ದಾವಣಗೆರೆ: ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಕನ್ನಡವು ಕೇವಲ ಸಂವಹನ ಸಾಧನವಲ್ಲದೆ, ನಮ್ಮ ಭಾವನೆಗಳು, ಆಲೋಚನೆಗಳು ಮತ್ತು ಅಸ್ಮಿತೆಯ ಭಾಗವಾಗಿರಬೇಕು ಎಂದು ಕೆ.ಎಸ್.ಬಸವಂತಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮಾಯಕೊಂಡ ಗ್ರಾಮದ ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸರಳವಾಗಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ನಮ್ಮ ಸಂಸ್ಕೃತಿ, ಮನೋಭಾವ ಮತ್ತು ಅಸ್ತಿತ್ವದೊಂದಿಗೆ ಬೆರೆತುಹೋಗಿದೆ. ಕನ್ನಡವನ್ನು ಹೃದಯದ ಭಾಷೆಯಾಗಿಸುವುದಕ್ಕಾಗಿ, ಅದರ ಬಳಕೆ ಮತ್ತು ಗೌರವವನ್ನು ಹೆಚ್ಚಿಸುವುದು ಅಗತ್ಯವಾಹಿದೆ ಎಂದು ಸಲಹೆ ನೀಡಿದರು.
ಕನ್ನಡವು ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಒಂದು ಶಕ್ತಿಯುತ ಮಾಧ್ಯಮವಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಅಸ್ತಿತ್ವದ ಒಂದು ಅವಿಭಾಜ್ಯ ಅಂಗವಾಗಿದೆ. ಮಕ್ಕಳಿಗೆ ಕನ್ನಡದ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಮತ್ತು ಅದನ್ನು ನಿರಂತರವಾಗಿ ಬಳಸುವಂತೆ ಪ್ರೋತ್ಸಾಹಿಸುವ ಮೂಲಕ ಕನ್ನಡವನ್ನು ಹೃದಯದ ಭಾಷೆಯನ್ನಾಗಿ ಬೆಳೆಸಬಹುದು ಎಂದರು.
ರಾಜ್ಯದ ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ಆಂಗ್ಲ ನಾಮಫಲಕಗಳು ರಾರಾಜಿಸುವುದರ ವಿರುದ್ಧ ಕನ್ನಡಪರ ಸಂಘಟನೆಗಳು ಹೋ ರಾಟ ಮಾಡಿದ್ದವು. ನಮ್ಮ ಸರ್ಕಾರ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಬಳಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಪರಿಣಾಮ ಕನ್ನಡ ನಾಮಫಲಕಗಳನ್ನು ಹಾಕಲಾಗುತ್ತಿದೆ. ಕನ್ನಡ ಭಾಷೆ ಕೇವಲ ತೋರಣಿಕೆ ಆಗಬಾರದು. ಅಂತರಾಳದ, ಹೃದಯದ ಭಾಷೆ ಆದಾಗ ಮಾತ್ರ ಕನ್ನಡ ಭಾಷೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದರು.
Read also : ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಪತ್ರ ವ್ಯವಹಾರ, ನ್ಯಾಯಾಲಯಗಳಲ್ಲಿ ಕನ್ನಡ ತೀರ್ಪು ಮತ್ತು ಆದೇಶಗಳು ಸೇರಿದಂತೆ ಎಲ್ಲಾ ರಂಗಗಳಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಮಾತ್ರ ಕನ್ನಡ ಭಾಷೆ ನಮ್ಮ ಹೃದಯ ಭಾಷೆಯಾಗುತ್ತದೆ. ಇಲ್ಲದಿದ್ದರೆ ಕನ್ನಡ ಭಾಷೆ ಉಳಿಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸಬೇಕೆಂದರು.
ಪ್ರಾಂಶುಪಾಲರಾದ ತ್ರಿವೇಣಿ, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಟಿ .ಹನುಮಂತಪ್ಪ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವೆಂಕಟೇಶ್, ಎಪಿಎಂಸಿ ಮಾಜಿ ನಿರ್ದೇಶಕ ರಾಜೇಂದ್ರಣ್ಣ, ಗ್ರಾಮ ಪಂಚಾಯತ್ ಸದಸ್ಯರಾದ ರುದ್ರೇಶ್, ಮಂಜಣ್ಣ, ಜಗಣ್ಣ, ಉಪನ್ಯಾಸ ಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಾವಿರಾರು ವರ್ಷಗಳ ಇತಿಹಾಸದ ಕನ್ನಡ ಭಾಷೆ ತನ್ನದೇ ಆದ ಹಿರಿಮೆ–ಗರಿಮೆ ಹೊಂದಿದೆ. ಇದು ಕೇವಲ ಓದಿನ ಭಾಷೆಯಾಗದೆ ಅನ್ನ, ಆಸರೆ ಮತ್ತು ಅರಿವಿನ ಭಾಷೆಯಾಗಬೇಕು’.-ಕೆ.ಎಸ್.ಬಸವಂತಪ್ಪ, ಶಾಸಕರು.
