ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧಿಗೂ ಸೊಂಡೂರಿಗೂ ಅವಿನಾಭಾವ ಸಂಬಂಧವಿದೆ.ಘೋರ್ಪಡೆ ವಂಶಸ್ಥರಾದ ವೈ.ಹೆಚ್.ಘೋರ್ಪಡೆ 1932ರಲ್ಲಿ ಒಂದು ಪ್ರೊಕ್ಲಮೇಷನ್ ಹೊರಡಿಸಿದರು. ಅದರ ಪ್ರಕಾರ ಹರಿಜನರಿಗೆ ಉಳಿಧ ಜನರಂತೆಯೆ ಸಮಾನವಾಗಿ ದೇವಸ್ಥಾನಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು.ಈ ಪ್ರದೇಶದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲಾಯಿತು.
ಇದರಿಂದ ಆಕರ್ಷಿತರಾದ ಗಾಂಧಿ 1934 ರಲ್ಲಿ ಸೊಂಡೂರಿಗೆ ಭೇಟಿ ನೀಡಿ ಹರಿಜನ ಪತ್ರಿಕೆಯಲ್ಲಿ ” ದಕ್ಷಿಣ ಭಾರತದ ಚಿಕ್ಕ ಸಂಸ್ಥಾನವಾದ ಸೊಂಡೂರು ಸಂಸ್ಥಾನ ಹರಿಜನರಿಗೆ ಗುಡಿಗಳ ಬಾಗಿಲು ತೆರೆದಿದೆ.ಇದರಿಂದ ಸ್ವರ್ಗವೇನು ಕಳಚಿ ಬೀಳಲಿಲ್ಲ”ಎಂದು ಬರೆದರು.
ಸಂಸ್ಥಾನಗಳ ಉಳಿವಿಗಾಗಿಯೂ ಗಾಂಧಿಯವರ ಮೂಲಕ ಗಮನಸೆಳೆಯಲು ರಾಜವಂಶಸ್ಥರು ಹೀಗೆ ಮಾಡಿದರು ಎಂಬ ವಾದವೂ ಚಾಲ್ತಿಯಲ್ಲಿದೆ.
ಸಾವಿರಾರು ಕಾರ್ಮಿಕರು ಕುಟುಂಬಗಳಿಗೆ ಅನ್ನದಾತ
ಘೋರ್ಪಡೆ ಕುಟುಂಬವರ್ಗ ಕೂಡ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಾರಿಕೆ ನಡೆಸಿದ್ದರು.ಸಾವಿರಾರು ಕಾರ್ಮಿಕರು ಕುಟುಂಬಗಳಿಗೆ ಅನ್ನದಾತರಾಗಿದ್ದುದನ್ನೂ ಹೇಳಲೇಬೇಕು.
ಗಣಿಗಳಲ್ಲಿ ಕೆಲಸ ಮಾಡುವ ಪ್ರತಿ ಕುಟುಂಬಗಳಿಗೂ ರೇಷನ್ (ಆಹಾರ ಸಾಮಗ್ರಿ) ವಿತರಿಸುವ ವ್ಯವಸ್ಥೆಯಿತ್ತು.ಮನೆಗಳನ್ನೂ ಕಟ್ಟಿಸಿಕೊಡಲಾಗಿತ್ತು.ಪುಟ್ಟ ಪುಟ್ಟ ಮನೆಗಳಾದರೂ ಸಾಕಷ್ಟು ವಿಶಾಲವಾದ ಅಂಗಳ ಮತ್ತು ಹಿತ್ತಿಲಿನಲ್ಲಿ ನುಗ್ಗೆಮರ,ದಾಸವಾಳದ ಕೆಂಡದಂತಹ ಹೂಗಳು ,ಬೆಟ್ಟದ ಮೇಲಿನ ಹಸಿರು,ತನ್ನಿಂತಾನೆ ಹೊಟ್ಟೆ ತುಂಬಾ ಹುಲ್ಲು ಮೇಯ್ದು ಬಂದು ಕರೆದವರಿಗೆಲ್ಲಾ ನಿಂತು ಹಾಲುಣಿಸುತ್ತಿದ್ದ ಆಕಳುಗಳು ಇದ್ದವು.
ಸಮುದ್ರಮಟ್ಟದಿಂದ ಮೂರುಸಾವಿರ ಅಡಿಗಳಿಗೂ ಹೆಚ್ಚು ಎತ್ತರದಲ್ಲಿರುವ ರಾಮಘಡ ಅರಣ್ಯ ಪ್ರದೇಶ,ಕರ್ನಾಟಕದ ಊಟಿ.ಇಂತಹ ಅಪ್ಪಟ ಹವಾನಿಯಂತ್ರಿತ ಕಾಡು,ಮರಗಳ ಒಡನಾಟದಲ್ಲಿ ಎಂ.ವೈ.ಘೋರ್ಪಡೆಯವರು ತಮ್ಮ ಬಾಲ್ಯ ಮತ್ತು ಯೌವ್ವನವನ್ನು ಕಳೆದವರು.
ಎಂ.ವೈ. ಘೋರ್ಪಡೆ!
ಕರ್ನಾಟಕ ಕಂಡ ವರ್ಣರಂಜಿತ ವ್ಯಕ್ತಿತ್ವಗಳಲ್ಲಿ ಬಹುಮುಖ್ಯ ಹೆಸರು.
ಜನಪರ ಕಾಯಿದೆಗಳಿಗೆ ಕಾರಣರಾದರು
ಸರಕಾರದ ಬಹುಮುಖ್ಯ ಸಚಿವರಾಗಿದ್ದವರು.ರಾಜ ಮನೆತನದ ಹಿನ್ನೆಲೆಯಿಂದ ಬಂದವರಾಗಿದ್ದರೂ ಪ್ರಜಾಪ್ರಭುತ್ವದ ಮೇಲೆ ಅವರಿಗಿದ್ದ ಕಾಳಜಿಯಿಂದಾಗಿಯೇ ಈ ಹೊತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂದಿನ ಅನೇಕ ಜನಪರ ಕಾಯಿದೆಗಳಿಗೆ ಕಾರಣರಾದವರು.
ಜೀವನಾಸಕ್ತಿ ರೋಚಕವಾದುದು
ಅರವತ್ತು,ಎಪ್ಪತ್ತು,ಎಂಭತ್ತು ವಸಂತಗಳ ಸನಿಹ ಬಂದಿದ್ದರೂ ಸೊಂಡೂರಿನ ಜನತೆಯ ಪಾಲಿನ ಯುವರಾಜರೇ ಆಗಿದ್ದವರು.ಅವರ ಜೀವನಾಸಕ್ತಿ ರೋಚಕವಾದುದು.ವನ್ಯಜೀವಿ ಛಾಯಾಗ್ರಾಹಕರಾಗಿ ದೇಶದ ಗಮನ ಸೆಳೆದವರು,ಚಿತ್ರಕಲಾವಿದರು ಬರಹಗಾರರೂ ಆಗಿದ್ದರು.
ಸೊಂಡೂರಿನ ಕಾಡುಗಳಲ್ಲಿ ನಲವತ್ತಾರಕ್ಕೂ ಹೆಚ್ಚು ಚಿರತೆಗಳು,ಸಾವಿರಾರು ನವಿಲುಗಳು,ಗಿಳಿ ಹಿಂಡುಗಳು,ಕಾಡು ಹಂದಿಗಳು,ಪೆಂಗೋಲಿಯನ್ ಗಳು,ನರಿ,ಕಾಡು ಬೆಕ್ಕು,ಹೆಬ್ಬಾವು ಗಳು ಇರುವಿಕೆ ಕುರಿತಂತೆ ಜಗತ್ತಿನ ಗಮನ ಸೆಳೆದವರು.
ಸಸ್ಯ ಸಂರಕ್ಷಣಾ ಕೇಂದ್ರ ಅವರದೇ ಕನಸಿನ ಕೂಸು
ಅರಣ್ಯ ಸಂರಕ್ಷಣೆ ಜೊತೆಗೆ ಔಷಧೀಯ ಸಸ್ಯ ಸಂರಕ್ಷಣೆಯ ಹೊಣೆ ಹೊತ್ತವರಂತೆ 345 ಹೆಕ್ಟೇರ್ ಪ್ರದೇಶದಲ್ಲಿರುವ ಸಸ್ಯ ಸಂರಕ್ಷಣಾ ಕೇಂದ್ರ ಅವರದೇ ಕನಸಿನ ಕೂಸು.ಅಪರಿಮಿತ ಓದಿನ ಹಿನ್ನೆಲೆಯ ಅವರಿಗೆ ಗಾಂಧಿ ಎಂದರೆ ಪಂಚಪ್ರಾಣ.ಮಹಾತ್ಮಾ ಗಾಂಧಿಯನ್ನು ಸೊಂಡೂರಿನಲ್ಲಿ ಜೀವಂತವಾಗಿರಿಸಲು ಹಲವು ಹತ್ತು ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಕಾರಣಕರ್ತರಾದರು.
ಸೊಂಡೂರಿನಿಂದ ಕೇವಲ ಆರು ಕಿಲೋಮೀಟರ್ ದೂರದ ತಾರಾನಗರ ಬಳಿ ,ಬೆಟ್ಟಗಳ ನಡುವಿಂದ ಹರಿದು ಹೋಗುವ ನೀರಿಗೆ ಜಲಾಶಯ ನಿರ್ಮಿಸಿದರು.ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಿದ,ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲು ಮಾಡಿದ ಈ ಜಲಾಶಯಕ್ಕೆ ರಾಜಕಾರಣಿಯೂ ಆಗಿದ್ದ ಅವರು ಪಕ್ಕಾ ಲೆಕ್ಕ ಕೊಟ್ಟರು.ಆಗ ಖರ್ಚಾಗಿದ್ದು ಕೇವಲ ಮೂರು ಕೋಟಿ ರೂಪಾಯಿಗಳು ಮಾತ್ರ !
ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದ ಅವರು ಅಪ್ಪಟ ಜಾತ್ಯತೀತವಾಗಿ ನಡೆದುಕೊಂಡರು.ಬಹುತೇಕ ಕಡೆಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ದಲಿತ,ಮುಸಲ್ಮಾನ ಪ್ರತಿಭಾವಂತರನ್ನು ಗುರುತಿಸಿ ಆಯಕಟ್ಟಿನ ಸ್ಥಾನಗಳಲ್ಲಿ ಕೂಡಿಸಿದರು.ಕ್ರಿಶ್ಚಿಯನ್ ಶಿಕ್ಷಕರಿಗೆ ಆದ್ಯತೆ ನೀಡಿದರು.ಮುದ್ದುಕೃಷ್ಣರಂತಹ ಅಪ್ಪಟ ಗಾಂಧಿವಾದಿಗೆ ತಮ್ಮ ಶಿಕ್ಷಣ ಸಂಸ್ಥೆಗಳ ಉಸ್ತುವಾರಿ ವಹಿಸಿಕೊಟ್ಟರು.
ಅಪ್ಪಟ ಮಾನವತಾವಾದಿಯಾಗಿದ್ದ ಅವರು ಸದಾ ಜನರ ನಡುವೆ ಇರಬಯಸುತ್ತಿದ್ದರು .ಕೋಮುವಾದಿಗಳಿಂದ ಬಹುದೂರ ಉಳಿದಿದ್ದ ಅವರು ತಮ್ಮ ಜನ್ಮ ದಿನಾಚರಣೆಯನ್ನ ಹಿಂದು,ಮುಸ್ಲಿಂ,ಕ್ರಿಶ್ಚಿಯನ್ ಧರ್ಮಗುರುಗಳ ಬೋಧನೆಯೊಂದಿಗೆ ಸರಳವಾಗಿ ಆಚರಿಸಿಕೊಳ್ಳುತ್ತಿದ್ದರು.ಆ ಕಾರಣಕ್ಕಾಗಿಯೋ ಏನೋ ರಾಜಕಾರಣದಲ್ಲಿದ್ದೂ ರಾಜಕಾರಣಿಯಾಗದೆ,ರಾಜಮನೆತನದಲ್ಲಿದ್ದೂ ರಾಜನಂತಿರದೆ ಜನಸಾಮಾನ್ಯರ ಎಲೆಗಳಲ್ಲಿ ನಿಂತವರು.
ಕುಟುಂಬ ರಾಜಕಾರಣಕ್ಕೆ ಅವಕಾಶ ಕೊಡಲಿಲ್ಲ
ತಮ್ಮತನವನ್ನು ಉಳಿಸಿಕೊಂಡರು.ತಮ್ಮ ಜೀವಿತಾವಧಿಯುದ್ದಕ್ಕೂ ಅವರೆಂದೂ ಕೂಡ ಕುಟುಂಬ ರಾಜಕಾರಣಕ್ಕೆ ಅವಕಾಶ ಕೊಡಲಿಲ್ಲ. ಒಂದು ಬಾರಿ ಕಾರ್ಮಿಕ ಯುವ ನಾಯಕರ ಭೂಪತಿಯವರನ್ನು ಶಾಸಕರನ್ನಾಗಿಸಿದ್ದೂ ಇದೇ ಮುರಾರಿ ರಾವ್ ವೈ. ಘೋರ್ಪಡೆ.
ಪಂಚಾಯತ್ ರಾಜ್ ಕಾಯಿದೆ ಅನುಷ್ಠಾನದಲ್ಲಿ ಸದನದಲ್ಲಿ ಅವರು ತೋರಿದ ಬದ್ಧತೆ,ಅವರೊಳಗಿದ್ದ ಡೆಮಾಕ್ರಟಿಕ್ ಮನುಷ್ಯನನ್ನು ಪರಿಚಯಿಸಿತು. ಮನಸ್ಸು ಮಾಡಿದ್ದರೆ ಕರ್ನಾಟಕದ ಮುಖ್ಯಮಂತ್ರಿಯಾಗಬಹುದಾಗಿದ್ದ , ಎಲ್ಲ ಅರ್ಹತೆಗಳಿದ್ದರೂ ಅಧಿಕಾರದ ಹಿಂದೆ ನುಗ್ಗಿದೆ,ಕ್ಲಾಸ್ ರಾಜಕಾರಣವನ್ನು ಮಾಡುತ್ತ ಬಂದರು.
ಅಪವಾದಗಳಿಗೂ ಗುರಿಯಾದರು
ಸೊಂಡೂರು ಭೂ ಹೋರಾಟದಲ್ಲಿ ತುಸು ಇರಿಸುಮುರಿಸು ಅನುಭವಿಸಿದರೂ,ಸುಮಾರು ಹದಿಮೂರು ಸಾವಿರ ಎಕರೆ ಭೂಮಿಯನ್ನು ಬಡವರಿಗೆ ಹಂಚಿಕೆ ಮಾಡಿದಾಗ ಮತ್ತು ಸ್ವಂತ ಉದ್ದಿಮೆಗಳು ನಷ್ಟದ ಹಿನ್ನೆಲೆಯಲ್ಲಿ ತನ್ನ ಕಂಪೆನಿಗಳಿಗಾಗಿ ನಲವತ್ತು ಕೋಟಿಯಷ್ಟು ವಿದ್ಯುತ್ ಬಿಲ್ಲನ್ನು ಸರ್ಕಾರ ಭರಿಸುವಂತೆ ಮಾಡಿದರು ಎಂಬ ಅಪವಾದಗಳಿಗೂ ಗುರಿಯಾದರು.
ಕಾಲದ ನಂಬರ್ ಒನ್ ರಾಜಕಾರಣಿಯೊಬ್ಬ ತಾವು ಆರೋಗ್ಯವಾಗಿರುವಾಗಲೇ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿ ಯುವಕರನ್ನು ರಾಜಕಾರಣಕ್ಕೆ ತಂದರು.
ಇಂತಹ ಅಪರೂಪದ ಮುತ್ಸದ್ದಿ ಯಾಗಿದ್ದ ಘೋರ್ಪಡೆಯವರು,ನನ್ನ ಬಾಲ್ಯದಲ್ಲಿ ಒಮ್ಮೆ ನನ್ನೂರು ಕೂಡ್ಲಿಗಿಗೂ ಬಂದಿದ್ದರು.ಆಗ ಬಳ್ಳಾರಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದ ನೆನಪು.ನನ್ನೂರಿನ ಮೇನ್ ಬಾಯ್ಸ್ ಸ್ಕೂಲಿನ ಆವರಣದಲ್ಲಿ “ನೀವು ಸಾರಾಯಿ ಕುಡಿಯೋದನ್ನು ಬಿಡಬೇಕು ,ಹಾಗೆ ಕುಡಿದು ಹಾಕುವವರ ಓಟೂ ನನಗೆ ಬೇಡ “ಎಂದ ಮಾತುಗಳಿನ್ನೂ ನಿನ್ನೆ ಮೊನ್ನೆ ಕೇಳಿದಂತಿದೆ.
ಸೊಂಡೂರಿನ ಜನರ ಪಾಲಿಗೆ ಇಂದಿಗೂ ಯುವರಾಜನೆ
ರಾಜರಾಗಿದ್ದೂ ರಾಜನಂತೆ ಬದುಕದೆ ಜನಸಾಮಾನ್ಯನಾಗಿ ಬದುಕಲು ಹಂಬಲಿಸಿದ ಘೋರ್ಪಡೆಯವರನ್ನು ಸೊಂಡೂರಿನ ಜನರ ಪಾಲಿಗೆ ಇಂದಿಗೂ ಯುವರಾಜನೆ ಆಗಿಹೋಗಿದ್ದಾರೆ.
ಬಿ.ಶ್ರೀನಿವಾಸ