ಡಾಲರ್
ರಾಜಘಾಟಿಗೆ ಹೋಗಿ
ನಮಿಸಿತು ತಲೆಬಾಗಿ
ಸಾವಿರದೊಂಭೈನೂರ ನಲವತ್ತೆಂಟರ
ಜನವರಿ ಮೂವತ್ತರಂದೂ
ಹೀಗೆಯೇ ನಮಿಸಲಾಗಿತ್ತು.
ಬೆವರ ಮೇಲೆ
ನೆತ್ತರ ಮೇಲೆ
ಬಡ ರೂಪಾಯಿ ಮೇಲೆ
ಚರಕದ ಮೇಲೆ
ಉಟ್ಟ ತುಂಡು ಪಂಚೆಯ ಮೇಲೂ
ಡಾಲರ್ ಕಣ್ಣು!
ಒಪ್ಪಂದದಲ್ಲಿ ಮೂಡಿದ ಎಲೆಕ್ಟ್ರೋಕಾರ್ಡಿಯೋ
ಗ್ರಾಮ್ ಸಹಿಯೂ ಗಾಂಧಿಯದೇ
ಅನುಮಾನ ನನಗೆ!
ಸರ್ಕಲ್ಲಿನಲಿ ಕೋಲಿಡಿದು ನಿಂತ ಮುದುಕನ ಪ್ರತಿಮೆಯ ತೋರಿ
“ಯಾರೀ ತಾತಾ?”
ಮಗುವೊಂದು ಕೇಳುತಿದೆ
ಸದಾ ಶರಣು ಮೌನಕೆ
ದುಃಖಿಸಿದರೆ ಸಂತೈಸುವರಾರು?
ಅದಕೆ.
ಬಿ.ಶ್ರೀನಿವಾಸ