ದಾವಣಗೆರೆ (Davanagere): ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಒಳ ಮೀಸಲಾತಿ ಜಾತಿ ಅನುಷ್ಠಾನಗೊಳಿಸಬೇಕು, ಇಲ್ಲವೇ ರಾಜ್ಯದ ಕಾಂಗ್ರೆಸ್ ಸರ್ಕಾರ ಕುರ್ಚಿ ಖಾಲಿ ಮಾಡಬೇಕು ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಕರ್ನಾಟಕದಲ್ಲಿ ಮಾದಿಗರು (ಎಡಗೈ) ಸಮುದಾಯ ಕಳೆದ 30 ವರ್ಷಗಳಿಂದ ಒಳಮೀಸಲಾತಿಗಾಗಿ ಅಥವಾ ಪ್ರತ್ಯೇಕ ಮೀಸಲಾತಿಗಾಗಿ ಎಲ್ಲಾ ಹಂತದ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ಸರ್ಕಾರದ ವಿಳಂಬ ನೀತಿಯಿಂದಾಗಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಅದರಂರೆ ಕಳೆದ ಆಗಸ್ಟ್ ನಲ್ಲಿಯೇ ಸರ್ವೋಚ್ಛ ನ್ಯಾಯಾಲಯವು ಮೀಸಲಾತಿ, ಒಳ ಮೀಸಲಾತಿ ಅಥವಾ ಪ್ರತ್ಯೇಕ ಮೀಸಲಾತಿ ಕೊಡುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಆದೇಶ ಮಾಡಿದೆ. ತೀರ್ಪು ನೀಡಿ ಆರು ತಿಂಗಳು ಕಳೆಯುತ್ತಾ ಬಂದರೂ ದತ್ತಾಂಶದ ನೆಪ ಹೇಳಿ ಸರ್ಕಾರ ಮಾದಿಗರಿಗೆ ಒಳಮೀಸಲಾತಿ ಕೊಡುವ ಮನಸ್ಸು ಮಾಡುತ್ತಿಲ್ಲ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜ್ ಮತ್ತು ಜಿಲ್ಲಾಧ್ಯಕ್ಷ ರಾಜು ಶಾಮನೂರು ಪತ್ರಿಕಾ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೂಡಲೇ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ದತ್ತಾಂಶವನ್ನು ಅಧ್ಯಯನ ಮಾಡಿ ದತ್ತಾಂಶ ಕಲೆ ಹಾಕಬೇಕು, ಜೆ.ಸಿ. ಮಾಧುಸ್ವಾಮಿ ಸಮಿತಿಯ ವರದಿಯನ್ನು ಆಧರಿಸಿ ಒಳಮೀಸಲಾತಿ ಜಾರಿ ಮಾಡಬೇಕು, ಜೆ.ಸಿ.ಮಾಧುಸ್ವಾಮಿ ಸಮಿತಿ ನೀಡಿರುವ ಎ. ಬಿ. ಸಿ. ಡಿ.ಯಲ್ಲಿ ಶೇ.17 ರಲ್ಲಿ ಎ-ಶೇ.6 ಮಾದಿಗರಿಗೆ, ಬಿ-5.5 ಛಲವಾದಿಗಳಿಗೆ, ಸಿ.4.5 ಭೋವಿ, ಲಂಬಾಣಿ, ಕೊರಚ, ಕೊರಮಗಳಿಗೆ. ಡಿ-1 ಇತರೆ ಅಲೆಮಾರಿಗಳಿಗೆ ಅನುಗುಣವಾಗಿ ಮೀಸಲಾತಿಯನ್ನು ಜಾರಿ ಮಾಡಬೇಕು. ಸಚಿವ ಸಂಪುಟವು ನಿರ್ಣಯಿಸಿದಂತೆ, ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರಿ ಹುದ್ದೆಗಳಲ್ಲಿ ಸುಮಾರು 37 ಸಾವಿರ ಹುದ್ದೆಗಳ ನೇಮಕಾತಿಯನ್ನು ತಡೆ ಹಿಡಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳೇ ಮತ್ತು ಸರ್ಕಾರದ ಸಚಿವರುಗಳೇಜ, ಮಾದಿಗರಿಗೆ ಒಳ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಜಾರಿ ಮಾಡಬೇಕು ಇಲ್ಲವೆ ತಮ್ಮ ಕುರ್ಚಿಯನ್ನು ಖಾಲಿ ಮಾಡಿ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.