ದಾವಣಗೆರೆ (Davanagere): ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಉತ್ತಮಮೌಲ್ಯಗಳನ್ನು ಬಿತ್ತಬೇಕು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ದಾವಣಗೆರೆಯ ವಾರ್ಡ್ ನಂ.21 ರ ಬಸಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಕ್ಕಳ ಚಟುವಟಿಕೆಗಳ ಬಗ್ಗೆ ಪೋಷಕರು ಪಟ್ಟಿ ಮಾಡಿ ಅವರು ಉತ್ತಮ ವಿದ್ಯಾಭ್ಯಾಸಗೈದು ಸಾಧನೆ ತೋರುವಂತೆ ಮಾಡಬೇಕು ಎಂದರು.
ಬಸಾಪುರ ಗ್ರಾಮಸ್ಥರೆಲ್ಲಾ ಕೈಜೊಡಿಸಿ ಶಾಲೆ ಹಾಗೂ ಇಲ್ಲಿನ ಪ್ರಾಥಮಿಕ ಆರೊಗ್ಯ ಕೇಂದ್ರದ ಅಭಿವೃದ್ದಿಗೆ ಸಹಕಾರ ನೀಡಬೇಕು.ಹಳೆಯ ವಿದ್ಯಾರ್ಥಿಗಳ ಸಂಘ ರಚಿಸುವ ಮೂಲಕ ಶಾಲೆಯ ಉನ್ನತಿಗೆ ಸಹಕಾರ ನೀಡಬೇಕು. ಐದು ವರ್ಷಕ್ಕೊಮ್ಮೆ ಎಲ್ಲಾ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಶಾಲೆಯ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಶಾಲೆಯ ಋಣ ತೀರಿಸಬೇಕು ಹಾಗೂ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಬೇಕು. ಬಸಾಪುರದ ಶಾಲೆಯ ಶಿಕ್ಷಕರು ಉತ್ತಮ ಶಿಕ್ಷಣ ಹಾಗೂ ನಿರಂತರ ಕಲಿಕೆ ಬಗ್ಗೆ ಮಕ್ಕಳಿಗೆ ತಿಳಿಸುತ್ತಿರುವುದು ಉತ್ತಮಕೆಲಸವಾಗಿದೆ ಎಂದು ಶ್ಲಾಘಿಸಿದರು.
ಮಕ್ಕಳಿಗೆ ಶಿಸ್ತು ಪಾಲನೆ ಮುಖ್ಯ.ಪ್ರತಿಯೊಬ್ಬರೂ ಓದಿಗೆ ಪ್ರಾಮುಖ್ಯತೆ ನೀಡಬೇಕು.ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳಿರುತ್ತವೆ ಅದನ್ನು ಪಡೆದುಕೊಂಡು ಮನನಮಾಡಬೇಕು.ಒಳ್ಳೆಯ ಸಮಾಜ ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಎಲ್ಲಾ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಇದರಿಂದ ಅವರಲ್ಲಿ ಕ್ರಿಯಾತ್ಮಕತೆ ಹೆಚ್ಚಾಗುತ್ತದೆ.ಮನೆಯೇ ಮೊದಲ ಪಾಠ ಶಾಲೆ ಆದ ಕಾರಣ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಬೇಕು.ಸರಿಯಾದ ಪೋಷಣೆಯ ಜೊತೆಗೆ ಮೌಲ್ಯ ತಿಳಿಸಬೇಕು.ಮಕ್ಕಳಿಗೆ ಆಸ್ತಿ ಮಾಡುವುದು ಪ್ರಾಮುಖ್ಯತೆಯಾಗಬಾರದು ಅವರಿಗೆ ನಮ್ಮ ಸಮಯ ಕೊಡಬೇಕು ಅದರಲ್ಲೂ ಬೆಳೆಯುವ ಹಂತದಲ್ಲಿ ಮಕ್ಕಳಿಗೆ ಸ್ವಲ್ಪ ಸಮಯ ನೀಡಬೇಕು ಎಂದರು.
ಹಿರಿಯರಾದ ಶಾಮನೂರು ಶಿವಶಂಕರಪ್ಪಾಜಿಯವರು ಎಸ್ ಎಸ್ ಕೇರ್ ಟ್ರಸ್ಟ್ ಮೂಲಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅನೇಕ ಶಿಬಿರ ಆಯೋಜಿಸಿದ್ದಾರೆ.ಇಲ್ಲಿನ ಅಭಿವೃದ್ದಿಗೆ ಒಂದು ಕೋಟಿ ವೆಚ್ಚದಲ್ಲಿ ಅನುದಾನ ನೀಡಿದ್ದಾರೆ.ಶಾಸಕರಾದ ಶಾಮನೂರು ಶಿವಶಂಕರಪ್ಪಾಜಿಯವರು ಶೇ 90 ರಷ್ಟು ಕೆಲಸ ಮಾಡಿದ್ದಾರೆ.ಅವರಿಗೆ ಆನೆಕೊಂಡ ಹಾಗೂ ಬಸಾಪುರ ಗ್ರಾಮದ ಬಗ್ಗೆ ಒಲವು ಯಾವಾಗಲೂ ಹೆಚ್ಚಾಗಿದೆ.ಕ್ಷೇತ್ರಕ್ಕೆ ಜನರ ಸಮಸ್ಯೆ ಆಲಿಸುವ ಜೊತೆಗೆ ಜನರ ಕೆಲಸಮಾಡುವ ಶಾಮನೂರು ಕುಟುಂಬಕ್ಕೆ ಸದಾ ಬೆಂಬಲನೀಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳಿಂದ ಮಕ್ಕಳಿಗೆ ಹಾನಿಯಾಗುತ್ತಿದೆ ಕಾರಣ ಸ್ಕ್ರೀನ್ ಟೈಮ್ ಇದರಿಂದ ಮಕ್ಕಳ ಕಣ್ಣುಗಳಿಗೆ ತೊಂದರೆಯಾಗಬಹುದು ಆದ್ದರಿಂದ ಸಾಧ್ಯವಾದಷ್ಟು ಮೊಬೈಲ್ ಗಳಿಂದ ದೂರವಿಟ್ಟು ಅವರಿಗೆ ಪೋಷಕರು ಸಮಯ ನೀಡಬೇಕು ಎಂದರು.
ಇದೇ ವೇಳೆ ಗ್ರಾಮಸ್ಥರು ಸಂಸದರಿಗೆ ಆರತಿ ಬೆಳಗಿ ಸಾರೋಟಿನಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಕರೆತಂದಿದ್ದು ವಿಶೇಷವಾಗಿತ್ತು. ಎಂ.ಎಸ್ ಕೊಟ್ರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮೇಯರ್ ಕೆ.ಚಮನ್ ಸಾಬ್ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೆ.ಹೆಚ್. ಗುರುಸಿದ್ದಯ್ಯ ಪಾಲಿಕೆ ಸದಸ್ಯರಾದ ಶಿವಲೀಲಾ ಕೊಟ್ರಯ್ಯ, ಸಂಸದರ ಆಪ್ತ ಕಾರ್ಯದರ್ಶಿ ಹರೀಶ್ ಬಸಾಪುರ,ಮಾಜಿ ಉಪಮೇಯರ್ ಗೌಡ್ರ ರಾಜಶೇಖರಪ್ಪ,ಡಿಡಿಪಿಐ ಜಿ. ಕೊಟ್ರೇಶ್,ಬಿಇಒ ಶೇರ್ ಅಲಿ, ಹಿರಿಯ ಪತ್ರಕರ್ತರಾದ ಬಾ.ಮ.ಬಸವರಾಜಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಫಸೀಹ್ ಉದ್ದೀನ್ ಶಾಕೀರ್,ಮಂಜುಳಾ ಸುರೇಂದ್ರಪ್ಪ ಹಾಗೂ ಗ್ರಾಮಸ್ಥರಾದ ಸುರೇಂದ್ರಪ್ಪ, ಮಹೇಶ್ವರಪ್ಪ, ಸಿದ್ದನ ಗೌಡ್ರು, ಕೆಂಪನಹಳ್ಳಿ ಲಿಂಗೇಶ್ವರಪ್ಪ, ನಾಗೇಂದ್ರಚಾರ್, ಮರುಳಪ್ಪ, ಕೊಟ್ರಯ್ಯ, ಲಿಂಗರಾಜ್, ದೇವೇಂದ್ರಪ್ಪ, ಪ್ರಕಾಶ್, ಶಿವ ಕುಮಾರ್, ತಿಪ್ಪೇಸ್ವಾಮಿ, ತಿಪ್ಪೇಶ್, ಮೌನೇಶ್ವರ ಚಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Read also : ಎಸ್‌ಡಿಪಿಐ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಣೆ