ದಾವಣಗೆರೆ : ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ ನಿಷೇಧ ಮತ್ತು ಬಾಲ ನ್ಯಾಯ ಕಾಯಿದೆ ಸೇರಿದಂತೆ ಜನರಿಗಾಗಿ ರೂಪಿಸಲಾದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಇಲಾಖೆಗಳು ಹೆಚ್ಚು ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ.ಎನ್.ಹೆಗಡೆ ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಕರೆಯಲಾಗಿದ್ದ ಯುಟಿಆರ್ಸಿ, ಬಾಲನ್ಯಾಯ ಕಾಯಿದೆ, ಮಾನವ ಕಳ್ಳಸಾಗಣೆ ತಡೆ, ಪೋಕ್ಸೋ ಕಾಯಿದೆ ಅನುಷ್ಠಾನ ಹಾಗೂ ವಿವಿಧ ಇಲಾಖೆಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲ್ಯ ವಿವಾಹ
ಬಾಲ್ಯ ವಿವಾಹ ತಡೆಗಟ್ಟಲು ಇರುವ ಕಾನೂನು ಮತ್ತು ಇದರಿಂದ ಮಕ್ಕಳ ಮೇಲಾಗುವ ದೈಹಿಕ, ಸಾಮಾಜಿಕ, ಶೈಕ್ಷಣಿಕವಾಗಿ ಆಗುವ ತೊಂದರೆಗಳ ಬಗ್ಗೆ ತಿಳಿಸಬೇಕು. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾದರೆ ಮುಂದೆ ಆಗುವ ತೊಂದರೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಬಾಲ್ಯದಲ್ಲಿ ಮದುವೆಯಾಗುವ ಹುಡುಗಿಯರು ಸಾಮಾನ್ಯವಾಗಿ ಶಿಕ್ಷಣ ಮತ್ತು ಭವಿಷ್ಯದ ವೃತ್ತಿ ಅವಕಾಶಗಳ ಪ್ರವೇಶವನ್ನು ಹೊಂದಿರುವುದಿಲ್ಲ. ಆರಂಭಿಕ ಗರ್ಭಧಾರಣೆ ಮತ್ತು ಹೆರಿಗೆಯ ಪರಿಣಾಮವಾಗಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಸಾಮಾನ್ಯವಾಗಿದೆ ಎಂದರು.
ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ 2024 ರ ಜನವರಿಯಿಂದ ಇಲ್ಲಿಯವರೆಗೆ ಬಾಲ್ಯ ವಿವಾಹ ತಡೆ ಬಗ್ಗೆ 25 ದೂರುಗಳು ಸ್ವೀಕೃತವಾಗಿದ್ದು 22 ಪ್ರಕರಣಗಳಲ್ಲಿ ಬಾಲ್ಯ ವಿವಾಹ ತಡೆಗಟ್ಟಲಾಗಿದೆ. ಮತ್ತು ಉಳಿದ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದಾಗ ತಡೆಯಲಾದ ಪ್ರಕರಣಗಳಲ್ಲಿ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಪುನರ್ವಸತಿ ಕಲ್ಪಿಸಬೇಕೆಂದು ತಿಳಿಸಿದ ಅವರು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಪೌಷ್ಟಿಕ ಆಹಾರ ನೀಡಲು ಕ್ರಮ ವಹಿಸಬೇಕೆಂದರು.
ಪೋಕ್ಸೋ ಕಾಯಿದೆ
ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ಥರಾಗುವವರಿಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಪುನರ್ವಸತಿ ಕಲ್ಪಿಸುವ ಕೆಲಸ ಮಾಡಬೇಕು. ಕಾಯಿದೆಯಡಿ ಪ್ರಕರಣ ದಾಖಲಿಸುವಾಗ ಸಂತ್ರಸ್ಥರು ಇದ್ದ ಕಡೆಯೇ ಹೋಗಿ ಮಾಹಿತಿ, ಹೇಳಿಕೆ ಪಡೆದುಕೊಂಡು ಬರಬೇಕು. ಆದರೆ ಅವರನ್ನು ನೀವಿರುವಲ್ಲಿಗೆ ಕರೆದುಕೊಂಡು ಬರಬಾರದು. ಆದರೆ ಇವರನ್ನು ಬಾಲಮಂದಿರದಲ್ಲಿ ಇಟ್ಟುಕೊಳ್ಳಬಾರದು ಎಂದರು.
ತಂಬಾಕು ಮುಕ್ತ ವಲಯ ಫಲಕ
ಶಾಲಾ, ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಯಂತ್ರಣ ಕುರಿತಂತೆ ಹೆಚ್ಚಿನದಾಗಿ ಜಾಗೃತಿ ಮೂಡಿಸಬೇಕು. ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ತಂಬಾಕು ಮುಕ್ತ ವಲಯ ನಾಮಫಲಕಗಳನ್ನು ಅಳವಡಿಸಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಬಾಲ ಮಂದಿರಕ್ಕೆ ದಾಖಲಿಸಿ
ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಖಾಸಗಿ ಅನುದಾನಿತ ಕುಟೀರಕ್ಕೆ ಸೇರಿಸುವ ಬದಲಾಗಿ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ದಾಖಲು ಮಾಡುವ ಮೂಲಕ ಅವರ ಮುಂದಿನ ಭವಿಷ್ಯಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಹಾಗೂ ಅವರು ಶೈಕ್ಷಣಿಕವಾಗಿ ಮುಂದುವರೆಯಲು ಶಾಲೆಗೆ ಪ್ರವೇಶ ಕಲ್ಪಿಸಬೇಕು ಎಂದ ಅವರು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ಊಟದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲು ಸಮಾಜ ಕಲ್ಯಾಣಾಧಿಕಾರಿಗೆ ತಿಳಿಸಿದರು.
ಇದೇ ವೇಳೆ ವೇಶ್ಯಾವಾಟಿಕೆಗೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಜನವರಿ-24 ರಿಂದ ಮಾರ್ಚ್ ವರೆಗೆ 3 ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ್ ತಿಳಿಸಿದರು.
ಹೆಗಡೆ ನಗರದಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಕಟ್ಟಡವನ್ನು ನಿರ್ಮಿಸುವಂತೆ ತಿಳಿಸಿದಾಗ ಅದಕ್ಕೆ ಜಿ.ಪಂ. ಸಿಇಓ ಸುರೇಶ್ ಬಿ.ಇಟ್ನಾಳ್ ಪ್ರತಿಕ್ರಿಯಿಸಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಲಾಗುತ್ತದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ .ಮ.ಕರೆಣ್ಣನವರ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಮರಣ ಪ್ರಮಾಣ ಪತ್ರ ಇಲ್ಲವೆಂಬ ಕಾರಣಕ್ಕಾಗಿ ಪೌತಿ ಖಾತೆ ಬದಾಲಾವಣೆ ಮಾಡುತ್ತಿಲ್ಲ. ಅದನ್ನು ಪರಿಶೀಲಿಸಿ ಮಾಹಿತಿ ನೀಡಲು ತಿಳಿಸಿ ಎಲ್ಲಾ ಇಲಾಖೆಗಳು ಜನರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಬೇಕು. ಈ ಮಾಹಿತಿಯನ್ನು ಸಂಗ್ರಹಿಸಿ ಕಿರುಹೊತ್ತಿಗೆ ತರುವ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಜಿ.ಪಂ. ಸಿಇಒ ಸುರೇಶ್.ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು.ಎಸ್.ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಿಕಿ ವಾಸಂತಿ ಉಪ್ಪಾರ್, ಡಿಹೆಚ್ಓ ಡಾ.ಷಣ್ಮುಖಪ್ಪ, ಆರ್ಸಿಹೆಚ್ ಅಧಿಕಾರಿ ರೇಣುಕಾರಾಧ್ಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣಕುಮಾರ್ ಇತರರು ಉಪಸ್ಥಿತರಿದ್ದರು.