ದಾವಣಗೆರೆ : ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಕಂದನಕೋವಿ ಮತ್ತು ಅಣಜಿ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಸಾರ್ವಜನಿಕ ಸೌಲಭ್ಯಗಳು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಕಂದನಕೋವಿ : ಕಂದನಕೋವಿ ಗ್ರಾಮದಲ್ಲಿ ಹಾಲಿನ ಡೈರಿ ಮತ್ತು ನ್ಯಾಯಬೆಲೆ ಅಂಗಡಿಗಳನ್ನು ಪರಿಶೀಲಿಸಿ,ವಿತರಣೆ ಕ್ರಮ ಹಾಗೂ ದಾಖಲೆಗಳ ಪರಿಶುಧ್ಧತೆಯನ್ನು ಪರಿಶೀಲಿಸಿದರು.
ಬಳಿಕ ರೈತರೊಂದಿಗೆ ಸಂವಾದ ನಡೆಸಿ ಅವರ ಕುಂದು-ಕೊರತೆಗಳನ್ನು ಆಲಿಸಿದರು.
ಹೊಸವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡಕ್ಕೆ ಭೇಟಿ ನೀಡಿ, ಮಕ್ಕಳ ಸ್ನೇಹಿ ವಾತಾವರಣ ಒದಗಿಸುವ ಉದ್ದೇಶದಿಂದ ಕಟ್ಟಡದ ಗೋಡೆಗಳಲ್ಲಿ ಆಕರ್ಷಕ ಚಿತ್ತಾರ ಮತ್ತು ಬರಹಗಳನ್ನು ನಿರ್ಮಿಸಲು ಸೂಚನೆ ನೀಡಿದರು.
ಗ್ರಾಮದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿ, ಸಮರ್ಪಕ ನೀರಿನ ಹಂಚಿಕೆ ಗ್ರಾಮದ ಜನರಿಗೆ ಲಭ್ಯವಾಗುವಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.
ಜೊತೆಗೆ, ಗ್ರಾಮ ಸ್ವಚ್ಛತೆ ಕುರಿತು ಗ್ರಾಮಸ್ಥರಿಂದ ನೇರವಾಗಿ ಮಾಹಿತಿಯನ್ನು ಪಡೆದುಕೊಂಡರು.
ಅಣಜಿ ಗ್ರಾಮದಲ್ಲಿ ಪರಿಶೀಲನೆ: ಅಣಜಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿರುವುದು ಗಮನಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗ್ರಾಮೀಣ ಸಂತೆ ಪ್ರದೇಶಕ್ಕೆ ಭೇಟಿ ನೀಡಿ ಕಸ ವಿಲೇವಾರಿ ವ್ಯವಸ್ಥೆಯ ಕುರಿತು ಚರ್ಚಿಸಿ, ಕಸವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Read also : ಹಿರಿಯ ನಾಗರೀಕರ ಬಗ್ಗೆ ಅಸಡ್ಡೆ ಬೇಡ: ನ್ಯಾ. ಮಹಾವೀರ ಮ.ಕರೆಣ್ಣನವರ್
ಅಂಗನವಾಡಿ ಕೇಂದ್ರ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಧಾನ್ಯಗಳ ಗುಣಮಟ್ಟವನ್ನು ಪರಿಶೀಲಿಸಿದರು.
ನಂತರ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಕಸ ಸಂಗ್ರಹಣೆ ಮತ್ತು ಬೇರ್ಪಡಿಸುವಿಕೆ ಕುರಿತು ಪರಿಶೀಲನೆ ನಡೆಸಿದರು.
ಗ್ರಾಮಗಳಲ್ಲಿ ಇನ್ನೂ ಕೆಲವು ಕಡೆ ಕಸ ಸುಡುವುದು ಗಮನಕ್ಕೆ ಬಂದಿದ್ದು ಇದನ್ನು ತಕ್ಷಣ ನಿಲ್ಲಿಸಿ ಎಲ್ಲ ಕಸದನ್ನೂ ವಿಲೇವಾರಿ ಘಟಕಕ್ಕೆ ಸಾಗಿಸಿ ಸರಿಯಾದ ವಿಧಾನದಲ್ಲಿ ಸಂಸ್ಕರಿಸುವಂತೆ ನಿರ್ದೇಶನ ನೀಡಿದರು.
ಗ್ರಾಮಗಳ ಭೇಟಿಯಿಂದ ಅಭಿವೃದ್ಧಿ, ಸ್ವಚ್ಛತೆ ಮತ್ತು ಸಾರ್ವಜನಿಕ ಸೌಲಭ್ಯಗಳ ಸುಧಾರಣೆಗೆ ಮಹತ್ವದ ಉತ್ತೇಜನ ಸಿಗಲಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ
