ಹಸಿದ ಹೊಟ್ಟೆಯಲ್ಲಿ
ಭಾರ ಹೊತ್ತವಳ ಬರುವಿಕೆಗೆ
ಕರುಳಪ್ರೀತಿಯ ಕಣ್ಣುಗಳ ಸದಾ ಕಾಯುವಿಕೆ
ಆಗಲೇ ಉರಿದು ತಣ್ಣಗಾದ
ತನ್ನಲ್ಲೇ ಹರಡಿಕೊಂಡ ಒಲೆಬೆಂಕಿಯ ಬೆತ್ತಲು
ಜಿಬ್ಲದೊಡಲಲ್ಲಿ ನಿಟ್ಟಾದ ರೊಟ್ಟಿಗಳು
ಹಸಿವನ್ನು ರೇಗಿಸುತ್ತಿವೆ.
ಗುಡಿಸಲ ಸುತ್ತ ಹಬ್ಬಿದ
ಬೀದಿ ದೀಪದ ಮಂದ ಬೆಳಕ ಬೇಧಿಸಿ
ಕಣ್ಣುಗಳು ಕಾಯುತ್ತಿವೆ.
ಸತ್ತ ಇರುಳು
ಗೋರಿ ಸೇರುವ ಮೊದಲೆ ಎದ್ದವಳ ನಡೆ
ಗುಡಿಸಲ ಮುಂದಿನ
ಮಂಜಿನ ಪರೆದೆ ಹೊದ್ದ ಗುಡ್ಡದ ಕಡೆಗೆ
ಮುಗಿಲ ಚುಕ್ಕೆಗಳು ಮಾಯವಾಗಿ
ಬಗ್ಗನೆಯ ಬೆಳಕು ಚಿಮ್ಮಲು ಹವಣಿಸುವಾಗ
ಕಾಡಾಡಿ, ಕಟ್ಟಿಗೆಯ ಹೆಣಭಾರ ಹೊತ್ತು
ಗುಡ್ಡದ ನೆತ್ತಿಯ ಇಳಿಜಾರಿನಿಂದ
ಇಳಿವಾಗವಳು ಕಿನ್ನರಲೋಕದ ಸುಂದರಿ
ಶ್ರಮದ ದೇವತೆ!
ಕಟ್ಟಿಗೆ ಮಾರಲು ಊರಾಡಿ,
ಧನಿಕರ ಹೊಲದಲ್ಲಿ ಕೂಲಿಮಾಡಿ
ದಿನ ಸತ್ತು ಕತ್ತಲಕಂಬಳಿ ಹಾಸುವಾಗ
ಗೇಣು ಹೊಟ್ಟೆ ತುಂಬಿಸಲು
ಚೋಟುಕೂಲಿ ಹಿಡುದು
ಕೊಕ್ಕರೆಯಂಥಹ ಕಾಲುಗಳಿಂದ ತೆವಳುತ್ತಾ
ತೆಳುದೇಹದ, ಕಪ್ಪು ಬಣ್ಣ ಅವಳು
ಬೇರೆಯಾರಲ್ಲ, ನನ್ನಮ್ಮ ಲಮಾಣಿ ಶಾಂತ.
ಅವಳಿಗಾಗಿ ಕಾಯುತ್ತಿವೆ ಕಣ್ಣುಗಳು.
ಅವಳುಟ್ಟ ದಾವಣಿಯಲಿ ಇಣುಕುವ ಮೈ
ಪೋತಿಯಾ ಹಾದುಬಂದ ಮೊಲೆಗಳು
ಕಾಲ್ಡಾ ನಾದಗಳಿಗೆ,
ನೂರಾರು ಸೂರ್ಯರನ್ನು ಹಿಡಿದಿಟ್ಡ
ಪೆಟಿಯಾ ಮಿಂಚಿಗೆ
ಕಾಡು ಕಾಯುವನ ಮೀಸೆ, ಕಣ್ಣು ಕುಣಿಯುತ್ತವೆ
ಅನೇಕ ದಾಳಿಗಳ ಎದುರಿಸಿ,
ಅದೆಷ್ಟೋಸಲ
“ಜೀಣಾ ಕಜಕೊ ಲಡಾಯಿ ಛಯಿ”
ಎಂದು ನನ್ನ ತಲೆ ಸವರುತ್ತಾಳೆ.
ನನ್ನ ಕಣ್ಣುಗಳು ಮಂದ ಬೆಳಕ ಬೇಧಿಸಿ
ಅಮ್ಮ ಬರು ದಾರಿಯನ್ನೇ ನಿಟ್ಟಿಸಿವೆ
ನನ್ನ ನೆರಳನ್ನು ನುಂಗುವಷ್ಟು ಕತ್ತಲು ದಪ್ಪವಾಗಿದೆ
ನಾಲ್ಕು ಜನ ಬಂದರು
ತೇಕುತ್ತ, ತೊದಲುತ್ತ, ಬಿಕ್ಕುತ್
ಅಮ್ಮನಿಗೆ ಕರಿನಾಗರ ಕಚ್ಚದೆ ಎಂದರು

ಎಳೆಯುತ್ತಾ ಬಂದಳು.
ಮಂತ್ರವಾದಿ ಬಂದ, ಕೋಲು ತಿರುವಿ
ಏನೇನೋ ಒದರಿದ
ಔಷಧಿಯವನೂ ಬಂದ
ರಾತ್ರಿ ಕಳೆದು ದಿನ ಕಣ್ಣುತೆರೆದಿತ್ತು
ಅಮ್ಮನ ಕಣ್ಣು ಮುಚ್ಚಿತ್ತು
ಒಲೆಯ ಬೆಂಕಿ ನಮ್ಮ ಬದುಕಂತೆ
ತಣ್ಣನೆಯ ಬೂದಿಯಾಗಿತ್ತು.
ನಾವೆಲ್ಲ ಸೂತ್ರ ಹರಿದ ಗಾಳಿಪಟ
ನಮ್ಮೆದೆಯಲ್ಲಿ ದುಃಖದ ಕಡಲು
ಬಿಸಿಲಲ್ಲಿ ಆವಿಯಾಯಿತು.
ನನ್ನೆದೆಯಲ್ಲಿ ಅಮ್ಮನ ಸಾವು ಹೆಪ್ಪುಗಟ್ಟಿದೆ
ಸಂಜೆಯಾಗುತ್ತಲೆ ನನ್ನ ಕಣ್ಣುಗಳು
ಬಾಗಿಲಲ್ಲಿ ಕಾಯುತ್ತವೆ
ಮನೆಯಲ್ಲಿ ಗ್ಯಾಸ್ ಇದೆ
ಕಟ್ಟಿಗೆ ಹೊತ್ತು ಯಾರೇ ಬರಲಿ
ಅವನ್ನೆಲ್ಲಾ ಕೊಂಡು ಭಾರ ಇಳಿಸುವೆ
ದೇಶದ ಹೃದಯಕ್ಕೆ
ಭಾರ ಇಳಿಸುವ ಗುಣವಿದ್ದರೆ !
ಪೇಟಿಯಾ- ಕನ್ನಡಿಯ ಚೂರು ತುಂಬಿದ ಬಟ್ಟೆ,
“ಜೀಣಾ ಕಜಕೊ ಲಡಾಯಿ ಛೆಯಿ – ಬದುಕೆಂಬುದು ಹೋರಾಟ ಕಣೆ)
ಪಿಆರ್. ವೆಂಕಟೇಶ್