ಮೇಲ್ವರ್ಗಗಳ ತವರಿನಂತಿರುವ ಹಡಗಲಿಯಲ್ಲಿ ಗ್ರಾಮದೇವತೆಯ ಜಾತ್ರೆಯಲ್ಲಿ ಕೆಲ ವಿದ್ಯಾವಂತ ದಲಿತ ಯುವಕರನ್ನು ಕೂಡಿಸಿಕೊಂಡು ಅನಿಷ್ಟ ಪದ್ದತಿಯ ವಿರುದ್ದ ಸಮರ ಸಾರಿದ್ದು,ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ್ದು ಮೇಲ್ವರ್ಗಗಳ ಕೆಂಗಣ್ಣಿಗೆ ಗುರಿಯಾಯಿತು.
ದಲಿತ ಲೋಕದ ಕರಾಳ ಬದುಕಿನ ದರ್ಶನವು ಅಂಬೇಡ್ಕರ್ ವಾದಿಯನ್ನಾಗಿಸಿತು
ಒಮ್ಮೆಯಂತೂ ಜಾತ್ರೆಯಲ್ಲಿಯೇ ಅವರ ಮೇಲೆ ದೈಹಿಕ ಹಲ್ಲೆಯಾಯಿತು.ಬೆಳಗಾವಿ,ಧಾರವಾಡ ಜಿಲ್ಲೆಯ ಹಾಲು ಕುಡಿದು,ಜೊತೆಗೆ ಗಾಂಧಿವಾದವನ್ನು ಹೊತ್ತು ತಂದಿದ್ದ ಮೇಷ್ಟ್ರು,ಹೊಸಪೇಟೆಯ ಭೀಮಸೇನರಾವ್ ಮೇಷ್ಟ್ರರ ಸಂಪರ್ಕದಿಂದ ಮಾರ್ಕ್ಸ್ವಾದಿಯಾಗಿದ್ದ ಮೇಷ್ಟ್ರಿಗೆ ,ದಲಿತ ಲೋಕದ ಕರಾಳ ಬದುಕಿನ ದರ್ಶನವು ಅಂಬೇಡ್ಕರ್ ವಾದಿಯನ್ನಾಗಿಸಿತು.
ಕಟ್ಟರ್ ಮಾರ್ಕಿಷ್ಟ್ ರು ಅರ್ಥಮಾಡಿಕೊಳ್ಳದೇ ಹೋದದ್ದು ದುರಂತ
ಗಾಂಧಿ,ಲೋಹಿಯಾ,ಮಾರ್ಕ್ಸ್,ಹೆಗೆಲ್,ಲೆನಿನ್,ಬಸವಣ್ಣ…ಹೀಗೆ ಹತ್ತು ಹಲವು ಸಾಂಸ್ಕೃತಿಕ,ರಾಜಕೀಯ ಐಕಾನ್ ಗಳ ಐಡಿಯಾಲಜಿಗಳ ನ್ನು ಅರೆದು ಕುಡಿದಂತೆ ಇದ್ದ ಎಸ್ಸೆಸ್ ಮೇಷ್ಟ್ರು ಸದಾ ಹರಿವ ನದಿಯಂತೆ ಚಲನಶೀಲರಾಗಿದ್ದರು.ಈ ಗುಣವನ್ನು ಕಟ್ಟರ್ ಮಾರ್ಕಿಷ್ಟ್ ರು ಅರ್ಥಮಾಡಿಕೊಳ್ಳದೇ ಹೋದದ್ದು ದುರಂತವೇ ಸರಿ. ಹಡಗಲಿಯ ಗೋಡೆಗಳ ಮೇಲೆ ಪೊರಕೆ ಪಿಕಾಸಿಯ ಗುರುತಿನ ಚಿಹ್ನೆ ರಾರಾಜಿಸುವಂತೆ ಮಾಡಿದ್ದಲ್ಲದೆ, ಸಿದ್ಧಲಿಂಗಯ್ಯವರ ಹೋರಾಟದ ಹಾಡುಗಳು ಹಾದಿಬೀದಿಗಳಲ್ಲಿ ಪ್ರತಿಧ್ವನಿಸಿ ,ಇಡೀ ಊರು-ಕೇರಿಗಳಲ್ಲಿ ಹಿರೇಮಠರೆಂಬ ಅಯ್ಯಪ್ಪನೋರ್ವ ಮೇಷ್ಟ್ರು ಸುದ್ದಿಯಾಗಿ ಹೋದರು.
ಜನಸಾಮಾನ್ಯರಿಗಾಗಿ ಬರೆದರು
ತಾನು ನಂಬಿದ ಗಾಂಧಿಯನ್ನು,ಮಾರ್ಕ್ಸ,ಲೆನಿನ್,ಬಸವಣ್ಣ,ಅಲ್ಲಮ,ಲೋಹಿಯಾ ಮತ್ತು ಅಂಬೇಡ್ಕರ್ ರನ್ನು ನಾಲ್ಕು ಗೋಡೆಗಳ ಮಧ್ಯಕ್ಕಷ್ಟೆ ಸೀಮಿತಗೊಳಿಸದೆ ಜನರ ನಡುವೆ ತಂದು ನಿಲ್ಲಿಸಿದರು. ನಮ್ಮಲ್ಲಿ ಪಂಡಿತರನ್ನು ಗಮನದಲ್ಲಿಟ್ಟುಕೊಂಡು ಬರೆಯುವ ವರ್ಗ ಇರಬಹುದು.ಆದರೆ ಜನಸಾಮಾನ್ಯರನ್ನು ಗಮನಿಸಿ ಬರೆದು ಅವರಿಗಾಗಿ ಬದುಕಿದವರಲ್ಲಿ ಹಿರೇಮಠರು ಅಗ್ರಗಣ್ಯರಾಗಿದ್ದಾರೆ ಎನ್ನುವುದನ್ನು ನಾವೆಂದಿಗೂ ಮರೆಯಬಾರದು.
ಎಸ್.ಎಫ್.ಐ.ಮತ್ತು ಡಿ.ವೈ.ಎಫ್.ಐ. ಸಂಘಟನೆ ಕಟ್ಟಿ ಬೆಳಸಿದರು
ಅದುವರೆಗೂ ಬಳ್ಳಾರಿ ಜಿಲ್ಲೆಯಲ್ಲಿ ಎಡಪಂಥೀಯ ಚಳುವಳಿಗಳೇ ಇಲ್ಲದ,ಸಂಘಟನೆಗಳೇ ಇಲ್ಲದ ಕಾಲದಲ್ಲಿ ಎಸ್.ಎಫ್.ಐ.ಮತ್ತು ಡಿ.ವೈ.ಎಫ್.ಐ.ಗಳಂತಹ ಸಂಘಟನೆಗಳನ್ನು ಕಟ್ಟಿ ಬೆಳೆಸಿದ ಹಿರೇಮಠರು, ಹಡಗಲಿಯಲ್ಲಿ ಡಿ.ಎಸ್.ಎಸ್.ಸಂಘಟನೆಯನ್ನು ಹುಟ್ಟು ಹಾಕಿದ್ದಲ್ಲದೆ ಅದು ತುಂಬ ಕ್ರಿಯಾಶೀಲವಾಗಿರುವಂತೆ ನೋಡಿಕೊಂಡರು.ಆದರೆ ತನ್ನ ತಾಯಿಯಂತಿದ್ದ ಕಮ್ಯುನಿಸ್ಟ್ ಪಾರ್ಟಿಯ ಕೇಂದ್ರದಲ್ಲಿದ್ದವರಿಗೆ ಹಿರೇಮಠರ ಸಾಮಾಜಿಕ,ಸಾಂಸ್ಕೃತಿಕ ಶೋಧಗಳು ಅರ್ಥವಾಗಲಿಲ್ಲ ಎನಿಸುತ್ತದೆ ಅಥವಾ ಕೇಂದ್ರ ಸಮಿತಿಯ ಸರ್ವಾಧಿಕಾರದ ಧೋರಣೆಯ ಅಹಂನಿಂದಲೋ ಏನೋ ಅಂಬೇಡ್ಕರರ ಚಿಂತನೆಗಳನ್ನೂ ದೂರವೇ ಇಟ್ಟರು.
ಗಾಂಧಿವಾದವನ್ನು,ಗಾಂಧಿಯ ವ್ಯಕ್ತಿತ್ವಗಳನ್ನೂ ಕೂಡ ದೂರವೇ ಇರಿಸಿದವು.ಎಡಪಕ್ಷಗಳ ಈ ಕ್ರಿಯೆ ಈ ಎರಡೂ ರಾಷ್ಟ್ರನಾಯಕನ ಚಿಂತನೆಗಳಿಂದ ಉಳಿದ ದೂರವೇ ಪಾರ್ಟಿಯ ಬೆಳವಣಿಗೆಗೆ ಅಡ್ಡಿಯಾಯಿತೆನ್ನಬಹುದು. ಭಾರತದ ಎಡಪಕ್ಷಗಳ ಮಟ್ಟಿಗೆ ಇದೊಂದು ಐತಿಹಾಸಿಕ ಪ್ರಮಾದವಾಗಿಯೇ ಇಂದಿಗೂ ಉಳಿದುಬಿಟ್ಟಿದೆ.
ಬಿ.ಶ್ರೀನಿವಾಸ