ದಾವಣಗೆರೆ : “ಬದುಕಿನಲ್ಲಿ ಎದುರಾಗುವ ಬಡತನ, ನೋವು, ಅವಮಾನಗಳಂತಹ ಅಪಸವ್ಯಗಳ ವಿರುದ್ದ ವಿದ್ಯಾರ್ಥಿ – ಯುವಜನರು ಪ್ರಭಲವಾದ ಪ್ರತಿರೋಧವನ್ನು ತೋರಿಸಿ, ಎದುರಿಸಿ ನಿಲ್ಲುವ ಛಲಗಾರಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಸಂಕಷ್ಟಗಳಿಂದ ವಿಮುಕ್ತಿ ಸಾಧ್ಯವಿಲ್ಲ” ಎಂಬುದಾಗಿ ನಗರದ ಹಿರಿಯ ಪತ್ರಕರ್ತ ಹಳೇಬೀಡು ರಾಮ ಪ್ರಸಾದ್ ಅಭಿಪ್ರಾಯ ಪಟ್ಟರು.
ದಾವಣಗೆರೆಯ ಹಿರಿಯ ಜಾನಪದ ತಜ್ಞ, ಕನ್ನಡ ಪ್ರೊಫೆಸರ್ ಡಾ.ಹೆಚ್.ವಿಶ್ವನಾಥ್‌ರ ಹುಟ್ಟು ಹಬ್ಬದ ಅಂಗವಾಗಿ ಗಾಂಧಿನಗರದಲ್ಲಿ ನಿನ್ನೆ ರಾತ್ರಿ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ರಾಮ ಪ್ರಸಾದ್ , “ದಮನಿತ ಸಮುದಾಯದಲ್ಲಿ ಜನಿಸಿ ಭರಿಸಲಾಗದ ಸಂಕಷ್ಟಗಳ ಸರಮಾಲೆಯನ್ನೇ ಹೊದ್ದು, ದೈನಂದಿನ ಬದುಕು ಸಾಗಿಸುವುದೇ ಯಮಯಾತನೆ ಅನಿಸುವ ಸಂಧರ್ಭದಲ್ಲಿಯೂ ಛಲದಿಂದ ಮೇಲೆದ್ದು, ಪ್ರತಿರೋಧಕ ಹೋರಾಟವನ್ನು ಮೈಗೂಡಿಸಿಕೊಂಡು ಮುನ್ನಡೆದ ಪರಿಣಾಮವಾಗಿಯೇ ಈ ಗಾಂಧಿ ನಗರದ ಮಣ್ಣಿನಲ್ಲಿ ಒಬ್ಬ ಹೆಚ್.ಆಂಜನೇಯ, ಒಬ್ಬ ಹೆಚ್.ವಿಶ್ವನಾಥ್ ಅಂತಹವರು ಮೂಡಿಬಂದು ಕ್ರಮವಾಗಿ ರಾಜಕೀಯ – ಶಿಕ್ಷಣ ರಂಗದಲ್ಲಿ ಛಾಪು ಒತ್ತಲು ಸಾಧ್ಯವಾಯಿತು” ಎಂಬುದನ್ನು ನೆನಪಿಸಿದರು.
“ಮುಂಬರುವ ದಿನಗಳಲ್ಲಿ ತಮ್ಮ ಹಿರಿಯ ಸೋದರ ಹೆಚ್.ಆಂಜನೇಯ ರಂತೆ ಡಾ.ವಿಶ್ವನಾಥ್ ರು ಶಿಕ್ಷಣದ ಜೊತೆಯಲ್ಲಿ ಸಾಮಾಜಿಕ ರಂಗದಲ್ಲಿಯೂ ಸೇವೆ ಸಲ್ಲಿಸಲು ಮುಂದಾಗಬೇಕು” ಎಂದೂ ರಾಮ ಪ್ರಸಾದ್ ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಹೆಗ್ಗೆರೆ ರಂಗಪ್ಪ, ತಂಜೀಮ್ ಸಮಿತಿ ಅಧ್ಯಕ್ಷ ದಾದೂಸೇಟ್, ನಗರಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದ ರಾಜ್, ಚಳ್ಳಕೆರೆ ಎಪಿಎಂಸಿ ಮಾಜೀ ಅಧ್ಯಕ್ಷ ಶಿವಣ್ಣ ಅವರುಗಳು ಮಾತನಾಡಿ ನಮ್ಮ ನಡುವಿನ ಅಪ್ಪಟ ಪ್ರತಿಭೆ ಡಾ.ಹೆಚ್.ವಿಶ್ವನಾಥ್‌ರ ಸಾಧನೆ – ಜನಪರ ಕಾಳಜಿ ಸರ್ವ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಪ್ರಶಂಸಿಸಿದರು.
ತಮಗೆ ತೋರಿದ ಅಭೂತಪೂರ್ವ ಪ್ರೀತಿ – ಸನ್ಮಾನಕ್ಕೆ ತುಂಬು ಹೃದಯದ ಕೃತಜ್ಞತೆ ಅರ್ಪಿಸಿದ ಡಾ.ಹೆಚ್.ವಿಶ್ವನಾಥ್ ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳನ್ನು ನುಂಗಿ, ನಗು ನಗುತ್ತಲೇ ಈ ಮಟ್ಟದ ಸಾಧನೆಗೈಯ್ಯಲು ತಮ್ಮ ತಾಯಿ ಬಾಲಮ್ಮ, ತಂದೆ ಹನುಮಂತಪ್ಪ ಹಾಗೂ ಅಣ್ಣ ಆನಂದ್‌ರ ಆಶೀರ್ವಾದ ಹಾಗೂ ದೊಡ್ದಣ್ಣ ಮಾಜೀ ಸಚಿವ ಹೆಚ್.ಆಂಜನೇಯರ ಸಕಾಲಿಕ ಮಾರ್ಗದರ್ಶನ ಮತ್ತು ಡಾ.ಹೆಚ್.ನರಸಿಂಹಯ್ಯನವರಂತಹ ಮೇಧಾವಿ ಗುರುಗಳು, ಹಿರಿಯರು – ಅಭಿಮಾನಿಗಳ ಬೆಂಬಲ ಕಾರಣ ಎಂದು ಸ್ಮರಿಸಿದರು.
“ಬಡತನ, ಹಸಿವು ಹಾಗೂ ಅವಮಾನಗಳಿಗೆ ಮದ್ದು ಶಿಕ್ಷಣ ಮತ್ತು ಸ್ವಾಭಿಮಾನಿ ಬದುಕು. ಏನೇ ಆದರೂ ಮಕ್ಕಳನ್ನು ವಿದ್ಯಾವಂತರಾಗಿಸಿ” ಎಂದು ಮನವಿ ಮಾಡಿದ ವಿಶ್ವನಾಥ್ “ಎಲ್ಲ ಸಮುದಾಯದವರನ್ನೂ ಪ್ರೀತಿಯಿಂದ ನೋಡಿದಾಗ ಮಾತ್ರ ಡಾ.ಅಂಬೇಡ್ಕರ್ ಕಂಡ ಸಮ ಸಮಾಜ ನಿರ್ಮಾಣ ಸಾಧ್ಯ” ಎಂದು ಕಿವಿಮಾತು ಹೇಳಿದರು.
Read also : ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಈ ವಾರ ಭಾರೀ ಮಳೆ
ಸಮಾರಂಭದ ಸಾನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಡಾ.ಬಸವ ಪ್ರಭು ಸ್ವಾಮಿಗಳು “ಬಡತನದಲ್ಲಿ ಹುಟ್ಟಿದರೂ ಹೃದಯದಲ್ಲಿ ಶ್ರೀಮಂತರಾಗಿರುವ ಡಾ.ವಿಶ್ವನಾಥ್ ಬದುಕಿನಲ್ಲಿ ಹಣ ಸಂಪಾದನೆಗಿಂತಾ ಜ್ಞಾನ ಸಂಪಾದನೆಗೆ ಮಹತ್ವ ಕೊಟ್ಟು ಅಧ್ಯಯನ ನಡೆಸಿದ್ದರಿಂದಲೇ ಈ ಪರಿಯ ಸಾಧನೆ ಮಾಡಲು ಸಾಧ್ಯವಾಯಿತು” ಎಂದರಲ್ಲದೆ “ತಮ್ಮೊಂದಿಗೆ ಸುತ್ತಲಿನವರನ್ನೂ ಬೆಳಸಿದ್ದು ವಿಶ್ವನಾಥ್‌ರ ಹೆಗ್ಗಳಿಕೆ. ತಮ್ಮ ಪಿ.ಹೆಚ್.ಡಿ. ಪ್ರಬಂಧ ಸಿದ್ದಪಡಿಸುವಲ್ಲಿಯೂ ವಿಶ್ವನಾಥ್‌ರ ನೆರವಿತ್ತು” ಎಂಬುದನ್ನು ಸ್ಮರಿಸಿದರು.
ಅಪಾರ ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದ ಅಭಿಮಾನಿಗಳು ಡಾ.ವಿಶ್ವನಾಥ್ ಹಾಗೂ ಶ್ರೀಮತಿ ಶೈಲಜಾ ವಿಶ್ವನಾಥ್ ರನ್ನು ಅದ್ದೂರಿಯಾಗಿ ಸನ್ಮಾನಿಸುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಸ್ವಾಗತಿಸಿ, ಪ್ರಾಸ್ಥಾವಿಕ ಭಾಷಣ ಮಾಡಿದ ನಗರಸಭಾ ಮಾಜೀ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ ಅವರು ಮಾತನಾಡಿ “ತಮ್ಮ ಒಡನಾಡಿ ವಿಶ್ವನಾಥರು ಒಂಬತ್ತಕ್ಕೂ ಹೆಚ್ಚು ಪದವಿಗಳನ್ನು ಪಡೆದು, ಹತ್ತಾರು ಮೌಲ್ವಿಕ ಕೃತಿಗಳನ್ನು ಪ್ರಕಟಿಸಿ, ಸಹಸ್ರಾರು ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಮೂಲಕ ಸದೃಢ ಸಮಾಜ ನಿರ್ಮಿಸುವಲ್ಲಿ ಮಹತ್ವದ ಹೆಜ್ಜೆ ಗುರುತು ಮೂಡಿಸಿರುವುದು ನಮ್ಮೆಲ್ಲಾ ಗಾಂಧಿ ನಗರ ನಿವಾಸಿಗಳು ಹೆಮ್ಮೆ ಪಡುವಂತಹುದು” ಎಂದು ಪ್ರಶಂಸಿಸಿದರು.