ಹರಿಹರ (HARIHARA) : ಮುಂಬರುವ ಮಾ.7ರಂದು ಮಂಡಿಸಲಿರುವ ಆಯ-ವ್ಯಯ (ಬಜೆಟ್)ದಲ್ಲಿ ದಲಿತ ಸಮುದಾಯ ಹಾಗೂ ಇತರೆ ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಪರಿಗಣಿಸಲು ಆಗ್ರಹಿಸಿ ಇಲ್ಲಿನ ತಹಶೀಲ್ದಾರರ ಮೂಲಕ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಮುಖ್ಯಮಂತ್ರಿಯವರಿಗೆ ಮಂಗಳವಾರ ಮನವಿ ನೀಡಿದರು.
ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡದೆ ಬ್ಯಾಕ್‍ಲಾಗ್ ಹುದ್ದೆಗಳಿಗೆ ನೇಮಕಾತಿ ಮಾಡಬಾರದು. ಹಾಗೊಮ್ಮೆ ನೇಮಕಾತಿ ಮಾಡಿದರೆ ನಿಜವಾದ ದಲಿತರಿಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ. ಕದಸಂಸ ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪ ನವರ ಜನ್ಮ ದಿನವಾದ ಜೂನ್ 9ರಂದು ಸರ್ಕಾರದಿಂದ ಆಚರಣೆ ಮಾಡುವುದು, ಮತ್ತು ಪ್ರೊ.ಬಿ.ಕೃಷ್ಣಪ್ಪ ನವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.
ಈ ಎರಡೂ ವಿಷಯ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಸಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಮ್ಮ ಸಂಘಟನೆಯ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿ, ಶಿವಮೊಗ್ಗ ಇವರು ಪ್ರಸ್ತಾಪಿಸಿದ್ದಾರೆ.
ಹರಿಹರ ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಬೇಕು. ತಾಲ್ಲೂಕಿನ ಬೆಳ್ಳೂಡಿ-ರಾಮತೀಥ ನಡುವಿನ ಸೂಳೆಕೆರೆ ಹಳ್ಳಕ್ಕೆ ಸೇತುವೆ ನಿರ್ಮಿಸುವುದು. ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದಲ್ಲಿ ಸರ್ಕಾರದ ಜಾಗದಲ್ಲಿ ನಿರ್ವಸತಿ ದಲಿತ ಮತ್ತು ಹಿಂದುಳಿದ ವರ್ಗ ಹಾಗೂ ಇತರೆ ಜಾತಿ, ಜನಾಂಗದವರಿಗೆ ವಸತಿ ಯೋಜನೆ ರೂಪಿಸುವುದು.
ಗ್ರಾಮದಲ್ಲಿ ರುದ್ರ ಭೂಮಿಗೆಂದು ಕಾಯ್ದಿರಿಸಿರುವ 1 ಎಕರೆ ಜಾಗವನ್ನು ಸಂರಕ್ಷಿಸುವುದು. ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಎ.ಕೆ.ಕಾಲೋನಿಯೊಳಗಿನ ವಿವಾದ ಇಲ್ಲದ ಪ್ರದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಇವರ ಪುತ್ಥಳಿ ಹಾಗೂ ಸ್ವಾಗತ ಕಮಾನು ಸ್ಥಾಪಿಸಲು ಅನುಮತಿ ನೀಡಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸುವುದು. ದಾವಣಗೆರೆ ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಂತೆ ಹೆಚ್ಚಿನ ಸಂಖ್ಯೆಯಲ್ಲಿ ಮೂರಾರ್ಜಿ ವಸತಿ ಶಾಲೆಗಳನ್ನು ಮಂಜೂರು ಮಾಡಬೇಕು. ದೇವ, ದೇವತೆಯ ಹೆಸರಿನಲ್ಲಿ ರಾಜ್ಯಾದ್ಯಂತ ನಡೆಯುವ ಜಾತ್ರೆ, ಹಬ್ಬ, ಹರಿದಿನ, ಉತ್ಸವಗಳಲ್ಲಿ ಮೌಢ್ಯಾಚರಣೆಗಳನ್ನು ನಡೆಸದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹರಿಹರಕ್ಕೆ ಪರ್ಯಾಯ ಕುಡಿಯುವ ನೀರಿನ ಅಗಸನಕಟ್ಟೆ ಯೋಜನೆಗೆ ಮಂಜೂರಾತಿ ನೀಡುವುದು. ತಾಲ್ಲೂಕಿನ ಸಮಗ್ರ ಪ್ರಗತಿಗೆ 1000 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಶಿರಸ್ತೆದಾರ್ ಸುನಿತಾ ಮನವಿ ಸ್ವೀಕರಿಸಿದರು.
ಹರೀಶ್‍ಎಸ್.ಕೆ., ನವೀನ್ ಜಿ., ಮಂಜುನಾಥ್‍ಟಿ.ಎಚ್., ಹನುಮಂತ, ಸ್ವಮಿಎಚ್., ಕಾರ್ತಿಕ್, ವಿ., ದಿವಾಕರಎನ್., ಹನುಮಂತ ಬಿ., ಹಳದೇಶ್ ಆರ್, ಪ್ರಶಾಂತ್ ಪಿ., ಅಪ್ಪು ಕೆ., ಹನುಮಂತ.ಎಚ್. ಇದ್ದರು.
Read also : ಮಾರ್ಚ್ 15 ರಂದು ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ : ಡಾ. ಪ್ರಭಾ ಮಲ್ಲಿಕಾರ್ಜುನ್