ದಾವಣಗೆರೆ ಆ.12: ಏಡ್ಸ್ ಕುರಿತಂತೆ ಯುವಜನರಲ್ಲಿ ಜಾಗೃತಿ ಹೊಂದುವುದು ಅತೀ ಮುಖ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ್ ಮ.ಕರೆಣ್ಣವರ ಹೇಳಿದರು.
ನಗರದ ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ಜಿಲ್ಲಾ ಆರ್.ಆರ್.ಸಿ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಎಚ್‌ಐವಿ (ಏಡ್ಸ್) ಮಾಸಾಚರಣೆ – 2025 ಅಂಗವಾಗಿ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಏಡ್ಸ್ ಕುರಿತಂತೆ ಯುವಕರಿಗೆ ಜಾಗೃತಿ ಮೂಡಿಸಿದ ಅವರು, ಪ್ರಕೃತಿ ಯಾವುದೇ ಆಪೇಕ್ಷೆಯಿಲ್ಲದೇ ನಮಗಾಗಿ ಎಲ್ಲದನ್ನು ಉಚಿತವಾಗಿ ಕೊಡುತ್ತದೆ. ಅದರ ಮೇಲೆ ಅತಿಕ್ರಮಣ ಮಾಡುವುದು ಸಲ್ಲದು. ಪ್ರಕೃತಿ ನಾಶವಾದಲ್ಲಿ ರೋಗ ರುಜಿನಗಳು ಹೆಚ್ಚಾಗಿ ಅನಾರೋಗ್ಯಕ್ಕೀಡು ಮಾಡುತ್ತದೆ. ಆದ್ದರಿಂದ ಪ್ರಕೃತಿ ಉಳಿಸಿ ಬೆಳೆಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಅವಶ್ಯವೆಂದು ತಿಳಿಸಿದರು.
ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪಿ.ಡಿ.ಮುರುಳಿಧರ್ ಮಾತನಾಡಿ, ಇಂದಿನ ಯುವ ಜನತೆ ರೋಗದ ಬಗ್ಗೆ ಸದಾ ಎಚ್ಚರದಿಂದ ಇರಬೇಕಾದ ಅಗತ್ಯತೆ ಇದೆ. ಪ್ರತಿ ವರ್ಷ ಲಕ್ಷಾಂತರ ಜನ ಏಡ್ಸ್ಗೆ ತುತ್ತಾಗುತಿರುವುದು ಆತಂಕದ ಸಂಗತಿ. ಇದರಲ್ಲಿ ಬಹುತೇಕ ಯುವಜನತೆ ಹೆಚ್‌ಐವಿ, ಏಡ್ಸ್ಗೆ ತುತ್ತಾಗಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.
Read also : ದಾವಣಗೆರೆ : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಆಯ್ಕೆಪಟ್ಟಿ ಪ್ರಕಟ, ಆಕ್ಷೇಪಣೆಗಳಿಗೆ ಆಹ್ವಾನ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಕೆ.ಷಣ್ಮುಖ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಎಸ್.ಷಣ್ಮುಖಪ್ಪ, ಡಾ. ಭಾಗ್ಯಶ್ರೀ ಹುಬ್ಳಿಕರ್, ಎನ್.ಎಸ್.ಎಸ್ ಅಧಿಕಾರಿ ಡಾ. ಮಂಜುನಾಥ ಶ್ಯಾಗಲೆ ಹಾಗೂ ಸೌಮ್ಯ. ಬಿ ಉಪಸ್ಥಿತರಿದ್ದರು. ಪಿ.ಡಿ. ಅಣ್ಣಪ್ಪ ವಿಶ್ವನಾಥ್, ರುದ್ರೇಶ್, ಡಾ. ಕೆ.ಆರ್.ಮಂಜುನಾಥ್ ಪ್ರಾಧ್ಯಾಪಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಇದ್ದರು.