ದಾವಣಗೆರೆ ನ.10: ಕಾನೂನು ಸೇವಾ ಪ್ರಾಧಿಕಾರದ ಕಾಯ್ದೆಯಡಿ ವಿಚಾರಣಾಧೀನ ಕೈದಿಗಳಿಗೆ ಉಚಿತ ಮತ್ತು ಗುಣಮಟ್ಟದ ಕಾನೂನು ಸೇವೆಗಳನ್ನು ಕಡ್ಡಾಯವಾಗಿ ಒದಗಿಸಲಾಗುವುದು ಎಂದು ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣನವರ್ ಹೇಳಿದರು.
ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಂದ ಈ ಸೇವೆಗಳನ್ನು ಒದಗಿಸಲಾಗಿದೆ. ಉಚಿತ ಕಾನೂನು ನೆರವು ಎಲ್ಲಾ ವಿಚಾರಣಾಧೀನ ಕೈದಿಗಳು, ಅವರು ಅರ್ಹತಾ ಮಾನದಂಡಗಳನ್ನು ಪೂರೈಸಿದಲ್ಲಿ ಅಥವಾ ಮಹಿಳೆಯರು, ಮಕ್ಕಳು ಇತ್ಯಾದಿ ವಿಶೇಷ ವರ್ಗಕ್ಕೆ ಸೇರಿದ್ದರೆ, ಉಚಿತ ಕಾನೂನು ನೆರವು ಪಡೆಯಲು ಅರ್ಹರಾಗಿರುತ್ತಾರೆ. ಜೈಲು ಕಾನೂನು ನೆರವು ಕೇಂದ್ರಗಳು ಕರ್ನಾಟಕದ ಪ್ರಮುಖ ಜೈಲುಗಳಲ್ಲಿ ಇಂತಹ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗಿದೆ.
ಇಲ್ಲಿ ಕಾನೂನು ಸಲಹೆಗಾರರು ಮತ್ತು ಪ್ಯಾರಾ ಲೀಗಲ್ ವಾಲಂಟಿಯರ್ಸ್ ನಿಯಮಿತವಾಗಿ ಭೇಟಿ ನೀಡುತ್ತಾರೆ. ಕೈದಿಗಳ ಕಷ್ಟಗಳನ್ನು ಆಲಿಸಿ, ಅವರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಜಿಗಳಾದ ಜಾಮೀನು, ಪೆರೋಲ್, ಮೇಲ್ಮನವಿ ತಯಾರಿಸಲು ಸಹಾಯ ಮಾಡುತ್ತಾರೆ. ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ರಕ್ಷಣಾ ವಕೀಲರಂತೆ, ಪೂರ್ಣ ಸಮಯ ಮೀಸಲಾದ ವಕೀಲರ ತಂಡವನ್ನು ರಚಿಸಲಾಗಿದೆ. ಕೈದಿಗಳಿಗೆ ಬಂಧನದ ಆರಂಭಿಕ ಹಂತದಿಂದ ಮೇಲ್ಮನವಿ ಹಂತದವರೆಗೆ ಕಾನೂನು ನೆರವು ಮತ್ತು ಪ್ರಾತಿನಿಧ್ಯವನ್ನು ಒದಗಿಸಲಾಗುವುದು. ವಿಚಾರಣಾ ನ್ಯಾಯಾಲಯದಿಂದ ಪ್ರಕರಣ ಇತ್ಯರ್ಥಗೊಂಡಲ್ಲಿ ಅಪೀಲು ಕೂಡ ಸಲ್ಲಿಸಲು ಈ ವಕೀಲರು ಸಕ್ಷಮವಾಗಿರುತ್ತಾರೆ. ದಾವಣಗೆರೆಯಲ್ಲಿ ಈಗಾಗಲೇ ಎಂಟು ಜನ ಪೂರ್ಣ ಪ್ರಮಾಣದ ವಕೀಲರುಗಳನ್ನು ನೇಮಿಸಿಕೊಳ್ಳಲಾಗಿದೆ.
Read also : ನವೆಂಬರ್ 08 :ಕರುನಾಡಿನ ಇಬ್ಬರು ಮಹಾನ್ ಚೇತನಗಳ ಜಯಂತಿ
ರಿಮಾಂಡ್ ಮತ್ತು ಜಾಮೀನು ವಕೀಲರು, ವಿಚಾರಣಾಧೀನ ಕೈದಿಗಳಿಗೆ ನ್ಯಾಯಾಂಗ ಬಂಧನ ವಿಧಿಸುವ ಹಂತದಲ್ಲಿ ಮತ್ತು ಜಾಮೀನು ಪಡೆಯಲು ಸಹಾಯ ಮಾಡಲು ನ್ಯಾಯಾಲಯಗಳಲ್ಲಿ ವಿಶೇಷ ವಕೀಲರನ್ನು ನೇಮಿಸಲಾಗಿದೆ.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಡಿಎಲ್‍ಎಸ್‍ಎ ಕಚೇರಿ ಇದೆ. ಕೈದಿಗಳ ಕುಟುಂಬದವರು ಅಥವಾ ಆಸಕ್ತರು ಅಲ್ಲಿಗೆ ಅರ್ಜಿ ಸಲ್ಲಿಸುವ ಮೂಲಕ ಕಾನೂನು ನೆರವನ್ನು ಪಡಯಬಹುದು. ಕರ್ನಾಟಕ ಕಾರಾಗೃಹ ನಿಯಮಾವಳಿಗಳು ವಿಚಾರಣಾಧೀನ ಕೈದಿಗಳನ್ನು ಶಿಕ್ಷೆಗೆ ಗುರಿಯಾದ ಕೈದಿಗಳಿಂದ ಪ್ರತ್ಯೇಕವಾಗಿ ಇಡುವುದು ಮತ್ತು ಅವರಿಗೆ ಸೂಕ್ತ ವಸತಿ, ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದನ್ನು ಕಡ್ಡಾಯವಾಗಿರುತ್ತದೆ. ವಕೀಲರನ್ನು ಭೇಟಿ ಮಾಡುವ ಸೌಲಭ್ಯವು ಇದರಲ್ಲಿ ಒಂದು ಪ್ರಮುಖ ಹಕ್ಕು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ.ಡಿ.ಆರ್ ಕಟ್ಟಡ, ಹಳೇ ನ್ಯಾಯಾಲಯಗಳ ಸಂಕೀರ್ಣ, ದಾವಣಗೆರೆ-577002. ದೂರವಾಣಿ ಸಂಖ್ಯೆ: 08192-296364, ಇ-ಮೇಲ್: dlsadavangere4@gmail.com ವೆಬ್ ಸೈಟ್ https://districts.
ಕಾರಾಗೃಹದ ಅಧೀಕ್ಷಕರಾದ ಆನಂದ ಭಜಂತ್ರಿ, ವಕೀಲರಾದ ಸೋಹನ್ ಕಟಗಿಹಳ್ಳಿ ಮಠ, ಸುಭಾಷ .ಹೆಚ್, ಕೆಂಚಪ್ಪ ಪೊಲೀಸ್ ಅಧಿಕಾರಿ ಸೋಮಶೇಖರ್ ಉಪಸ್ಥಿತರಿದ್ದರು.
