ದಾವಣಗೆರೆ (Davanagere): ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪಾದಿಸಿಕೊಳ್ಳಿ. ಜ್ಞಾನ ಮತ್ತು ಒಳ್ಳೆಯ ಶಿಕ್ಷಣ ಪಡೆಯುವ ಮೂಲಕ ಸ್ವತಂತ್ರ ಮತ್ತು ಧೈರ್ಯದಿಂದ ಸ್ವಾವಲಂಬಿಗಳಾಗಿ ಬದುಕಬೇಕು. ಯಾರ ಮುಂದೆಯೂ ಕೈಚಾಚಬೇಡಿ. ಇಂದಿನ ಪ್ರಪಂಚದಲ್ಲಿ ಜ್ಞಾನ, ಶಿಕ್ಷಣ, ತಂತ್ರಜ್ಞಾನ ಸೇರಿದಂತೆ ಎಲ್ಲವೂ ಲಭ್ಯವಿದೆ. ಬೇಕಾಗಿರುವುದು ಗಟ್ಟಿ ಮನಸ್ಸು. ಸ್ವಾಭಿಮಾನಕ್ಕೆ ಬಡತನ ಇರಬಾರದು, ಶ್ರೀಮಂತಿಕೆ ಇರಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಸಲಹೆ ನೀಡಿದರು.
ಜಗಳೂರು ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಸಮಾನ ಮನಸ್ಕರ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ, ರಾಷ್ಟ್ರೀಯ ಯುವಕರ ದಿನದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ದೊಡ್ಡ ಕನಸು ಕಾಣಬೇಕು. ನಾನು ದಾವಣಗೆರೆಯ ಕಕ್ಕರಗೊಳ್ಳದವನು. ಪುಟ್ಟ ಹಳ್ಳಿಯಿಂದ ಬಂದವನು. ಕಷ್ಟದಲ್ಲಿಯೇ ಓದಿ ಇನ್ ಸೈಟ್ಸ್ ಸಂಸ್ಥೆ ಸ್ಥಾಪನೆ ಮಾಡಿದ್ದು. ಇಂದು ದೇಶಾದ್ಯಂತ ದೊಡ್ಡದಾಗಿ ಬೆಳೆದಿದೆ. ದೇಶದ 65 ಜಿಲ್ಲೆಗಳಲ್ಲಿ ನನ್ನ ವಿದ್ಯಾರ್ಥಿಗಳು ಡಿಸಿಗಳಾಗಿದ್ದಾರೆ, ಜಿಲ್ಲಾ ಪಂಚಾಯಿತಿ ಸಿಇಒಗಳಾಗಿದ್ದಾರೆ. ಸುಮಾರು 50 ಜಿಲ್ಲೆಗಳಲ್ಲಿ ಎಸ್ಪಿಗಳಾಗಿದ್ದಾರೆ. ಒಟ್ಟು 500ರಿಂದ 550 ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿಯಂತೆ ಕಷ್ಟಪಟ್ಟಿದ್ದು, ಪುಸ್ತಕಗಳ ಜ್ಞಾನದಿಂದ ಎಂದು ತಿಳಿಸಿದರು.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತ ಸಂಭವಿಸಿ ಸಾವು ಸಂಭವಿಸಿದೆ. ಮಹಾಕುಂಭ ಮೇಳವು ವಿಶ್ವದ ಗಮನ ಸೆಳೆದಿದೆ. ಪ್ರಯಾಗ್ ರಾಜ್ ನ ಪಕ್ಕದ ಜಿಲ್ಲೆಯ ಅಯೋಧ್ಯೆಯಲ್ಲಿ ಸಿಇಒ ಆಗಿರುವುದು ಜಯದೇವ್ ಅವರು ನನ್ನ ಸಂಸ್ಥೆಯ ವಿದ್ಯಾರ್ಥಿ. ಹಾಗಾಗಿ, ಬಡತನ ಇದ್ದರೂ ದೊಡ್ಡ ಕನಸು ಕಾಣುವುದನ್ನು ರೂಢಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಸ್ವಾಭಿಮಾನ ಬಿಡಬೇಡಿ ಎಂದು ಸಲಹೆ ನೀಡಿದರು.
ಡಾ. ಬಿ. ಆರ್. ಅಂಬೇಡ್ಕರ್ ರವರ ಬರವಣಿಗೆಯಲ್ಲಿ ಸ್ವಾಭಿಮಾನ ಮತ್ತು ಘನತೆ ಪದಗಳು ಪದೇ ಪದೇ ಪುನರಾವರ್ತನೆ ಆಗಿವೆ. ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು ಎಂಬುದೇ ಸಂವಿಧಾನದ ಮೂಲ ಉದ್ದೇಶ. ಇಂಥ ವ್ಯವಸ್ಥೆ ಸೃಷ್ಟಿಯಾಗಬೇಕು. ಅಸಮಾನತೆ ತೊಲಗಬೇಕು ಎಂದು ಪ್ರತಿಪಾದಿಸಿದರು.
ಅಸಮಾನತೆ ಹೋಗಬೇಕಾದರೆ ಜ್ಞಾನ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಚಿಕ್ಕ ವಯಸ್ಸಿನಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನ ಬರುತ್ತದೆ. ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಸಿಕ್ಕರೆ ಉನ್ನತ ಹುದ್ದೆ ಅರಸಿ ಬರುತ್ತವೆ ಎಂದು ತಿಳಿಸಿದರು.
1891ರಲ್ಲಿ ಅಂಬೇಡ್ಕರ್ ಅವರು ಜನಿಸಿದಾಗ ಅವರ ತಂದೆ ತಾಯಿಗೆ 14ನೇ ಮಗು. ಆಗಿನ ಸಾಮಾಜಿಕ ಪರಿಸ್ಥಿತಿ ಊಹಿಸಿಕೊಳ್ಳಲು ಆಗದು. ಯಾಕೆಂದರೆ ಆಗ ಪ್ರತಿಯೊಬ್ಬರೂ ಸಾಮಾಜಿಕ, ಶೈಕ್ಷಣಿಕವಾಗಿ ಕೆಳವರ್ಗದವರಿಗೆ ಸಿಗದಂತೆ ಮಾಡಲಾಗಿತ್ತು. ಇದನ್ನು ಮೆಟ್ಟಿ ನಿಂತು ಬೆಳೆದಿದ್ದು ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರು ನಿಧನ ಹೊಂದಿದಾಗ ಅವರ ಬಳಿ ಇದ್ದದ್ದು 50 ಸಾವಿರ ಪುಸ್ತಕಗಳು. ಪುಸ್ತಕ ಓದುವ ಹವ್ಯಾಸವೇ ಅಂಬೇಡ್ಕರ್ ಅವರ ಜ್ಞಾನ ಭಂಡಾರ ಹೆಚ್ಚಾಗಲು ಕಾರಣ. ಪದವಿ ಪೂರ್ಣಗೊಳಿಸುವುದರೊಳಗೆ 100ರಿಂದ 200 ಪುಸ್ತಕ ಖರೀದಿಸಿ ಓದಿ. ಕಡುಬಡತನ ಇದ್ದರೂ ಪ್ರತಿಭೆ ಜ್ಞಾನ ಗುರುತಿಸುವಂತಾಗುತ್ತದೆ ಎಂದು ಸಲಹೆ ನೀಡಿದರು.
ಸಮಾನ ಮನಸ್ಕರ ಬಳಗದ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ಟಿ. ಜಿ. ರವಿಕುಮಾರ್, ಪ್ರದೀಪ್ ಕುಮಾರ್, ಶೌಖತ್ ಆಲಿ, ಕೀರ್ತಿ ದೇವೇಂದ್ರಪ್ಪ, ಮಹಾಲಿಂಗಪ್ಪ, ಬರ್ಕತ್ ಆಲಿ, ಸತೀಶ್ ಮತ್ತಿತರರು ಹಾಜರಿದ್ದರು.
Read also : ದೇವಸ್ಥಾನಕ್ಕೆ ಕನ್ನ ಹಾಕುತ್ತಿದ್ದ ಖದೀಮರು| ಹೊಯ್ಸಳ ಕ್ಷಿಪ್ರ ಕಾರ್ಯಚರಣೆ | ಮುಂದೆ ಆಗಿದ್ದೇನು?