ಕನ್ನಡ ವಿಶ್ವವಿದ್ಯಾಲಯದ ಕಡೆ ತಲೆ ಹಾಕಿಯೂ ಮಲಗಿರದ ಎಸ್ಸೆಸ್ ಹಿರೇಮಠರಿಗೆ 1993 ರಲ್ಲಿ ಬಂಡಾಯದ ಹಿರಿಯ ಸಂಗಾತಿಯೊಬ್ಬರು ಕೊಟ್ಟ ಚೀಟಿಯೊಂದಿಗೆ ಕಂಬಾರರ ದರ್ಬಾರು ಪ್ರವೇಶ ಮಾಡಿದರು.
ಬಹಳ ಸಲ ಓದಿದೆ,ಅರ್ಥವಾಗುತ್ತಿಲ್ಲ
ಒಂದು ವರ್ಷದ ಅವಧಿಗೆ ಎರವಲು ಸೇವೆ ಭಾಗ್ಯ ಸಿಕ್ಕಿತ್ತು.ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಕನ್ನಡ ಸಂಸ್ಕೃತಿ ಹೇಗಿರಬೇಕು ಎಂಬುದಕ್ಕಾಗಿ ಪುಸ್ತಿಕೆಯನ್ನೂ ಪ್ರಕಟಿಸಿದರು.ಅದನ್ನು ಓದಿದ್ದ ಕುಲಪತಿ ಕಂಬಾರರು ಅದೊಂದು ದಿನ ಹರಪನಹಳ್ಳಿಯ ಐ.ಬಿ.ಯಲ್ಲಿ “ಬಹಳ ಸಲ ಓದಿದೆ,ಅರ್ಥವಾಗುತ್ತಿಲ್ಲ”ಎಂದಾಗ ಹಿರೇಮಠರು ನಿರ್ಭಿಡೆಯಿಂದ ವಿಚಾರಗಳನ್ನು,ವಿ.ವಿ.ಕುರಿತ ತಮ್ಮ ಕಣ್ಣೋಟದಲ್ಲಿ ಮಾತನಾಡಿದ್ದರು.
ಆಗ ಬಂಡಾಯ ಪುಸ್ತಕ ಜಾಥಾ ಮಾಡಿ ಊರಿಂದೂರಿಗೆ ಸೈಕಲ್ ತುಳಿದು ಪುಸ್ತಕ ಹಂಚಿದ ಗಾಥೆಯನ್ನು ಕೇಳಿದ್ದ,ಕಂಬಾರರಿಗೆ ಹಿರೇಮಠರನ್ನು ಕ.ವಿ.ವಿ.ಗೆ ಸೇರಿಸಿಕೊಂಡು ಪ್ರಸಾರಾಂಗದ ನಿರ್ದೇಶಕನ್ನಾಗಿಸಬೇಕೆಂಬ ಯೋಚನೆಯಿತ್ತಂತೆ.ಆದರೆ ಸಜ್ಜನರಾದ ಚಿ.ಶ್ರೀನಿವಾಸರಾಜು ಅವರನ್ನು ಬದಲಾಯಿಸದೆ ಇರುವುದೇ ಒಳಿತೆಂದು ಹಿರೇಮಠರು ಸುಮ್ಮನಾದರು.
ಬ್ರಾಹ್ಮಣರಿಂದ ಯಜ್ಞ
ಕಂಬಾರರ ಪ್ರತಿದಿನದ ಮೀಟಿಂಗುಗಳನ್ನು ತಮಾಷೆಯಾಗಿ “ಒಡ್ಡೋಲಗ”ಎನ್ನುತ್ತಿದ್ದರು.ಆದರೆ ಮುಂದೆ ಅನ್ವರ್ಥವಾಗಿಯೇ ನಡೆದದ್ದು ದುರಂತ.ಕನ್ನಡಕ್ಕಾಗಿ ಕಾಡಿನಲ್ಲಿ ಹೊಸ ವಿಶ್ವವಿದ್ಯಾಲಯವನ್ನು ಕಟ್ಟುವ ಸಲುವಾಗಿ,ಕಂಬಾರರು ಕಷ್ಟಪಟ್ಟರು. ಆದರೆ, ಕನ್ನಡ ವಿ.ವಿ.ಕಮಲಾಪುರದ ಗುಡ್ಡಗಳಿಗೆ ಸ್ಥಳಾಂತರಗೊಂಡ ಕ್ಷಣದಿಂದಲೇ ಕಂಬಾರರ ವ್ಯಕ್ತಿತ್ವದ ವೈರುಧ್ಯಗಳು ಢಾಳಾಗಿ ಕಾಣತೊಡಗಿದವು. ಶರಣರ ತಾತ್ವಿಕ ಆಶಯದ “ಕಾಯಕ ಮನೆ”ಯಲ್ಲೇ ಉದ್ಘಾಟನೆಯ ದಿನ ಬ್ರಾಹ್ಮಣರಿಂದ ಯಜ್ಞ ಮಾಡಿಸಿದರು.(ಕೃಪೆ:ಹಂಪಿ ವಿಶ್ವ ವಿದ್ಯಾಲಯದ ಒಳಹೊರಗು -ಎಸ್.ಎಸ್.ಹಿರೇಮಠ.ಬಿಸಿಲ ಬದುಕು ಪತ್ರಿಕೆ ಜುಲೈ 1997)
ದ್ರಾವಿಡ’ಭಾಷೆಗಷ್ಟೇ ಸೀಮಿತವಾದ ಪರಿಕಲ್ಪನೆಯಲ್ಲ
ಕ.ವಿ.ವಿ.ದ ಮುಖ್ಯ ಕಾಳಜಿ ಜನಸಾಮಾನ್ಯರನ್ನು ತಲುಪುವುದೇ ಆಗಬೇಕೆಂಬುದು ವಾದ.ಕೋಟ್ಯಂತರ ರೂಪಾಯಿ ಖರ್ಚು ಮಾಡುವ ವಿ.ವಿ.ಗೆ ಪಾರಂಪರಿಕ ದೇಸಿವಿಜ್ಞಾನಗಳ ಅಧ್ಯಯನಕ್ಕೆ ಅವಕಾಶ ನೀಡದೆ ಇರುವುದು ಖಂಡನೀಯ ಎಂದರು. ಸುಮಾರು 130 ರವರೆಗೆ ಇರುವ ದ್ರಾವಿಡ ಭಾಷೆಗಳಲ್ಲಿ ಲಿಪಿಯಿರುವ ಕೇವಲ ನಾಲ್ಕು ಭಾಷೆಗಳಲ್ಲಿ ಕನ್ನಡವೂ ಒಂದು.’ದ್ರಾವಿಡ’ಭಾಷೆಗಷ್ಟೇ ಸೀಮಿತವಾದ ಪರಿಕಲ್ಪನೆಯಲ್ಲ.ಅದೊಂದು ದೇಶವ್ಯಾಪಿ ದ್ರಾವಿಡ ಜನಕುಲಗಳ ಪ್ರಧಾನ ಅಂಗ ಎಂಬುದು ಹಿರೇಮಠರ ಪ್ರಬಲ ವಾದವಾಗಿತ್ತು. ಕನ್ನಡ ನೆಲ,ದೇಸಿ ನೆಲೆಗಳ ಸಂಶೋಧನೆಯೇ ವಿ.ವಿ.ಯ ನಿಜವಾದ ಕಾಳಜಿಯಾಗಿದ್ದೇ ಆದಲ್ಲಿ ಮೊದಲು ಈ ಕಾರ್ಯ ಕೈಗೆತ್ತಿಕೊಳ್ಳಿ ಎಂದರು.
ಕನ್ನಡ ಜನಕುಲಗಳ ಕುರಿತ ಸಂಸ್ಕೃತಿ ಶೋಧ ಕಾರ್ಯ ನಡೆಯಲಿ
ಬುಡಕಟ್ಟು ಮತ್ತು ಜಾತಿಗಳಲ್ಲಿ ವಿಭಜಿತಗೊಂಡ ಕನ್ನಡ ಜನಕುಲಗಳ ಕುರಿತ ಸಂಸ್ಕೃತಿ ಶೋಧ ಕಾರ್ಯ ನಡೆಯಲಿ ಎಂದು ಆಗ್ರಹಿಸಿದರು.ಜಾತಿ ಘಟಕ ರೂಪಿಗಳ ಸಾಮಾಜಿಕ,ಆರ್ಥಿಕ,ಸಾಂಸ್ಕೃತಿಕ ದಾಖಲೀಕರಣ ಮತ್ತು ಸಂಶೋಧನೆಯ ಆಗಬೇಕಿದೆ.ಇದಕ್ಕಾಗಿ ತಲಸ್ಪರ್ಶಿ ಕ್ಷೇತ್ರ ಅಧ್ಯಯನದ ಅಗತ್ಯವನ್ನು ಹಿರೇಮಠರು ವಿ.ವಿ.ಯ ಒಡ್ಡೋಲಗದಲ್ಲಿ ಮಂಡಿಸಿದರು ಆದರೆ ಅದು ವ್ಯರ್ಥವಾಯಿತು.
ಒಂದು ಹಂತದಲ್ಲಿ ಹಡಗಲಿಯ ಖ್ಯಾತ ರಾಜಕಾರಣಿಯ ಮುಖವಾಡವನ್ನು ಬಯಲಿಗೆಳೆದ ಸಿಟ್ಟು ಇಟ್ಟುಕೊಂಡಿದ್ದವರೂ ಈಗ ಕಂಬಾರರೊಂದಿಗೆ ಆಟವಾಡಿದರು.ಸಮಯಕ್ಕೆ ಸರಿಯಾಗಿ ಎನ್ನುವಂತೆ “ರಾಜ್ಯೋತ್ಸವ-ಜ್ಞಾನೋತ್ಸವ”ಎಂಬ ಪುಸ್ತಕ ಹೊತ್ತು ಮಾರುವ ಕೆಲಸಕ್ಕಿಳಿದಿದ್ದ ಹಿರೇಮಠರು ತನ್ನ ಸಹೋದ್ಯೋಗಿ ಪ್ರೊ.ಪುರುಷೋತ್ತಮ ಬಿಳಿಮಲೆಯವರ ಜತೆ ಹೆಚ್ಚು ಕಡಿಮೆ ಹಮಾಲಿ ಕೆಲಸ ಮಾಡುತ್ತಿದ್ದರು.
ಜಾಥಾ ಚಿತ್ರದುರ್ಗ ಮುಗಿಸಿಕೊಂಡು ಬಳ್ಳಾರಿಗೆ ಬಂದಾಗ ಯೋಜನೆಯ ಸಫಲತೆಯ ಖುಷಿಯಲ್ಲಿ ಕವಿಗೋಷ್ಟಿಯಿತ್ತು.ಅಲ್ಲಿ ಇಟಿಗಿ ಈರಣ್ಣ ಎಂಬ ಕವಿ ಮಹಾಶಯರು ,ಕಂಬಾರರ ವಿರುದ್ಧ ಪ್ರಾಸಬದ್ಧವಾಗಿ ಕವಿತೆ ಓದಿದರು.ಎಸ್ಸೆಸ್ ಹಿರೇಮಠರನ್ನು ಕಂಡರಾಗದ ಮಂದಿಗೆ ಇಷ್ಟೇ ಸಾಕಿತ್ತು,ಪಟಾಲಂ ಕುಲಪತಿ ಚಂದ್ರಶೇಖರ ಕಂಬಾರರ ಕಿವಿಯೂದಿತು.ದೈನಂದಿನ ಒಡ್ಡೋಲಗದಲ್ಲಿ ಕಂಬಾರರಿಂದ ಹಿರೇಮಠರು ತೀವ್ರ ಅವಮಾನಕ್ಕೊಳಗಾದರು.ಜಾಥಾ ನಿಲ್ಲಿಸಿದಾಗ ಬದ್ಧತೆಯ ಹಿರೇಮಠರು ಅಕ್ಷರಶಃ ಅತ್ತುಬಿಟ್ಟರು.ಬಿಳಿಮಲೆಯವರ ಜೊತೆ ಗ್ರಾಮದೇವತೆಗಳ ವಿಶ್ವಕೋಶದ ತಯಾರಿಕೆಗೆ ತಳ್ಳಲ್ಪಟ್ಟ ಮೇಷ್ಟ್ರು,ದಿನವಿಡೀ ಬರೆದರು. ಬರೆದೂ ಬರೆದು ಕೈ ಬಾತವು. ಬೆರಳಿಗೆ ಬಟ್ಟೆ ಸುತ್ತಿಕೊಂಡು ದಿನಕ್ಕೆ ಹತ್ತಾರು ತಾಸು ಬರೆದರು.
ನಿಗದಿತ ಅವಧಿಯೊಳಗೆ ಯೋಜನೆಯನ್ನು ಪೂರೈಸಲಾಯಿತು.ವಿಶ್ವವಿದ್ಯಾಲಯದಿಂದ ಹೊರಹಾಕುತ್ತಾರೆಂಬ ಪುಕಾರುಗಳು ಅದೊಂದು ದಿನ ನಿಜವಾಯಿತು.ಈ ಶತಮಾನದ ಆದಿಯಲ್ಲಿ ಥರ್ಸಟನ್ ಮತ್ತು ನಂಜುಂಡಯ್ಯ,ಅನಂತಕೃಷ್ಣ ಅಯ್ಯರ್ ಗಳು ತಮ್ಮ ಪರಿಮಿತಿಯಲ್ಲಿ ಮಾಡಿದ ಕೆಲಸ ಬಿಟ್ಟರೆ ಕನ್ನಡದ ಜನಕುಲ ಸಾಂಸ್ಕೃತಿಕ ಅಧ್ಯಯನಗಳಾಗಿರಲಿಲ್ಲ.
ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಹುಮ್ಮಸ್ಸು ಮೇಷ್ಟರಲ್ಲಿತ್ತು.ವಸಾಹತು ಕಾಲದ ಯುರೋಪಿನ ವಿದ್ವಾಂಸರು ಕರುನಾಡಿನ ಕುರಿತು ಬೇರೆ ಬೇರೆ ಭಾಷೆಗಳಲ್ಲಿ ಬರೆದ ಲೇಖನಗಳು,ಗ್ರಂಥಗಳು ಕನ್ನಡಕ್ಕೆ ಬರಬೇಕಿತ್ತು,ದೇವಿಪ್ರಸಾದರ “ಲೋಕಾಯತ”, ಡರ್ ಕ್ಯಾಂ ರ “ದಿ ಫಂಡಮೆಂಟಲ್ಸ್ ಆಫ್ ರಿಲಿಜಿಯಸ್ ಲೈಫ್” ,ಬಾಗ್ಚಿಯ “ಸ್ಟಡೀಸ್ ಇನ್ ತಂತ್ರಾಸ್ ” ಭಂಡಾರ್ಕರ್ ರ”ವೈಷ್ಣವಿಸಂ ಶೈವಿಜಂ ಅಂಡ್ ಮೈನರ್ ರಿಲಿಜಿಯಸ್ ಸಿಸ್ಟಮ್ಸ್ ” ಮಾರ್ಷಲಿಯ “ಮೊಹೆಂಜೋದಾರೋ ಎಂಡ್ ದಿ ಇಂಡಸ್ ಸಿವಿಲೈಜೇಷನ್ ” ದಾಸ್ ಗುಪ್ತಾರ “ದಿನ ಹಿಸ್ಟರಿ ಆಫ್ ಇಂಡಿಯನ್ ಫಿಲಾಸಫಿ”ಮುಂತಾದ ಕೃತಿಗಳನ್ನು ಪರಿಚಯಿಸಲು ಹಾತೊರೆದ ಘನ ವಿದ್ವತ್ತಿನ ಆಕೃತಿಯೊಂದು ಕನ್ನಡ ವಿಶ್ವವಿದ್ಯಾಲಯದಿಂದ ಸದ್ದಿಲ್ಲದೆ ವಿಷಾದದಿಂದ ಆ ಒಂದು ಕಪ್ಪು ಸಂಜೆ ಹೊರಬಂದಿತು.
…..ಮುಂದುವರಿಯುವುದು
ಬಿ.ಶ್ರೀನಿವಾಸ