ಹರಿಹರ : ಹಜರತ್ ನಾಡಬಂದ್ ಷಾವಲಿ ದರ್ಗಾದ ಕಾಣಿಕೆ ಹುಂಡಿಗೆ ಜಿಲ್ಲಾ ವಕ್ಫ್ ಅಧಿಕಾರಿ ಮೌಜಮ್ ಪಾಷಾ ಬೀಗ ಮುದ್ರೆ ಹಾಕಿದ್ದಾರೆ.
ದರ್ಗಾದ ಕಾಣಿಕೆ ಹುಂಡಿಯಲ್ಲಿನ ಹಣ ಏ.18 ರಂದು ಕಾಣೆಯಾಗಿದೆ ಎಂದು ದರ್ಗಾದ ಅರ್ಚಕರು ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ದೂರು ನೀಡಿದ್ದರು.
ಪ್ರಕರಣ ನಡೆದು ತಿಂಗಳಾದರೂ ವಕ್ಫ್ ಮಂಡಳಿ ಅಧಿಕಾರಿಗಳಾಗಲಿ, ಪೊಲೀಸರಾಗಲಿ, ದರ್ಗಾದ ಆಡಳಿತ ಮಂಡಳಿಯವರಾಗಲಿ ಹುಂಡಿ ಹಣ ಕಳ್ಳತನ ಮಾಡಿದವರ ವಿರುದ್ಧ ಕ್ರಮಕೈಗೊಂಡಿಲ್ಲ, ದೂರು ದಾಖಲಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ದರ್ಗಾದ ಸಹಸ್ರಾರು ಭಕ್ತಾದಿಗಳಿಗೆ ನೋವುಂಟಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ದೊಡ್ಡ ಮೊತ್ತ ಸಂಗ್ರಹವಾಗುವ ದರ್ಗಾಗಳ ಹುಂಡಿ ಹಣ ಎಣಿಕೆ ಮಾಡಲು ನಮ್ಮ ಸಿಬ್ಬಂದಿ ತೆರಳುತ್ತಾರೆ, ಸಣ್ಣ ದರ್ಗಾಗಳ ಹುಂಡಿ ಎಣಿಕೆ ಕಾರ್ಯವನ್ನು ಆಯಾ ದರ್ಗಾದ ಆಡಳಿತ ಮಂಡಳಿಯವರೆ ನಡೆಸುತ್ತಾರೆ. ಇಲ್ಲಿ ವಿವಾದ ಇರುವುದರಿಂದ ಹುಂಡಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಮೌಜಮ್ ಪಾಷಾ ಮಾಧ್ಯಮದವರಿಗೆ ತಿಳಿಸಿದರು.
Read also : ದಾವಣಗೆರೆ | ವೃದ್ದನಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ನ್ಯಾ. ಡಿ.ಕೆ.ವೇಲಾ
ಆಡಳಿತ ಮಂಡಳಿವರು ಹಾಗೂ ಆರೋಪ ಮಾಡಿದ ದರ್ಗಾದ ಅರ್ಚಕರ ನಡುವೆ ದರ್ಗಾದಲ್ಲಿ ಈಚೆಗೆ ಚರ್ಚೆ ಏರ್ಪಡಿಸಲಾಗಿತ್ತು, ಹುಂಡಿಯ ಹಣ ದುರುಪಯೋಗ ಮಾಡಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿಕೆ ನೀಡಿದ್ದಾರೆ. ಹೇಗಾದರೂ ಇರಲಿ ಎಂದು ಹುಂಡಿಗೆ ಶನಿವಾರದಂದು ಬೀಗಮುದ್ರೆ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು.