ದಾವಣಗೆರೆ, ಜು.18: ಚಿತ್ರದುರ್ಗ ನಗರದಲ್ಲಿ ಜು.20ರಂದು 1.30ಕ್ಕೆ ಎಚ್.ಆಂಜನೇಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟಿ ಹಾಗೂ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವಂತಪ್ಪ ಅವರು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಟ್ರಸ್ಟ್ ಅನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.
ಶೋಷಣೆ, ದೌರ್ಜನ್ಯ, ಮೌಢ್ಯ ನಿರ್ಮೂಲನೆಗೆ ಶಿಕ್ಷಣವೇ ಪ್ರಮುಖ ಅಸ್ತ್ರ ಎಂಬ ಈ ಮಾತನ್ನು ಅನೇಕ ಸಂತರು, ದಾರ್ಶನಿಕರು, ಚಿಂತಕರು ಸದಾ ಹೇಳಿಕೊಂಡು ಬಂದಿದ್ದಾರೆ. ಅದರಲ್ಲೂ ಸ್ವತಃ ನೋವುಂಡವರ ಅನುಭವದ ಮಾತು ಇದೇ ಆಗಿದೆ. ಆದ್ದರಿಂದ ನಾವೆಲ್ಲರೂ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.
ಸಮ ಸಮಾಜದ ಪರಿಕಲ್ಪನೆಯ ಹರಿಕಾರ ಬಸವಣ್ಣನ ನೇತೃತ್ವದ ವಚನ ಚಳವಳಿ ಹಾಗೂ ಜಗತ್ತಿನ ಮೇರು ವಿದ್ವಾಂಸ ಡಾ.ಬಿ.ಆರ್.ಅಂಬೇಡ್ಕರ್ ಸೇರಿ ನೂರಾರು ದಾರ್ಶನಿಕರ ಏಕೈಕ ಸಂದೇಶ ಶಿಕ್ಷಣ, ಜ್ಞಾನದಿಂದ ಮಾತ್ರ ಶೋಷಣೆ ಮುಕ್ತ ಸಮಾಜ, ಸಮಗ್ರ ಪ್ರಗತಿ ಸಾಧ್ಯ ಎಂಬುದಾಗಿದೆ. ಆದ್ದರಿಂದ ನಾವೆಲ್ಲರೂ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಿದೆ ಎಂದು ತಿಳಿಸಿದರು.
ದಾರ್ಶನಿಕರ ಈ ಆಶಯವನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಅವರ 2013-18 ಅವಧಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗದ ಖಾತೆ ಸಚಿವರಾಗಿದ್ದ ಎಚ್.ಆಂಜನೇಯ ಶ್ರಮಿಸಿದ್ದು ಸದಾ ಸ್ಮರಣೀಯ ಎಂದರು.
ಅರ್ಜಿ ಸಲ್ಲಿಸಿದ ಎಲ್ಲರಿಗೂ ಗುಣಮಟ್ಟದ ಹಾಸ್ಟೆಲ್ ಸೌಲಭ್ಯ, ಹೋಬಳಿಗೊಂದು ವಸತಿ ಶಾಲೆ, ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ ನಿರ್ಮಾಣ….. ಹೀಗೆ ವಿವಿಧ ರೀತಿ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದ ಎಚ್.ಆಂಜನೇಯ ಅವರ ಬದ್ಧತೆ, ಕಾಳಜಿ ಮಾದರಿ ಆಗಿದೆ ಎಂದು ತಿಳಿಸಿದರು.
ದೇಶದಲ್ಲಿಯೇ SCSP, TSP ಕಾಯ್ದೆ ಜಾರಿ ಮೂಲಕ ಗಮನ ಸೆಳೆದ ಎಚ್.ಆಂಜನೇಯ ಅವರ ಬದುಕೇ ಸದಾ ಸಂಘರ್ಷದ ಹಾದಿಯಲ್ಲಿ ಸಾಗಿ ಉನ್ನತ ಸ್ಥಾನಕ್ಕೇರಿರುವುದು ನೊಂದ ಜನರ ಪಾಲಿಗೆ ಉತ್ಸಹಕ ಚಿಲುಮೆ ಆಗಿದೆ ಎಂದರು.
ದಾವಣಗೆರೆ ಗಾಂಧಿ ನಗರದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಪೌರ, ರೈತ, ಕಾರ್ಮಿಕ, ದೇವದಾಸಿ ಸೇರಿ ಅನೇಕ ಕ್ಷೇತ್ರದಲ್ಲಿನ ನೊಂದ ಜನರ ಧ್ವನಿಯಾಗಿ ಹೋರಾಟದ ಮೂಲಕ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತನಾಗಿ ಐದು ವರ್ಷಗಳ ಕಾಲ ಸಚಿವರಾಗಿ ಮಾಡಿದ ಕೆಲಸಗಳು ಅದ್ವಿತೀಯ ಆಗಿವೆ ಎಂದು ಹೇಳಿದರು.
ಐದು ದಶಕಗಳ ಕಾಲದ ಅವರ ಸಾಮಾಜಿಕ, ರಾಜಕೀಯ ಬದುಕಿ ಅನೇಕ ಸಂಕಷ್ಟಗಳನ್ನು ಕಂಡಿದ್ದರೂ ಅವರ ಸಮಾಜಮುಖಿ ಚಿಂತನೆ, ಕಾರ್ಯಗಳಿಗೆ ಸಣ್ಣ ಧಕ್ಕೆಯೂ ಎದುರಾಗಿಲ್ಲದಿರುವುದು ವಿಸ್ಮಯ ಮತ್ತು ಮಾದರಿ ಆಗಿದೆ ಎಂದು ತಿಳಿಸಿದರು.
ಸದಾ ಶಿಕ್ಷಣದ ಪ್ರಗತಿಗೆ ತುಡಿಯುವ ಎಚ್.ಆಂಜನೇಯ ಅವರ ಮನಸ್ಸು, ಬಸವ ತತ್ವವನ್ನು ಉಸಿರಾಗಿಸಿಕೊಂಡು, ಅಂಬೇಡ್ಕರ್ ಅವರ ಆಶಯಗಳನ್ನು ಅನುಷ್ಠಾನಕ್ಕೆ ತರಲು ಚಿಂತಿಸುವ, ಅದರಂತೆ ಕಾರ್ಯೊಪ್ರವೃತ್ತರಾಗುವ ರೀತಿ ಅಚ್ಚರಿ ಆಗಿದೆ ಎಂದರು.
ಆದ್ದರಿಂದ ಅವರ ಹೆಸರಿನಲ್ಲಿ ಎಚ್.ಆಂಜನೇಯ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ ಮಾಡಿ, ಟ್ರಸ್ಟ್ ಮೂಲಕ ಅವರ ಆಶಯದಂತೆ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಮಾದಿಗ ಸಮುದಾಯದ ಚಿತ್ರದುರ್ಗ-ದಾವಣಗೆರೆ ಜಿಲ್ಲೆಯ ಪ್ರತಿಭಾನ್ವಿತ ಶೇ. 85 ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಯಲ್ಲಿ 35, ಪಿಯುಸಿಯ 33 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ. ಇದರಲ್ಲಿ ಅತ್ಯಂತ ಕಡುಬಡತನದ 6 ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಲ್ಯಾಪಟ್ಯಾಪ್ ನೀಡಲಾಗುತ್ತದೆ. ಉಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬ್ಯಾಗ್, ನೋಟಬುಕ್, ಪ್ರಮುಖ ಕೃತಿಗಳು ಸೇರಿ ಕಲಿಕಾ ಸಾಮಗ್ರಿ ನೀಡಿ, ಪದಕ, ಮ್ಯೂಮೆಂಟ್, ಶಾಲು, ಹಾರದೊಂದಿಗೆ ಸನ್ಮಾನಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ರಾಜ್ಯಮಟ್ಟದಲ್ಲಿ ಪ್ರತಿಭಾ ಪುರಾಸ್ಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದ್ದು, ಮೊದಲಿಗೆ ವಿದ್ಯಾರ್ಥಿಗಳು, ಪೋಷಕರಿಗೆ ಸಿಹಿಯೂಟ, ಬಳಿಕ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಭೂಮಿತಾಯಿ ಬಳಗದಿಂದ ವಾದ್ಯಗೋಷ್ಠಿ, ಮೈಸೂರು ನಗಾರಿ ಮಂಜು ನೇತೃತ್ವ ತಂಡದಿಂದ ನಗಾರಿ ಕುಣಿತ ನಡೆಯಲಿದೆ ಎಂದರು.
ಚಿತ್ರದುರ್ಗ ಜಿಲ್ಲಾ ಉಸ್ತವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಎಂಎಲ್ಸಿ ಡಿ.ಟಿ.ಶ್ರೀನಿವಾಸ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಲಿಡ್ಕರ್ ಅಧ್ಯಕ್ಷ ಮುಂಡುರಗಿ ನಾಗರಾಜ್ ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಕಾರ್ಯಕ್ರಮ ಹಾಗೂ ಟ್ರಸ್ಟ್ ಸ್ಥಾಪನೆ ಉದ್ದೇಶ ಶ್ರೀ ಎಚ್.ಆಂಜನೇಯ ಅವರ ಆಶಯಗಳನ್ನು ಅನುಷ್ಠಾನಕ್ಕೆ ತರುವಂತಹದ್ದಾಗಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದ ಮೂಲಕ ಎಲ್ಲ ವರ್ಗದ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸಲಾಗುವುದು. ಈ ನಿಟ್ಟಿನಲ್ಲಿ ಇದು ಆರಂಭದ ಹೆಜ್ಜೆ ಆಗಿದೆ ಎಂದು ಹೇಳಿದರು.
ಸಮಾಜ ನಮಗೆ ಎಲ್ಲವನ್ನೂ ಕೊಟ್ಟಿದೆ, ಪ್ರತಿಯಾಗಿ ಸಮಾಜಕ್ಕೆ ನಾವು ಕೂಡ ಕೊಡುಗೆ ನೀಡುವ ಮೂಲಕ ಋಣ ತೀರಿಸಬೇಕೆಂಬುದು ಎಚ್.ಆಂಜನೇಯ ಅವರ ಆಶಯ. ಆದ್ದರಿಂದ ಅವರ ಹೆಸರಿನಲ್ಲಿ ಟ್ರಸ್ಟ್ ಅನ್ನು ಕುಟುಂಬದ ಸದಸ್ಯರೆಲ್ಲರೂ ಸೇರಿ ಸ್ಥಾಪಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡಲಿದ್ದೇವೆ ಎಂದು ತಿಳಿಸಿದರು.