ದಾವಣಗೆರೆ : 109 ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ರೂಪುಗೊಳ್ಳಬೇಕು. ಆಗ ಮಾತ್ರ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಉದ್ದೇಶ ಈಡೇರುತ್ತದೆ ಎಂದು ಸಾಂಸ್ಕೃತಿಕ ಚಿಂತಕ ಹಾಗೂ ವಿಶ್ರಾಂತ ಉಪನ್ಯಾಸಕ ಜಿ.ಎಸ್.ಸುಭಾಷ್ ಚಂದ್ರ ಬೋಸ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110 ನೇ ಸಂಸ್ಥಾಪನ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತ್ರವಲ್ಲದೇ ಅನೇಕ ಮಹನೀಯರು, ಸಾಹಿತಿಗಳು ಬೆಳೆಸಿದ್ದಾರೆ. 1970 ರ ಈಚೆಗೆ ಸಾಹಿತ್ಯ ಪರಿಷತ್ತು ಅತ್ಯಂತ ಬೃಹತ್ತಾಗಿ ಬೆಳೆದಿದೆ. ಅನೇಕ ಸಮ್ಮೇಳನಗಳನ್ನು ನಾಡಿನ ವಿವಿಧ ಸ್ಥಳಗಳಲ್ಲಿ ಆಯೋಜಿಸಿ ಜನರಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ಆದರೆ ಜನ ಸಾಮಾನ್ಯರ ಪರಿಷತ್ತಾಗದೇ ಇರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.
ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಸಾಗಬೇಕಾದರೆ ಅದರ ನಡೆ ಹಳ್ಳಿಗಳ ಕಡೆಗೆ ಇರಬೇಕಾಗುತ್ತದೆ. ಪ್ರಸ್ತುತ ಸಾಹಿತ್ಯ ಪರಿಷತ್ತು ಕೋಟಿ ಸದಸ್ಯತ್ವದ ಗುರಿಯನ್ನು ಹೊಂದಿದೆ. ಸದಸ್ಯತ್ವವನ್ನು ಪಡೆದರೆ ಸಾಲದು ತಳಮಟ್ಟದ ಹಾಗೂ ಉದಯೋನ್ಮುಖ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ಆಗಬೇಕು. ಕನ್ನಡಿಗರು ಭಾರತಾಂಬೆ ಹಾಗೂ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರವನ್ನು ತಮ್ಮ ಮನೆಯಲ್ಲಿಟ್ಟು ಪೂಜೆ ಮಾಡುವ ದಿನಗಳು ಬರುತ್ತದೆಯೋ ಆಗ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರತ್ತ ಸಾಗಿದೆ ಎಂದರ್ಥ. ಆ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿಯವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದಿಸಿ ಸನ್ಮಾನ ಪತ್ರ ನೀಡಿ ಹೃದಯಸ್ಪರ್ಶಿ ಸನ್ಮಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ ನಾಯರಿ ಮಾತನಾಡಿ, ಸಂಸ್ಥಾಪನಾ ದಿನವನ್ನು ನಾಡಿನೆಲ್ಲೆಡೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡಿಗ-ಕರ್ನಾಟಕದೊಂದಿಗೆ ಹೇಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ ಎನ್ನುವುದರ ಬಗ್ಗೆ ಯುವಜನರಿಗೆ ತಿಳಿಹೇಳುವುದರ ಮೂಲಕ ಅವರನ್ನೂ ಸಾಹಿತ್ಯ ಪರಿಷತ್ತಿನೊಂದಿಗೆ ಬೆರೆಸಬೇಕು ಎಂದರು.
ಸನ್ಮಾನಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದ ಸಲ್ಲಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಪರಿಷತ್ತಿನ ಮೂಲ ಆಶಯದಂತೆ ನಮ್ಮ ಜಿಲ್ಲೆಯಲ್ಲಿ ಹಲವಾರು ಬರಹಗಾರರಿಗೆ, ಕವಿಗಳಿಗೆ, ಸಾಹಿತಿಗಳಿಗೆ, ವಾಗ್ಮಿಗಳಿಗೆ, ಕಲಾವಿದರುಗಳಿಗೆ ಅವಕಾಶವನ್ನು ಕಲ್ಪಿಸಿ ಪ್ರೋತ್ಸಾಹಿಸಿದೆ. ತಮ್ಮ ಅಧ್ಯಕ್ಷಾವಧಿಯ ಕಳೆದ 30 ತಿಂಗಳುಗಳಲ್ಲಿ 3 ಜಿಲ್ಲಾ ಸಮ್ಮೇಳನಗಳನ್ನು ಹಾಗೂ 6 ತಾಲೂಕು ಸಮ್ಮೇಳನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಹಾಗೆಯೇ ಜನರು ಕೂಡಾ ಸಾಹಿತ್ಯ ಪರಿಷತ್ತಿನ ಮೇಲೆ ಪ್ರೀತಿ, ಕಾಳಜಿ ಹಾಗೂ ಗೌರವವನ್ನು ಬೆಳೆಸಿಕೊಂಡು ಪರಿಷತ್ತು ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದರು.
ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮತಿ ಜಯಪ್ಪ, ಸಂಗೀತ ಶಿಕ್ಷಕ ರೇವಣಸಿದ್ದಪ್ಪ ಹಾಗೂ ವಚನಾಮೃತ ಬಳಗದ ಸಂಸ್ಥಾಪಕಿ ಸೌಮ್ಯ ಸತೀಶ್ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಸಂಘಟನಾ ಕಾರ್ಯದರ್ಶಿ ಗಳಾದ ಸಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ ತಾಲೂಕು ಪರಿಷತ್ತಿನ ಪದಾಧಿಕಾರಿಗಳಾದ ಕೆ.ಎಸ್.ವೀರೇಶ್ಪ್ರಸಾದ್, ಎನ್.ಎಸ್.ರಾಜು, ಮಲ್ಲಮ್ಮ, ಜ್ಯೋತಿ ಉಪಾಧ್ಯಾಯ, ರುದ್ರಾಕ್ಷಿ ಬಾಯಿ, ಭೈರವೇಶ್ವರ, ನಾಗರಾಜ ಸಿರಿಗೆರೆ, ಪರಮೇಶ್ವರಪ್ಪ ದಾಗಿನಕಟ್ಟೆ, ಬೇತೂರು ಎಂ ಷಡಾಕ್ಷರಪ್ಪ, ಆರ್.ಶಿವಕುಮಾರ್ ಹಾಗೂ ಬ್ಯಾಂಕ್ ನೌಕರರ ಸಂಘದ ವಿಶ್ವನಾಥ್ ಬಿಲ್ಲವ, ಪರಶುರಾಮ, ಹೆಚ್.ಎಸ್.ತಿಪ್ಪೇಸ್ವಾಮಿ, ಜಿ.ರಂಗಸ್ವಾಮಿ, ಅಜಿತ್ ಕುಮಾರ್, ಹೆಚ್.ಸುಗೂರಪ್ಪ, ನಾಗೇಶ್ವರಿ ನಾಯರಿ, ಸಾಕಮ್ಮ, ಶ್ರೀಧರ ಪೆರೂರು, ಜ್ಞಾನೇಶ್ವರ ಮಾಳವಾಡೆ, ಅಣ್ಣಪ್ಪ ನಂದಾ ಹಾಗೂ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಎ.ಮಹಾಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಶಿವಶಂಕರ್, ಡಾ.ಎಂ.ಕೆ.ಗೌಡ, ಸಿಂಗಾಪುರ ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.