತೆ ಮಾಡುತ್ತೇನೆ ಎನ್ನುತ್ತದೆ. ಪುಸ್ತಕ ತಲೆ ತಗ್ಗಿಸಿ ನನ್ನನ್ನು ಓದಿ ನಿಮ್ಮನ್ನು ತಲೆ ಎತ್ತಿ ಬಾಳುವಂತೆ ಮಾಡುತ್ತೇನೆ ಎನ್ನುತ್ತದೆ. ಆದರಿಂದ ಮಕ್ಕಳು, ಮೊಬೈಲ್ ನೋಡುವುದನ್ನು
ಬಿಟ್ಟು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮಕ್ಕಳ ತಜ್ಞ ಡಾ. ಸಿ.ಆರ್. ಬಾಣಾಪುರಮಠ್ ಮಾತನಾಡಿ, ಡಾ.ಎಚ್.ಎಫ್.ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ 8 ಜಿಲ್ಲೆಗಳಲ್ಲಿ ಪುಸ್ತಕ ಪಂಚಮಿ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ದಾವಣಗೆರೆಯಲ್ಲಿ ಇದು ಬೇರೆ ಜಿಲ್ಲೆಗಳಿಗಿಂತ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಏಕೆಂದರೆ ದಾವಣಗೆರೆ ದಾನಿಗಳ ನಗರವಾಗಿದ್ದರಿಂದ ಅತಿ ಹೆಚ್ಚು ದಾನಿಗಳೂ
ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಕೊಡಲು ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.
ಈಶ್ವರಮ್ಮ ಶಾಲೆಯ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್ ಮಾತನಾಡಿ, ಪ್ರಪಂಚದಲ್ಲಿ ಸಾಧನೆ ಮಾಡಿದವರೆಲ್ಲರೂ ಮೊಬೈಲ್ ನೋಡಿದವರಲ್ಲ. ಪುಸ್ತಕಗಳನ್ನು ಓದಿ ಸಾಧನೆ ಮಾಡಿದ್ದಾರೆ. ಪುಸ್ತಕಗಳನ್ನು ಓದಿ ಜ್ಞಾನ ಮತ್ತು ಕೌಶಲ್ಯಗಳನ್ನು
ಬೆಳೆಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಸುಜಾತ ಕೃಷ್ಣ, ಮಕ್ಕಳಿಗೆ ಜೀವನದಲ್ಲಿ ಹಿಂದೆ ಗುರು, ಮುಂದೆ ಗುರಿ ಇರಬೇಕು. ಮೊದಲು ಶಿಕ್ಷಕರು ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರೆ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುತ್ತಾರೆ. ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಹೆಚ್ಚು ಅಧ್ಯಯನ ಶೀಲರಾಗಬೇಕೆಂದು ಸಲಹೆ ನೀಡಿದರು.
ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಬೂಸ್ನೂರ್, ವಿ.ಸಿ.ಪುರಾಣಿಕ ಮಠ್ ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ, ಎ.ಆರ್.ಉಷಾರಂಗನಾಥ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಭಾಗವಹಿಸಿದ್ದರು. ಪ್ರಕಾಶ್ ಬೂಸ್ನೂರ್ ಸ್ವಾ ಗತಿಸಿದರು.
Read also : Davanagere | ಡಿ.13 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ