ದಾವಣಗೆರೆ   (DAVANAGERE)  : ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ) ಬೆಂಗಳೂರು ಇವರ ವತಿಯಿಂದರೆ ದಾವಣಗೆರೆ ಯಲ್ಲಿ ಪಿಜೆ ಬಡಾವಣೆಯ ಶ್ರೀರಾಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಯಕ್ಷ ತ್ರಯೋದಶಿ (ತಾಳಮದ್ದಳೆ ಕೂಟಗಳು) ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾದವು.

 

ಈ ಕಾರ್ಯಕ್ರಮವನ್ನು ನೋಡುವ ಒಂದು ಸದಾವಕಾಶ ಸಿಕ್ಕಿತು. ಸುಮಾರು ೮:೧೫ಕ್ಕೆ ಶ್ರೀರಾಮ ದೇವಸ್ಥಾನ  ಪಿ.ಜಿ. ಬಡಾವಣೆ ದಾವಣಗೆರೆ ಇಲ್ಲಿಗೆ ತಲುಪಿದೆ. ಅಷ್ಟರಲ್ಲಿ ವಾಮನ ಪ್ರಸಂಗ ಪ್ರಾರಂಭಗೊAಡಿತು.

 

ಶುಕ್ರಾಚಾರ್ಯರಾಗಿ ಸರ್ವಶ್ರೀ ವಿದ್ವಾನ್ ಉಮಾಕಾಂತ್ ಭಟ್ ಹಾಗೂ ಸರ್ವಶ್ರೀ  ವಾಸುದೇವ್ ರಂಗಾಭಟ್ ರಂಗದಲ್ಲಿ ಕಾಣಿಸಿಕೊಂಡಿದ್ದರು. ವಾಮನ ಚರಿತ್ರೆ  ಪ್ರಸಂಗವು ಆಧ್ಯಾತ್ಮಿಕತೆಯ ಹೂರಣ. ಅದನ್ನು ಬಿಡಿಸಿ ಸಭಿಕರಿಗೆ ಉಣಬಡಿಸುವುದು ಕಷ್ಟಕರವಾದ ಕೆಲಸ. ಆದರೆ ಇಲ್ಲಿ ಸರ್ವಶ್ರೀ ಉಮಾಕಾಂತ್ ಭಟ್, ವಾಸುದೇವ ರಂಗಾ ಭಟ್ ಹಾಗೂ ಕೊನೆಯಲ್ಲಿ ವಾಮನ ಪಾತ್ರ ನಿರ್ವಹಿಸಿದ ಅರ್ಥಧಾರಿ ಶ್ರೀ ಶ್ರೇಣಿವೇಣುಗೋಪಾಲ ಭಟ್  ಸಭಿಕರಿಗೆ ಎಲ್ಲಿಯೂ ಬೇಸರವಾಗದಂತೆ ಉತ್ತಮವಾಗಿ  ಉಣಬಡಿಸಿದರು.

 

ಇನ್ನು ಎರಡನೇ ದಿನದ ಪ್ರಸಂಗ ಕೂಡ ಅದ್ಭುತವಾಗಿ ಮೂಡಿಬಂತು. ಆ ದಿನದ ಪ್ರಸಂಗ ಶ್ರೀ ರಾಮ ನಿರ್ಯಾಣವಾಗಿತ್ತು. ಮೊದಲನೆಯದಾಗಿ ಈ ಪ್ರಸಂಗದ ಬಗ್ಗೆ ಸ್ವಲ್ಪ ನಾವು ತಿಳುವಳಿಕೆಯನ್ನು ಹೊಂದಬೇಕಾಗುತ್ತದೆ. ಈ ಪ್ರಸಂಗ ಗಂಭೀರವಾದ ಪ್ರಸಂಗ.

 

ಇಲ್ಲಿ ದುಃಖ ರಸಕ್ಕೆ ಪ್ರಾಧಾನ್ಯತೆ ಇದೆ ಹೊರತು ಇತರ ರಸಗಳಿಗೆ ಹೆಚ್ಚು ಅವಕಾಶ ಇಲ್ಲ. ಪ್ರಸಂಗದ ನಡೆಯನ್ನು  ಪ್ರೇಕ್ಷಕರಾದವರು ತಿಳಿದಾಗಲೇ ಅದರ ಸಂಪೂರ್ಣ ರಸವನ್ನು ಆಸ್ವಾದನೆ ಮಾಡುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಲಾವಿದರು ಸಮಯದ ಒಳಗೆ ತಮ್ಮ ತಮ್ಮ ಪಾತ್ರದ ಪ್ರಸ್ತುತಿಯನ್ನು ಸಭಿಕರ ಮುಂದೆ ಇಟ್ಟಿದ್ದಾರೆ. ಎಲ್ಲಿಯೂ ಅತಿಯಾದ  ಬೇಸರ ಮೂಡದ ಹಾಗೆ ವೃತ್ತಿ ಹಾಗೂ ಪ್ರವೃತ್ತಿ ಕಲಾವಿದರು ನಡೆದುಕೊಂಡಿರುವುದು   ವೈಯಕ್ತಿಕವಾಗಿ ನನಗೆ ಖುಷಿ ಕೊಟ್ಟಿತು.

 

ಈ ಪ್ರದರ್ಶನದ  ಕಳೆಯನ್ನು ಹೆಚ್ಚಿಸಿದವರು ಭಾಗವತರಾದ ಸರ್ವಶ್ರೀ ವಿದ್ವಾನ್ ಗಣಪತಿ ಭಟ್ ಹಾಗೂ ಎ.ಪಿ.ಫಾಟಕ್ ಅವರು ತಮ್ಮ ಕಲಾ ಪ್ರೌಢಿಮೆಯನ್ನು ಪ್ರೇಕ್ಷಕರ ಮುಂದೆ ಇಡುವುದರ ಜೊತೆಗೆ ಅವರೆಲ್ಲರನ್ನು ಹಿಡಿದಿಟ್ಟುಕೊಂಡರು.

ಸಹಜವಾಗಿ ತಾಳಮದ್ದಲೆಗೆ ಪ್ರೇಕ್ಷಕರು ಹೆಚ್ಚು ಹೊತ್ತು ಕುಳಿತುಕೊಳ್ಳುವುದಿಲ್ಲ. ಆದರೆ ಇಲ್ಲಿ ಪ್ರೇಕ್ಷಕರು ಕೊನೆಯವರೆಗೂ ಇದ್ದರು. ಇಲ್ಲಿ ಸಂಘಟಕರ ಸಂಘಟನಾ ಶಕ್ತಿ ಎದ್ದು ಕಾಣಿಸಿತು. ಇವರೆಲ್ಲರೂ ಸದಭಿರುಚಿ ಉಳ್ಳ ಪ್ರೇಕ್ಷಕರು ಎಂಬುದು ಸ್ಪಷ್ಟ.

 

ಯಕ್ಷಗಾನ (Yakshagana) ಕ್ಕೆ ಸದಭಿರುಚಿ ಉಳ್ಳ ಪ್ರೇಕ್ಷಕರ ಕೊರತೆ ಇದೆ ಎಂಬುದು ಅಷ್ಟೇ ಸತ್ಯವಾದ ಮಾತು. ಆದರೂ ಸಹ ಉತ್ತಮ ಪ್ರಸಂಗಗಳನ್ನು ಆಯ್ಕೆ ಮಾಡಿ ಮತ್ತೆ ಸಂಘಟಿಸಿದರೆ ಪ್ರೇಕ್ಷಕರು ಅದನ್ನು ನೋಡುತ್ತಾರೆ ಎಂಬುದು ಈ ತಾಳಮದ್ದಳೆ ನಿರೂಪಿಸಲ್ಪಟ್ಟಿತು. ಒಳ್ಳೆಯ ಧಾರ್ಮಿಕ, ನೈತಿಕ ಮೌಲ್ಯಗಳ ಸಂದೇಶಗಳನ್ನು ಹೇಳುವ ಪ್ರಸಂಗಗಳಿಗೆ ಸಂಘಟಿಸುವ ಅಗತ್ಯವಿದೆ. ಆ ಮೂಲಕ ಕಳೆದು ಹೋಗುತ್ತಿರುವ ಯಕ್ಷಗಾನ ಪರಂಪರೆಯನ್ನು ಉಳಿಸಬಹುದು.

 

 

ಕಾರ್ಯಕ್ರಮ ಮುಗಿದ ಮೇಲೆ ಪ್ರಸಿದ್ಧ ಆಟಕೂಟಗಳ ಸರದಾರರಾದ ವಾಸುದೇವರಂಗಾಭಟ್ ರನ್ನು ಮಾತನಾಡಿಸಿದೆ. ಅವರು ನನ್ನನ್ನು ಗುರುತಿಸಿದ್ದು ಬಹಳ ಸಂತೋಷವಾಯಿತು. ಉಳಿದ ಕಲಾವಿದರನ್ನು ಮಾತನಾಡಿಸಿ ಅವರೊಡನೆ ಒಂದು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡೆ.

 

ಮೊದಲ ದಿನದ ಪ್ರದರ್ಶನದಲ್ಲಿ ಸೇರಿದ್ದ  ಪ್ರೇಕ್ಷಕರಿಗಿಂತ ದ್ವಿಗುಣವಾದ ಪ್ರೇಕ್ಷಕರು ಎರಡನೇ ದಿನದ ಪ್ರಸಂಗಕ್ಕೆ ಸೇರಿದ್ದರು. ಅಲ್ಲಿ ಸೇರಿದ್ದ ಪ್ರತಿಯೊಬ್ಬ ಪ್ರೇಕ್ಷಕರಿಗೂ ನನ್ನದೊಂದು ಮೆಚ್ಚುಗೆಯ ಮಾತು ಇದ್ದೇ ಇರುತ್ತೆ. ಇಂತಹ ಕಾರ್ಯಕ್ರಮವನ್ನು ಸಂಘಟಕರು ಇನ್ನು ಹೆಚ್ಚು ಹೆಚ್ಚು  ದಾವಣಗೆರೆಯಲ್ಲಿ ಆಯೋಜಿಸಲಿ ಎಂದು ಸದಭಿರುಚಿವುಳ್ಳ ಪ್ರೇಕ್ಷಕನಾಗಿ ಅಪೇಕ್ಷಿಸುತ್ತೇನೆ.

 

 ಗಗನ್ ಕೆ ಶೆಟ್ಟಿ ಮಡಾಮಕ್ಕಿ
 ದಾವಣಗೆರೆ