ದಾವಣಗೆರೆ : ಆಧ್ಯಾತ್ಮ ಎನ್ನುವುದು ನಮ್ಮನ್ನು ನಾವು ಅರಿಯುವುದಾಗಿದೆ. ನಮ್ಮ ದೇಹವನ್ನು ಅರಿಯಲು ಯೋಗ, ಮನಸ್ಸಿಗೆ ಧ್ಯಾನ ಹಾಗೂ ಹೃದಯವನ್ನು ಭಕ್ತಿಯ ಮೂಲಕ ಅರಿಯುವುದೇ ಆಧ್ಯಾತ್ಮ ಎಂಬ ನುಡಿಗಳನ್ನು ಶ್ರೀ ವಾಸವಿ ಪೀಠಿಕೆ, ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರು ಆಡಿದರು.
ಗುರುವಾರ ನಗರದ ಹದಡಿ ರಸ್ತೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ದಾವಣಗೆರೆ ಜಿಲ್ಲಾ ಸಮಿತಿ ಮತ್ತು ಭಕ್ತಿ ಸಿಂಚನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ಭಕ್ತಿ ಸಿಂಚನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಂದು ಎಲ್ಲವೂ ಇದೆ. ಆದರೆ ಮನಶ್ಯಾಂತಿ ಇಲ್ಲ. ಮನಶ್ಯಾಂತಿಯನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಅದು ಆಧ್ಯಾತ್ಮದಿಂದ ಮಾತ್ರ ಗಳಿಸಲು ಸಾಧ್ಯ. ಆಧ್ಯಾತ್ಮದ ಬೀಜವನ್ನು ನಮ್ಮೊಳಗೆ ಬಿತ್ತಬೇಕು. ಅದನ್ನು ಬೆಳೆಸುತ್ತಾ ಹೋದರೆ ಎಲ್ಲವನ್ನೂ ಪಡೆಯಬಹುದು. ಮನೆಯ ಹಿರಿಯರು ಆಧ್ಯಾತ್ಮದಲ್ಲಿ ತೊಡಗಿಸಿಕೊಂಡಿದ್ದರೆ, ಮನೆಯ ಕಿರಿಯ ಸದಸ್ಯರು ಕೂಡ ಅನುಸರಿಸುತ್ತಾರೆ. ಹಾಗಾಗಿ ಮೊದಲು ಪೋಷಕರಾದವರು ತಮ್ಮ ಮಕ್ಕಳಿಗೆ ಮಾದರಿಯಾಗಿರಬೇಕು ಎಂದು ಕಿವಿಮಾತು ಹೇಳಿದರು.

ಇಡೀ ವಿಶ್ವವೇ ಧ್ಯಾನ, ಯೋಗದತ್ತ ವಾಲುತ್ತಿದೆ. ದೇಶ-ವಿದೇಶಗಳಲ್ಲಿ ನಮ್ಮ ಧ್ಯಾನಕ್ಕೆ ಪ್ರಾಮುಖ್ಯತೆ ಇದೆ. ಅಲ್ಲಿ ತಮ್ಮ ಮನೆಗಳಲ್ಲಿ ‘ಮೆಡಿಟೇಷನ್ ಕಾರ್ನರ್’ ನಿರ್ಮಿಸುವ ಮೂಲಕ ಧ್ಯಾನಕ್ಕೆ ಒತ್ತು ನೀಡುತ್ತಿದ್ದಾರೆ. ನಮ್ಮ ದೇಶಕ್ಕೆ ಆಧ್ಯಾತ್ಮಿಕತೆಯ ಜ್ಞಾನ, ನಮ್ಮ ಸಂಸ್ಕೃತಿ, ಸಂಸ್ಕಾರ ಅರಸಿ, ಕಲಿಯಲು ಬರುತ್ತಾರೆ. ಆದರೆ ಹಿತ್ತಲ ಗಿಡ ಮದ್ದಲ್ಲ ಎನ್ನುವ ನಾಣ್ಣುಡಿಯಂತೆ ನಾವೇ ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಫೇಸ್ ಬುಕ್, ವಾಟ್ಸಾಪ್ ಮೂಲಕ ಬೇರೆಯವರನ್ನು ಗಂಟೆಗಟ್ಟಲೆ ನೋಡಲು ನಮಗೆ ಸಮಯವಿದೆ. ಆದರೆ ಧ್ಯಾನ, ಯೋಗ ಭಕ್ತಿಯ ಮೂಲಕ ನಮ್ಮನ್ನು ನಾವು ನೋಡಿಕೊಳ್ಳಲು ಸಮಯವಿಲ್ಲ. ಕೆಲವರು ಸಮಯವಿಲ್ಲ ಎನ್ನುತ್ತಾರೆ. ಆಸ್ತಿ, ಅಂತಸ್ತಿನಲ್ಲಿ ಅಂತರವಿರಬಹುದು ಆದರೆ ಸಮಯ ಎಲ್ಲರಿಗೂ ಒಂದೇ. ಅದು 24ಗಂಟೆಗಳು. ನಿಮಗೋಸ್ಕರ, ಭಗವಂತನಿಗೋಸ್ಕರ ಸಮಯ ಮಾಡಿಕೊಂಡಾಗ ಜೀವನದಲ್ಲಿ ಆನಂದ ಲಭಿಸಲಿದೆ. ಇಲ್ಲವಾದರೆ ಬದುಕು ವ್ಯರ್ಥ ಎಂದು ಎಚ್ಚರಿಸಿದರು.

ಸನಾತನ ಹಿಂದೂ ಧರ್ಮದ ವಿಶೇಷತೆ ಎಂದರೇ ಗುರು ಪರಂಪರೆಯಾಗಿದೆ. ಜೀವನದ ಬೌದ್ಧಿಕ, ಆಧ್ಯಾತ್ಮಿಕ ಯಾವುದೇ ಸಮಸ್ಯೆಗಳಿಗೂ ಪರಿಹಾರ ನೀಡುವ ವ್ಯಕ್ತಿ, ಶಕ್ತಿ ಗುರುವಾಗಿದ್ದಾನೆ. ಗುರುಪರಂಪರೆಗಳಡಿ ಬಂದ ಮಠಗಳು ಹಸಿದವರಿಗೆ ಅನ್ನ, ಆಧ್ಯಾತ್ಮಿಕ ಹಸಿವಿಗೆ ಜ್ಞಾನ, ಕಷ್ಟಗಳಿಗೆ ಪರಿಹಾರ, ಶಾಂತಿಯನ್ನು ಗುರುಪರಂಪರೆ ನೀಡಿದೆ. ಅಂತಹ ಗುರುಪರಂಪರೆಯನ್ನು ನಿರ್ಲಕ್ಷಿಸಿದರೆ ಅವರಷ್ಟು ಮೂರ್ಖರು ಇನ್ನೊಬ್ಬರಿಲ್ಲ ಎಂದು ಹೇಳಿದರು.
ಕೃಷ್ಣ, ಬಸವಣ್ಣ, ರಾಮಾನುಜಾಚಾರ್ಯರು, ಅಲ್ಲಮ ಪ್ರಭು, ಶಂಕರಾಚಾರ್ಯರು, ಅಕ್ಕಮಹಾದೇವಿ ಇನ್ನಿತರರು ಭಾರತದ ಆಧ್ಯಾತ್ಮಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ತಂದೆ, ತಾಯಿ, ಪರಮಾತ್ಮನ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾಸರೇ ಹಾಡಿದ್ದಾರೆ. ಅಂತಹ ಗುರುಪರಂಪರೆಯನ್ನು ಮುಂದುವರೆಸುವ ಮೂಲಕ ನಮ್ಮ ಸನಾತನ ಹಿಂದೂ ಧರ್ಮವನ್ನು ಮುನ್ನೆಲೆಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶ್ರೀಗಳು ಹೇಳಿದರು.
ಆರಂಭದಲ್ಲಿ ಋತ್ವಿಜರು ವೇದಘೋಷ ನೆರವೇರಿಸಿದರು. ನೆರೆದಿದ್ದ ಭಕ್ತರಿಗೆ ಜಪಮಾಲೆ ವ್ಯವಸ್ಥೆ ಮಾಡಿದ್ದು, ಶ್ರೀಗಳು ಸಾಮೂಹಿಕ ಮಂತ್ರಜಪ ಮಾಡಿಸಿದರು. ನಂತರ ಸ್ವಾಮೀಜಿಯವರಿಂದ ಭಜನೆ, ಧ್ಯಾನ ಹಾಗೂ ಆಶೀರ್ವಚನ ನೀಡಿದರು. ಭಕ್ತಿ ಸಿಂಚನ ಸಮಿತಿ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಸಮಿತಿ ಹಾಗೂ ಭಕ್ತಿ ಸಿಂಚನ ಸಮಿತಿಯ ಮುಖಂಡರಾದ ಆರ್.ಜಿ. ನಾಗೇಂದ್ರ ಪ್ರಕಾಶ್, ಎಂ. ನಾಗರಾಜ ಗುಪ್ತ,ಎಸ್.ಟಿ. ಕುಸುಮ ಶ್ರೇಷ್ಠಿ, ಡಾ. ಬಿ.ಎಸ್. ನಾಗಪ್ರಕಾಶ್, ಕೆ.ಎಸ್. ರುದ್ರಶ್ರೇಷ್ಠಿ, ಆರ್.ಎಲ್. ಪ್ರಭಾಕರ್, ಆರ್.ಜಿ. ಶ್ರೀನಿವಾಸ್ ಮೂರ್ತಿ, ಕೆ.ಎನ್. ಅನಂತರಾಮ ಶೆಟ್ಟಿ, ಹೆಚ್.ಟಿ. ಶ್ರೀನಿವಾಸ್, ಬಿ.ಹೆಚ್. ಅಶೋಕ್, ವೈ.ಎಸ್. ಸುನೀಲ್, ಟಿ.ಎಸ್. ಕಿರಣ್ ಕುಮಾರ್, ಕೆ.ಎಸ್. ದರ್ಶನ್, ಜೆ. ರವೀಂದ್ರ ಗುಪ್ತ, ಹೆಚ್. ವೆಂಕಟೇಶ್, ಡಿ.ಹೆಚ್. ಅಂಬಿಕಾಪತಿ ಶೆಟ್ಟಿ ಉಪಸ್ಥಿತರಿದ್ದರು.
ಭಕ್ತಿ ಸಿಂಚನದಲ್ಲಿ ಎರಡು ಯೋಜನೆಗಳಿಗೆ ಚಾಲನೆ
ಭಕ್ತಿ ಸಿಂಚನದ ಈ ವರ್ಷದ ಗುರಿ ಎಂದರೇ ವಾಸವಿ ಪೀಠ ಹಾಗೂ ಆಶ್ರಮ ನಿರ್ಮಾಣ ಮಾಡುವುದಾಗಿದೆ ಎಂದು ಸಚ್ಚಿದಾನಂದ ಸರಸ್ವತಿ ಶ್ರೀಗಳು ತಿಳಿಸಿದರು. ಈಗಾಗಲೇ ರಚಿತಾ ಶಿವಕುಮಾರ್ ಅವರು ದೇವನಹಳ್ಳಿ ಏರ್ ಪೋರ್ಟ್ ಬಳಿ 4 ಎಕರೆ ಜಾಗವನ್ನು ನೀಡಿದ್ದಾರೆ. ಹಾಗೂ ತುಮಕೂರಿನ ಉರುಡುಗೆರೆ ಬಳಿ 14 ಕೋಟಿ ಬೆಲೆಬಾಳುವ ಜಾಗವನ್ನು ವಾಸವಿ ಪೀಠಕ್ಕಾಗಿ ದಾನಿಗಳು ಅರ್ಪಣೆ ಮಾಡಿದ್ದಾರೆ. ಈ ಎರಡೂ ಪ್ರಾಜೆಕ್ಟ್ ಗಳಿಗೆ ದಾವಣಗೆರೆಯ ಭಕ್ತಿ ಸಿಂಚನದಲ್ಲಿ ಚಾಲನೆ ನೀಡುತ್ತಿದ್ದೇವೆ. ಶೀಘ್ರದಲ್ಲೇ ವಿಶ್ವದರ್ಜೆಯ ಭವ್ಯವಾದ ಆಶ್ರಮ ನಿರ್ಮಾಣವಾಗಲಿದೆ ಎಂದರು.
ಏನೆಲ್ಲ ಇರಲಿದೆ ಆಶ್ರಮದಲ್ಲಿ?…ಆಶ್ರಮ ಎಂದಾಕ್ಷಣ ಕೇವಲ ಅನ್ನಛತ್ರ, ಸಭಾಂಗಣವಿದ್ದರೆ ಸಾಲದು. ನಮ್ಮ ಮಕ್ಕಳು, ಯುವಜನಾಂಗಕ್ಕೆ ಅಗತ್ಯವಿರುವ ಎಲ್ಲವೂ ಅಲ್ಲಿ ದೊರಕಿದರೆ ಅವರುಗಳು ಬರುತ್ತಾರೆ. ಅಲ್ಲಿ ಧ್ಯಾನ, ತರಬೇತಿ, ಭಗವದ್ಗೀತೆ ಶಿಬಿರ, ಅನ್ನದಾನ, ಸೇವೆಗೆ ಅವಕಾಶ, ದೇವಸ್ಥಾನ, ಗೋಶಾಲೆ, ಸಮ್ಮರ್ ಕ್ಯಾಂಪ್ ಗೆ ಅನುಕೂಲ ಇವೆಲ್ಲವೂ ಅಂತಾರಾಷ್ಟ್ರೀಯ ಮಾನದಂಡದಲ್ಲಿ ಸ್ವಚ್ಛ ಹಾಗೂ ಹೈಜೆನಿಕ್ ಮಾದರಿಯಲ್ಲಿ ನಿರ್ಮಿಸುವ ಆಶಯವಿದ್ದು, ಶೀಘ್ರದಲ್ಲೇ ಈ ಸಂಕಲ್ಪ ಪೂರ್ಣಗೊಳ್ಳಲಿದೆ ಎಂದು ಶ್ರೀಗಳು ನುಡಿದರು.
ಮಹಿಳಾ ಶಕ್ತಿಗೆ ಜೈ ಎಂದ ಶ್ರೀಗಳು..
ವಾಸವಿ ಸಮುದಾಯದಲ್ಲಿ ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಮಹಿಳಾ ಮಂಡಳಿಗಳ ಪಾತ್ರ ಪ್ರಮುಖವಾಗಿರುತ್ತದೆ. ನಮ್ಮ ಸಮುದಾಯದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾತೆಯರ ಈ ಸಂಸ್ಕೃತಿಗೆ ಕಾರಣ ನಮ್ಮ ಕುಲದೇವತೆ ವಾಸವಿ ಮಾತೆ. ಆಕೆ ಶಕ್ತಿ ತುಂಬಿದ್ದಾಳೆ ಎಂದರು. ಮಹಿಳೆಯರು ಪ್ರಸ್ತುತ ಪಡಿಸಿದ ಗಾಯನ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದ್ದು, ಬೆಂಗಳೂರಿನಲ್ಲಿ ಒಮ್ಮೆ ಕಾರ್ಯಕ್ರಮ ನೀಡುವಂತೆ ಶ್ರೀಗಳು ಹೇಳಿದರು. ಇಲ್ಲಿ ನಡೆದ ಭಕ್ತಿಸಿಂಚನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಜೊತೆಗೆ ಇತರೆಡೆಗಿಂತ ವಿಭಿನ್ನ ಹಾಗೂ ಅದ್ದೂರಿಯಾಗಿ ಮೂಡಿಬಂದಿದೆ ಎಂದು ಶ್ಲಾಘಿಸಿದರು.