ಹರಿಹರ (Harihara) : ಅಕ್ರಮ ಮಣ್ಣುಗಣಿಗಾರಿಕೆ ದಂಧೆಕೋರರ ಅಟ್ಟಹಾಸಕ್ಕೆ ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಪರಿಶಿಷ್ಟರ ರುದ್ರಭೂಮಿ ಬಲಿಯಾಗಿದೆ ಎಂದು ಕರ್ನಾಟಕದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದ್ದಾರೆ.
ಗ್ರಾಮದ ನದಿ ದಡದಲ್ಲಿರುವ ಈ ರುದ್ರಭೂಮಿಯುಫಲವತ್ತಾದಕೆಂಪು ಮಣ್ಣಿನಿಂದ ಕೂಡಿದೆ. ವಾಣಿಜ್ಯ ಉದ್ದೇಶಕ್ಕೆ ಈ ಮಣ್ಣು ಬಳಕೆಯಾಗುವುದನ್ನು ತಿಳಿದು ಕಳೆದ ಹಲವು ವರ್ಷಗಳಿಂದ ಅವ್ಯಾಹತವಾಗಿ ಅಕ್ರಮ ಮಣ್ಣುಗಣಿಗಾರಿಕೆ ನಡೆಸಿ ಈ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ಮಾಡಲಾಗದಂತೆ ಗುಂಡಿಗಳನ್ನು ಅಗೆಯಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
2013ನೇ ಸಾಲಿನಲ್ಲಿ ದಾವಣಗೆರೆ ಉಪವಿಭಾಗಾಧಿಕಾರಿರವರ ಆದೇಶದ ಮೇರೆಗೆ 1 ಎಕರೆ 2 ಗುಂಟೆ ಜಮೀನನ್ನು ಗ್ರಾಮದ ಪರಿಶಿಷ್ಟರ ರುದ್ರಭೂಮಿಗೆ ಮಂಜೂರು ಮಾಡಲಾಗಿತ್ತು. ಈ ಮುಂಚೆ ನದಿ ದಡದಲ್ಲಿ ಅಂತಿಮ ಸಂಸ್ಕಾರ ಮಾಡುತ್ತಿದ್ದ ಗ್ರಾಮದ ಪರಿಶಿಷ್ಟ ಸಮುದಾಯದವರು ಮೃತರ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ಮಾಡಲಾರಂಭಿಸಿದರು.
ಅಕ್ರಮ ದಂಧೆಕೋರರ ಕಣ್ಣಿಗೆ ಬಿದ್ದ ಈ ರುದ್ರಭೂಮಿಯಲ್ಲಿ ಕೆಲವು ವರ್ಷಗಳಿಂದ ಅವ್ಯಾಹತವಾಗಿ ಸಹಸ್ರಾರು ಲಾರಿ ಲೋಡು ಮಣ್ಣು ಗಣಿಗಾರಿಕೆ ನಡೆಸಲಾಗಿದ್ದು ಪೂರ್ಣ 1 ಎಕರೆ 2 ಗುಂಟೆ ಜಮೀನು ಗುಂಡಿಮಯವಾಗಿದೆ.ನದಿ ದಡವಾಗಿರುವುದರಿಂದ ನೆಲದಿಂದ ಉಕ್ಕಿದ ನೀರಿನಿಂದಾಗಿ ಇಡೀ ರುದ್ರಭೂಮಿಯು ಜಲಾವೃತವಾಗಿದೆ.
ಅನಿವಾರ್ಯವಾಗಿ ಗ್ರಾಮದ ಪರಿಶಿಷ್ಟ ಸಮುದಾಯದವರು ಮೃತರ ಅಂತಿಮ ಸಂಸ್ಕಾರವನ್ನು ಮತ್ತೆ ನದಿ ದಡದಲ್ಲಿ, ರಸ್ತೆ ಅಕ್ಕ, ಪಕ್ಕ ನಡೆಸುವ ದುಸ್ಥಿತಿ ಎದುರಿಸುತ್ತಿದ್ದಾರೆ.
ಅಕ್ರಮ ಮಣ್ಣುಗಣಿಗಾರಿಕೆ ನಡೆಸಿದವರ ಹಾಗೂ ಕರ್ತವ್ಯದಲ್ಲಿದ್ದು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯವಹಿಸಿದ ಸಂಬಂಧಿತ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
Read also : ಯುವತಿಗೆ ಪ್ರೀತಿಸುವಂತೆ ಪೀಡಿಸಿ, ಪ್ರಾಣ ಬೆದರಿಕೆ ಹಾಕಿದ್ದ ಆರೋಪಿಗೆ ಶಿಕ್ಷೆ