ತಿರುಗಾಮುರುಗಾ ಎಣಿಸಿದರೂ ಎರಡೇ ಎರಡು ಸೀಟು!
ಅಧಿಕಾರ ಅಲ್ಲಾಡಿಸುವುದಿಲ್ಲ ಎರಡರ ಅಂಕಿ!
ಉಸಿರಾಡುವ ಜನರಿಗಿಂತ ದೊಡ್ಡದೇನಲ್ಲ ಊರು!
ತೊಡುವ ಕೌಪೀನ ಕೂಡ!
ಬಿದ್ದರೆ ಮಾತ್ರ ಸುದ್ದಿ ಸೂರು!
ಕ್ಯಾಮೆರಾಗಳು
ಕಣ್ಣು ಮಿಟುಕಿಸಿದವು
ಟೀವಿ,ಪೆನ್ನುಗಳಿಗೂ ನಶೆಯೇರಿತ್ತು
ಬೆತ್ತಲೆ ಮೆರವಣಿಗೆಯ ದಿನ
ನಾನು ಬದುಕಿದ್ದೆ ಎಂದು
ಭಾವಿಸಿದ್ದು ತಪ್ಪಾಯಿತು.
ಅರ್ಧನಿಮೀಲಿತ ನೇತ್ರ ಬುದ್ಧ,
ಬೇಡವೆಂದರೂ ಕುದುರೆ ಮೇಲೆ ಕೂಡಿಸಿದ ಬಸವಣ್ಣ
ಸೂಟು ಕಿತ್ತೆಸೆದ ಬಾಪೂ…
ತೊಟ್ಟು ಬೆಳೆದ ಬಾಬಾ
ಕಾಲವೀಗ….
ಬಹುದೂರ ಚಲಿಸಿದೆ
ಕಣ್ಣೀರು ಹೇಗೆ ಬರುತ್ತದೆ?
ಎಲ್ಲಿಂದ ಬರುತ್ತದೆ?
ಕಾರಣ ಬೇಕಿಲ್ಲ ಸುರಿವ ಎದೆಗೆ
ಅಲ್ಲೊಬ್ಬ ತಾಯಿ ಬೆತ್ತಲೆ,
ಇಲ್ಲೊಬ್ಬ ಸಹೋದರಿಯ ಬೋಳಿಸಿದ ತಲೆ
ನೆತ್ತರು ಕುಡಿದಿದೆ ಪುಣ್ಯಭೂಮಿ!
ಸೂರ್ಯವಂಶದ ರಾಮಾಯಣ
ಚಂದ್ರವಂಶದ ಮಹಾಭಾರತ ಅಸಹಾಯಕ ಪಾತ್ರಗಳ ಕಣ್ಣೀರು
ಪತ್ರಿಕೆಗಳ ತುಂಬಾ ಹಚ್ಚಿ ಸುರಿಯುತಿದೆ ಒಂದೇ ಸಮನೆ
ಕೊಲೆಯನ್ನೂ,ಅತ್ಯಾಚಾರದ ನೋವನ್ನೂ ಉಂಡು
ಮೌನವಾಗಿರುವುದು ಎಷ್ಟೊಂದು ಕಷ್ಟ!
ಹಡೆದ ಮಕ್ಕಳೆದುರೇ
ಬೆತ್ತಲೆ ಮೈಥುನಕ್ಕಿಳಿದಿದೆ
ನಿರ್ಭಾವುಕ ಜಗತ್ತು!
ಹಚ್ಚಿ ಸುರಿಯುತ್ತಲೇ ಇದೆ ಕಾಲ!
ಕಾಲ ಸುರಿಸಿದ ಹನಿಗಳು
ಹರಿದರೆ ಅಕ್ಷರ
ಮಡುಗಟ್ಟಿದರೆ ಮಣಿಪುರ!
ಹನಿಗಳಲೂ
ರೆಪ್ಪೆ ಬಡಿಯದೆ ನಿಂತ ಗಾಯಗೊಂಡ
ಬುದ್ಧನ ಜೋಡಿಕಣ್ಣು!
ಬಿ.ಶ್ರೀನಿವಾಸ