ದಾವಣಗೆರೆ (Davanagere): ತಮಿಳು ಕನ್ನಡಕ್ಕೆ ಜನ್ಮ ನೀಡಿತು” ಎಂಬ ಹೇಳಿಕೆ ನೀಡಿರುವ ನಟ ಕಮಲ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡಿಗರ ಸ್ವಾಭಿಮಾನ ಕೆರಳಿಸುವಂಥ ಹೇಳಿಕೆ ನೀಡಿರುವುದು ಕಮಲ್ ಹಾಸನ್ ಅವರಿಗೆ ಶೋಭೆ ತರುವಂಥದ್ದಲ್ಲ. ಹಿರಿಯ ನಟನಾಗಿ ಈ ರೀತಿಯಾಗಿ ಹೇಳಿಕೆ ನೀಡುವುದು ಖಂಡನೀಯ. ಯಾವ ಕನ್ನಡಿಗರೂ ಕಮಲ್ ಹಾಸನ್ ಹೇಳಿಕೆ ಒಪ್ಪುವುದಿಲ್ಲ. ಬೇಷರತ್ ಆಗಿ ಕ್ಷಮೆಯಾಚಿಸದಿದ್ದರೆ ಕನ್ನಡಿಗರ ಆಕ್ರೋಶ ಕಡಿಮೆಯಾಗದು. ಕೂಡಲೇ ಹೇಳಿಕೆ ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆಯಾಚಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡ ನಾಡು, ಭಾಷೆ, ಜಲ, ಸ್ವಾಭಿಮಾನದ ವಿಚಾರ ಬಂದಾಗ ಯಾವ ಕನ್ನಡಿಗನೂ ಸುಮ್ಮನೆ ಕೂರುವುದಿಲ್ಲ. ಇತಿಹಾಸ ತಿಳಿದುಕೊಂಡು ಮಾತನಾಡಬೇಕೇ ವಿನಾಃ ಬಾಯಿ ಚಪಲಕ್ಕಾಗಿ ಮಾತನಾಡಬಾರದು ಎಂಬ ಕನಿಷ್ಠ ಪ್ರಜ್ಞೆಯೂ ಹಿರಿಯ ನಟನಿಗಿಲ್ಲ. ಕಮಲ್ ಹಾಸನ್ ಅವರ ಈ ನಡವಳಿಕೆಯಿಂದ ಅವರ ಅಭಿಮಾನಿಗಳಿಗೂ ಬೇಸರ ಆಗಿದೆ. ಥಗ್ ಲೈಫ್ ಚಿತ್ರವನ್ನು ಕನ್ನಡಿಗರು ವೀಕ್ಷಿಸದೇ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದಾರೆ.
Read also : ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಡೆಗೆ ಕಟ್ಟುನಿಟ್ಟಿನ ಕ್ರಮ : ಸಂತೋಷ್ ಪಾಟೀಲ್
ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದು, ಕನ್ನಡದ ಅಸ್ಮಿತೆ ವಿಚಾರಕ್ಕೆ ಧಕ್ಕೆ ಬಂದರೆ ಸಹಿಸಲು ಆಗದು. ಇತಿಹಾಸ ಪ್ರಜ್ಞೆ ಇಲ್ಲದೇ ಮಾತನಾಡಿರುವುದು ಸರಿಯಲ್ಲ ಎಂದಿದ್ದಾರೆ. ರಾಜ್ಯ ಸರ್ಕಾರವೂ ಸಹ ಕಮಲ್ ಹಾಸನ್ ಉದ್ದಟತನದ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದೆ. ಮೊಂಡಾಟ ಬಿಡಬೇಕು. ಇಷ್ಟೆಲ್ಲಾ ವಿವಾದ ಆದರೂ ಕ್ಷಮೆ ಕೇಳುವುದಿಲ್ಲ ಎಂದಿರುವ ಕಮಲ್ ಹಾಸನ್ ವರ್ತನೆ ನೋಡಿದರೆ ದುರಂಹಕಾರದ ಪರಮಾವಧಿಯಾಗಿದೆ ಎಂದು ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.