ದಾವಣಗೆರೆ: ಮಕ್ಕಳಲ್ಲಿ ಸೇವಾ ಮನೋಭಾವನೆ ಬೆಳೆಸುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ ಎಂದು ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ ಹೇಳಿದರು.
ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಶ್ರೀಸತ್ಯಸಾಯಿ ಗ್ರಾಮ ಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಾರ್ಥನೆ ಮಾಡುವ ತುಟಿಗಳಿಗಿಂತ, ಸೇವೆ ಮಾಡುವ ಕೈಗಳೇ ಶ್ರೇಷ್ಠ’ ಎನ್ನುವ ಶ್ರೀಸತ್ಯಸಾಯಿ ಬಾಬಾರವರ ವಾಣಿಯಂತೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶ್ರೀಸತ್ಯಸಾಯಿ ಬಾಬಾರವರ ದಿವ್ಯ ಸಂದೇಶವನ್ನು ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅನೇಕ ಸೇವಾ ಕಾರ್ಯಗಳನ್ನು ಶಾಲಾ ವಿದ್ಯಾರ್ಥಿಗಳಿಂದಲೇ ನೇರವೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರೇಮಾವತಾರಿ ಶ್ರೀಸತ್ಯ ಸಾಯಿ ಬಾಬಾರವರ ಕುರಿತು ಈಶ್ವರಮ್ಮ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ರಂಗನಾಥ್ ಉಪನ್ಯಾಸ ನೀಡಿದರು.
Read also : ಹರಿಹರ|ಹಲ್ಲೆ ನಡೆಸಿ ದರೋಡೆ ಪ್ರಕರಣ: ಆರು ಜನರ ಬಂಧನ
ವಿದ್ಯಾರ್ಥಿಗಳಿಂದ ಗ್ರಾಮ ಸ್ವಚ್ಛತಾ ಸೇವೆ, ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಮಗ್ರಿಗಳ ವಿತರಣೆ, ಮನೆ ಮನೆಗೆ ಸೇವಾ ಪದಾರ್ಥಗಳನ್ನು ಮತ್ತು ಸ್ವಾಮಿಯ ಪ್ರಸಾದವನ್ನು ಗ್ರಾಮದ ಸುಮಾರು 250 ಮನೆಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ವಿಶಾಲಾಕ್ಷಿ, ಗ್ರಾಮದ ಮುಖ್ಯಸ್ಥರಾದ ರೇವಣಸಿದ್ದಪ್ಪ ದಳಪತಿ, ನಾಗರಾಜ ಹಾಗೂ ಶ್ರೀಸತ್ಯ ಸಾಯಿ ಸೇವಾ ಸಮಿತಿಯ ಸಂಚಾಲಕ ಪಾಂಡುರಂಗ ರೇವಣಕರ್, ಈಶ್ವರಮ್ಮ ಶಾಲೆಯ ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ, ಶಾಲಾ ಶಿಕ್ಷಕರಾದ ರಂಜನಿ, ಕೆ.ರವಿ, ಎಚ್.ಎಸ್.ಅನುರಾಧ, ಎಂ.ಎಂ.ಪಟೇಲ್ ಶಾಲಾ ಮಂತ್ರಿ ಮಂಡಲದ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಮಲ್ಲಶೆಟ್ಟಿಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಅಂಧಮಕ್ಕಳಿಗೆ ಆಹಾರ ಪದಾರ್ಥ ವಿತರಣೆ: ನ.7ರಂದು ಬೆಳಗ್ಗೆ 10.30ಕ್ಕೆ ಬಾಡ ಕ್ರಾಸ್ ಬಳಿಯಿರುವ ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧಮಕ್ಕಳಿಗೆ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ. ಭಜನೆ, ಉಪನ್ಯಾಸ, ಪ್ರಮಾವತಾರಿ ಶ್ರೀಸತ್ಯಸಾಯಿ ಬಾಬಾ, ಗ್ರಾಮ ಸ್ವಚ್ಛತಾ ಸೇವೆ ಈಶ್ವರಮ್ಮ ಶಾಲಾ ಮಕ್ಕಳಿಂದ, ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ, ಮನೆ ಮನೆಗೆ ಸೇವಾ ಪದಾರ್ಥ ವಿತರಣೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಆಶ್ರಮದ ಮುಖ್ಯಸ್ಥರು, ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಶ್ರೀಸತ್ಯಸಾಯಿ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ.
ಬೆಳಗ್ಗೆ 12.30 ಕ್ಕೆ ಪಿ.ಬಿ.ರಸ್ತೆಯ ಮಹಾವೀರ ಗೋಶಾಲೆಯ ಗೋವುಗಳಿಗೆ ಹುಲ್ಲು ಮತ್ತು ಪಶು ಆಹಾರ ವಿತರಣೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಗೋಶಾಲೆಯ ಮುಖ್ಯಸ್ಥರು, ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
