ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರು ಸಾವಿರಾರು ಕಾರ್ಯಕರ್ತರ, ಅಭಿಮಾನಿಗಳ, ಮುಖಂಡರ ಸಾರಥ್ಯದಲ್ಲಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.
ದಾವಣಗೆರೆ ನಗರದಲ್ಲಿ ಏಕಕಾಲಕ್ಕೆ ಮೂರು ಕಡೆಯಿಂದ ಆರಂಭಗೊಂಡ ಮೆರವಣಿಗೆ ಗಾಂಧಿವೃತ್ತದಲ್ಲಿ ಜೊತೆಯಾಗಿ ಹಳೇ ವಾಣಿ ಹೋಂಡಾ ಶೋ ರೂಮ್ ವರೆಗೂ ಶಕ್ತಿ ಪ್ರದರ್ಶನ ಮಾಡಲಾಯಿತು.
ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ಬೆಳಗ್ಗೆ 10.30 ಕ್ಕೆ ನಗರ ದೇವತೆ ದುಗ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಿಸಿದರು. ಪತಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿಟುವಳ್ಳಿ ದುರ್ಗಾಂಬಿಕಾ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಇನ್ನೊಂದೆಡೆ ಹರಿಹರ ಮಾಜಿ ಶಾಸಕ ಬಿ.ಪಿ.ಹರೀಶ್ ಹಾಗೂ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನೇತೃತ್ವದ ತಂಡ ರಾಂ ಅಂಡ್ ಕೋ ವೃತ್ತದಲ್ಲಿ ವಿಘ್ವ ವಿನಾಶಕನಿಗೆ ಪೂಜೆ ಸಲ್ಲಿಸಿ ಭಾರಿ ಜನಸ್ತೋಮದೊಂದಿಗೆ ಹೆಜ್ಜೆ ಹಾಕಿದರು.
ಶ್ರೀಮತಿ ಗಾಯಿತ್ರಿ ಸಿದ್ಧೇಶ್ವರ್ ಅವರು ಮಾಜಿ ಸಿಎಂ ಬಿ.ಎಸ್. ಯಡಿ ಯೂರಪ್ಪ, ಮಾಜಿ ಸಚಿವರಾದ ಮಾಧುಸ್ವಾಮಿ, ಬೈರತಿ ಬಸವರಾಜ್, ಎಎಲ್ಸಿ ರವಿ ಅವರ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.