ದಾವಣಗೆರೆ (Davanagere): ಗೃಹಮಂತ್ರಿ ಅಮಿತ್ ಷಾ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುವ ಬದಲು ದೇವರನ್ನು ಸ್ಮರಿಸಿದ್ದರೆ 7 ಜನ್ಮದಲ್ಲೂ ಸ್ವರ್ಗ ಕಾಣಬಹುದು ಎನ್ನುವ ಮೂಲಕ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ವೇದಿಕೆ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ದಸಂಸ ಮುಖಂಡ ಮಂಜುನಾಥ ಕುಂದುವಾಡ “ಸಂಸತ್ ಭವನದಲ್ಲಿ ಅಧಿವೇಶನದಲ್ಲಿ ಗೃಹ ಮಂತ್ರಿ ಅಮಿತ್ ಶಾ ರವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುವ ಬದಲು ದೇವರನ್ನು ಸ್ಮರಿಸಿದ್ದರೆ ಏಳು ಜನ್ಮದಲ್ಲೂ ಸ್ವರ್ಗವನ್ನು ಕಾಣಬಹುದು” ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
ಅಮೀತ್ ಷಾ ರವರು ನಾಲಿಗೆ ಮೇಲೆ ಹಿಡಿತವಿಲ್ಲದೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮತ್ತು ಸಂವಿಧಾನವನ್ನು ಗೌರವಿಸುವುದಿಲ್ಲ ಎಂಬುದು ಮತ್ತೊಮ್ಮೆ ಸಂಘ ಪರಿವಾರದ ಮುಖವಾಡ ಅಮೀತ್ ಷಾ ಅವರ ಮುಖಾಂತರ ಮುಂದುವರಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸತೀಶ್ ಅರವಿಂದ್ ಮಾತನಾಡಿ, ಅಂಬೇಡ್ಕರ್ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಅಮಿತ್ ಷಾ ಅವರು ದೇಶದ ಜನತೆಗೆ ಮತ್ತು ಸಂವಿಧಾನಶಿಲ್ಪಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಅಮಿತ್ ಷಾ ಅವರ ಹೇಳಿಕೆ ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ಕೂಡಲೇ ಕೇಂದ್ರ ಮಂತ್ರಿ ಸ್ಥಾನದಿಂದ ಅಮಿತ್ ಷಾರನ್ನು ವಜಾಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಶೋಷಿತ ಸಮುದಾಯ ಒಟ್ಟುಗೂಡಿ ಮನುವಾದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ವಿಜಯ ಲಕ್ಷಿö್ಮ, ಹರಿಹರ ತಾಲೂಕು ಸಂಚಾಲಕ ಮಹಾಂತೇಶ್, ಮಂಜುನಾಥ, ತುರ್ಚಗಟ್ಟನಾಗರಾಜ, ಶಂಕರ, ಮಂಜುನಾಥ, ಮಂಜುಮಾಗನಹಳ್ಳಿ, ನಾಗರಾಜ ಆನೆಕೊಂಡ, ಚನ್ನಗಿರಿ ತಾಲೂಕ ಸಂಚಾಲಕ ಚಿತ್ರಲಿಂಗಪ್ಪ, ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಪವಿತ್ರ, ಹನುಮಂತಪ್ಪ, ಸುರೇಶ್ ಸಿಡ್ಲಪ್ಪ ಇತರರಿದ್ದರು.
Read also : Davanagere | ವೃದ್ಧೆ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ