ದಾವಣಗೆರೆ: ವಿದ್ಯಾರ್ಥಿಗಳು ಕೇವಲ ಪದವೀಧರರಾಗದೆ, ಜಾಗತಿಕ ಅನುಭವ, ಆತ್ಮವಿಶ್ವಾಸ ಮತ್ತು ವಿಶಾಲ ವೃತ್ತಿ ಅವಕಾಶಗಳೊಂದಿಗೆ ಜಾಗತಿಕ ನಾಗರಿಕರಾಗುವಿಕೆ ಅನಿವಾರ್ಯವಾಗಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಏರ್ಪಡಿಸಿದ್ದ ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣ : ಜಾಗತಿಕ ಸ್ಪರ್ಧಾತ್ಮಕತೆಯ ಒಂದು ನೋಟ ಕುರಿತ ಅಂತರರಾಷ್ಠ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಉದ್ಯೋಗದಾತರು ಜಾಗತಿಕ ದೃಷ್ಟಿಕೋನ ಹೊಂದಿದ ಪದವೀಧರರನ್ನು ಹುಡುಕುತ್ತಿದ್ದಾರೆ. ಸಂವಹನ, ತಂಡ ಕಾರ್ಯ ಮತ್ತು ವಿಭಿನ್ನ ಸಂಸ್ಕೃತಿಗಳೊAದಿಗೆ ಕೆಲಸ ಮಾಡುವ ಕೌಶಲ್ಯಗಳನ್ನು ವೃದ್ಧಿಸಿಕೊಂಡಾಗ ಅವಕಾಶಗಳ ಸೃಷ್ಟಿಯಾಗುತ್ತವೆ ಹಾಗೂ ವಿದ್ಯಾರ್ಥಿಗಳು ಜಾಗತಿಕ ನಾಗರಿಕರಾಗುವಿಕೆಗೆ ಹೆದ್ದಾರಿಯಾಗುತ್ತದೆ ಎಂದು ನುಡಿದರು.
‘ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣ ಎಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಜಾಗತಿಕ ದೃಷ್ಟಿಕೋನವನ್ನು ಅಳವಡಿಸುವುದು. ಪಠ್ಯಕ್ರಮ, ಬೋಧನೆ, ಸಂಶೋಧನೆ, ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವುದು. ವಿದ್ಯಾರ್ಥಿ ಮತ್ತು ಅಧ್ಯಾಪಕರ ನಡುವಿನ ಬೌದ್ಧಿಕ ವಿನಿಮಯದ ಜೊತೆಗೆ ಶಿಕ್ಷಣ ಸಂಸ್ಥೆಗಳ ನಡುವಿನ ಸಂಶೋಧನಾ ವಿನಿಮಯಗಳು ಮುಖ್ಯವಾಗುತ್ತವೆ. ಇದು ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸುವುದೇ ಅಲ್ಲ, ಜಗತ್ತನ್ನೇ ನಮ್ಮ ತರಗತಿಯೊಳಗೆ ತರುವುದಾಗಿದೆ’ ಎಂದು ಹೇಳಿದರು.
‘ನಾವೀಗ ಸೀಮಾರಹಿತ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಜಗತ್ತಿನಲ್ಲಿ ಜ್ಞಾನ, ಕೌಶಲ್ಯ ಮತ್ತು ಆವಿಷ್ಕಾರಗಳು ವೇಗವಾಗಿ ಹರಡುತ್ತಿವೆ. ಉನ್ನತ ಶಿಕ್ಷಣದ ಅಂತರರಾಷ್ಟಿçÃಕರಣ ಐಷಾರಾಮಿ ವಿಷಯವಾಗಿಲ್ಲ. ಹೀಗಾಗಿ ವಿಶ್ವವಿದ್ಯಾಲಯಗಳು ಈಗ ಸ್ಥಳೀಯ ಅಥವಾ ರಾಷ್ಟ್ರೀಯ ಮಟ್ಟವನ್ನು ಮೀರಿ ಜಾಗತಿಕವಾಗಿ ಸ್ಪರ್ಧಿಸುತ್ತಿವೆ. ಅದಕ್ಕೆ ತಕ್ಕಂತೆ ನಮ್ಮ ಶಿಕ್ಷಣದ ಗುಣಮಟ್ಟವೂ ಬದಲಾಗಬೇಕು. ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಾಂಸ್ಕೃತಿಕ ಅರಿವು ಮತ್ತು ಹೊಂದಿಕೊಳ್ಳುವ ಸಾಮರ್ಥ್ಯ ಬೆಳೆಸುವ ಶಿಕ್ಷಣ ಅತ್ಯಗತ್ಯ ಎಂದು ಹೇಳಿದರು.
ಭಾರತವು ಶ್ರೀಮಂತ ಶೈಕ್ಷಣಿಕ ಪರಂಪರೆ ಮತ್ತು ಯುವಜನ ಶಕ್ತಿಯನ್ನು ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸಂಯುಕ್ತ ಕಾರ್ಯಕ್ರಮಗಳು ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಭಾಗವಹಿಸುವಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಭಾರತವು ಕೇವಲ ಪ್ರತಿಭೆಗಳನ್ನು ರಫ್ತು ಮಾಡುವ ರಾಷ್ಟçವಾಗದೆ, ದೃಢ ನಾಯಕತ್ವ ಮತ್ತು ಸ್ಪಷ್ಟ ದೃಷ್ಟಿಕೋನದಿಂದ ಎಲ್ಲರನ್ನೂ ಒಳಗೊಂಡ ಶಿಕ್ಷಣದ ಅಂತರರಾಷ್ಟ್ರೀಕರಣಕ್ಕೆ ಆದ್ಯತೆ ನೀಡಬೇಕು. ಅದರೊಂದಿಗೆ ಭಾರತವು ಜಾಗತಿಕ ಶಿಕ್ಷಣ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬೀತುಪಡಿಸಬೇಕಾಗಿದೆ ಎಂದು ತಿಳಿಸಿದರು.
ಇಂಗ್ಲೆಂಡ್‌ನ ಕಾರ್ಡಿಫ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಅಂಗೇಶ್ ಅನುಪಮ್ ಮಾತನಾಡಿ, ಕೌಶಲ್ಯಗಳು ಭವಿಷ್ಯದ ಕರೆನ್ಸಿಯಾಗಿವೆ. ಯುವಜನಶಕ್ತಿ ಮತ್ತು ತಾಂತ್ರಿಕ ಪ್ರತಿಭೆ ಭಾರತ ಬಹುದೊಡ್ಡ ಬಲವಾಗಿದ್ದು, ಸರಿಯಾದ ನೈತಿಕತೆಯೊಂದಿಗೆ ಬಳಸಿದರೆ ಮಾನವ ಕಲ್ಯಾಣಕ್ಕೆ ಮಹತ್ತರ ಕೊಡುಗೆ ನೀಡಬಹುದು ಎಂದರು.
ಭಾರತವು ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದಲ್ಲಿ ವೇಗವಾಗಿ ಬೆಳೆಯುತ್ತದೆ. ದತ್ತಾಂಶ ಗೌಪ್ಯತೆ, ನಿಷ್ಪಕ್ಷಪಾತ, ಪಾರದರ್ಶಕತೆಗಳು ಮುಖ್ಯವಾಗಿವೆ. ತಂತ್ರಜ್ಞಾನವು ಮಾನವನ ಬಳಕೆಗೆ ಇರಬೇಕೆ ಹೊರತು ಮಾನವನನ್ನು ಬದಲಾಯಿಸಲು ಅಲ್ಲ. ಅದಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಅತ್ಯಂತ ಅಗತ್ಯವಾಗಿದೆ. ಭವಿಷ್ಯವು ಯಂತ್ರಗಳಿಗೆ ಸೇರಿದ್ದಲ್ಲ. ಯಂತ್ರಗಳನ್ನು ಬುದ್ಧಿವಂತವಾಗಿ ಬಳಸುವ ಮಾನವರಿಗೆ ಸೇರಿದೆ ಎಂಬುದನ್ನು ಅರಿಯಬೇಕು’ ಎಂದು ನುಡಿದರು.
‘ಇದು ದತ್ತಾಂಶ ಆಧಾರಿತ ಜಗತ್ತು. ನಾವು ಮಾಡುವ ಪ್ರತಿಯೊಂದು ಕ್ರಿಯೆಯೂ ದತ್ತಾಂಶವನ್ನು ಸೃಷ್ಟಿಸುತ್ತದೆ. ಈ ದತ್ತಾಂಶವನ್ನು ಅರ್ಥಮಾಡಿಕೊಳ್ಳುವ ಶಕ್ತಿ ದತ್ತಾಂಶ ವಿಜ್ಞಾನಕ್ಕಿದ್ದು, ಕೃತಕ ಬುದ್ಧಿಮತ್ತೆಗೆ ದತ್ತಾಂಶಗಳ ಆಧಾರದ ಮೇಲೆ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ವ್ಯಾಪಾರ, ಆಡಳಿತ ಮತ್ತು ಸಮಾಜದ ಸೇವೆಗಳ ಸುಧಾರಣೆಯಲ್ಲಿಯೂ ಪ್ರಭಾವ ಬೀರುತ್ತಿದೆ’ ಎಂದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ. ಖಾನ್ ಮಾತನಾಡಿ, ಜಾಗತಿಕ ಸ್ಪರ್ಧಾತ್ಮಕ ಯುಗಲ್ಲಿ ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣ ಪದ್ಧತಿಯಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ. ವಿದ್ಯಾರ್ಥಿಗಳು ಹೊಸ ಸ್ಪರ್ಧೆಯಲ್ಲಿ ಸವಾಲೊಡ್ಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ತಂತ್ರಜ್ಞಾನದ ಅಳವಡಿಕೆ, ಸಂಶೋಧನೆ, ವಿಭಿನ್ನ ಸಂಸ್ಕೃತಿಯ ಜನರೊಂದಿಗೆ ಕೂಡಿ ಕೆಲಸ ಮಾಡುವ ಮತ್ತು ಬೌದ್ಧಿಕ ಜ್ಞಾನ ವಿಸ್ತರಿಸಿಕೊಳ್ಳಲು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
Read also : ಕರ್ನಾಟಕ ಗ್ರಾಮೀಣ ಬ್ಯಾಂಕ್ ಗ್ರಾಹಕರ ಸಭೆ
ಹವಾಮಾನ ಬದಲಾವಣೆ, ಆರೋಗ್ಯ, ತಂತ್ರಜ್ಞಾನ ಮೊದಲಾದ ಜಾಗತಿಕ ಸವಲುಗಳಿಗೆ ಜಾಗತಿಕ ಸಹಕಾರ ಅಗತ್ಯ. ಜಾಗತಿಕ ಮಾನ್ಯತೆ, ರ‍್ಯಾಂಕಿಂಗ್ ಸುಧಾರಣೆ, ಅಂತರರಾಷ್ಟಿçÃಯ ವಿದ್ಯಾರ್ಥಿಗಳು ಮತ್ತು ಸಹಕಾರಗಳನ್ನು ಆಕರ್ಷಿಸಬಹುದು. ರಾಷ್ಟ್ರೀಯ ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಭಾರತದ ಅತ್ಯುನ್ನತ ಶೈಕ್ಷಣಿಕ ಹಿನ್ನೆಲೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವ ಶಿಕ್ಷಣ ಕ್ರಮಗಳು ಅಗತ್ಯವಾಗಿವೆ. ವೈಯಕ್ತಿಕ ಕಲಿಕೆ, ಬುದ್ಧಿವಂತ ಮೌಲ್ಯಮಾಪನ ವ್ಯವಸ್ಥೆಗಳು ಉದ್ಯೋಗ ಅವಕಾಶಗಳನ್ನು ಒದಗಿಸುತ್ತವೆ. ಆದರೆ ಸ್ಥಳೀಯ ಸಮಸ್ಯೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ, ಪರಿಹರಿಸುವ ಚಿಂತನೆ ಮತ್ತು ಸ್ಥಳೀಯ ಜ್ಞಾನ ಸಂರಕ್ಷಣೆಗೂ ಮನ್ನಣೆ ನೀಡುವ ಶಿಕ್ಷಣವು ಮುಖ್ಯವಾಗಿದೆ. ಇದಕ್ಕೆ ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣ ಪೂರಕವಾಗಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ ಸೇರಿದಂತೆ ತಾಂತ್ರಿಕ ಮತ್ತು ಯಾಂತ್ರಿಕ ಸಂಶೋಧನೆಗಳು, ಮಾನವನ ಸಮಗ್ರ ಬೆಳವಣಿಗೆಗೆ ಕೊಡುಗೆಯಾಗಬೇಕೆ ಹೊರತು ಹೊರೆಯಾಗಬಾರದು. ವಿದ್ಯಾರ್ಥಿಗಳು ಪದವಿಯ ಜೊತೆಗೆ ನೈತಿಕ ಮೌಲ್ಯಗಳು, ದೇಸಿ ಜ್ಞಾನ, ವೃತ್ತಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಎಂಇ ನಿರ್ದೇಶಕ ಪ್ರೊ.ಡಿ.ಜಿ. ಪ್ರಕಾಶ್ ಸ್ವಾಗತಿಸಿದರು. ಪ್ರೊ.ಎಸ್.ಎನ್. ಪ್ರಮೋದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಡಾ.ಆರ್.ಕೆ.ಸತೀಶ ವಂದಿಸಿದರು.
