ದಾವಣಗೆರೆ ಆ.22: ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಅವಿರತವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣವರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸ್ಪೂರ್ತಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಒಂದು ದಿನದ ಬಾಲ್ಯವಿವಾಹ ನಿಷೇಧ ಕುರಿತು ಚಿಂತನಾ ಮಂಥನ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 6 ತಾಲ್ಲೂಕು ಹೊಂದಿದ್ದು, ಗ್ರಾಮೀಣ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ 2 ಸಾವಿರ ಬಾಲ್ಯವಿವಾಹ ನಿಷೇಧಾಧಿಕಾರಿಗಳಿದ್ದಾರೆ. ಆದರೆ ಬಾಲ್ಯ ವಿವಾಹ ಪ್ರಕರಣ ತಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಯಾವುದೇ ಗ್ರಾಮ ಅಥವಾ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ವಿವಾಹ ಸಿದ್ದತೆ, ಪೂರ್ವ ತಯಾರಿ ಕುರಿತು ಮಾಹಿತಿ ಲಭ್ಯವಿಲ್ಲದೇ ಇರುವುದಿಲ್ಲ. ಆದರೂ ಇಂತಹ ಪ್ರಕರಣಗಳು ಇಂದಿಗೂ ದಾಖಲಾಗುತ್ತಿರುವುದು ವಿಷಾಧನೀಯ. ಬಾಲ್ಯ ವಿವಾಹ ಮತ್ತು ಪೋಕ್ಸೋ ತಡೆದಲ್ಲಿ ಒಂದು ಮಗುವಿನ ಸರ್ವಾಂಗಿಣ ಬೆಳವಣಿಗೆಗೆ ಕಾರಣವಾಗಬಹುದು. ದೇಶದ ಭವಿಷ್ಯ ಯುವ ಸಮುದಾಯದ ಮೇಲಿದೆ, ದೇಶ ಸುಭದ್ರತೆ ಮತ್ತು ಬಲಿಷ್ಠ, ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಆರೋಗ್ಯವಂತ ಯುವ ಪೀಳಿಗೆ ಬೆಳೆಯಬೇಕು ಎಂದ ಅವರು, ಪ್ರಸ್ತುತ ಮಾನವನ ಜೀವನ ಶೈಲಿ ಬದಲಾವಣೆಯಾಗಿದೆ. ಮಾನವೀಯ ಮೌಲ್ಯಗಳು ಕೂಡ ಕ್ಷೀಣಿಸುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ ಎಂದರು.
ನಿಸರ್ಗವು ಯಾವ ಕಾಲಕ್ಕೆ, ಯಾವ ಸಂದರ್ಭಕ್ಕೆ ಹೂ ಬಳ್ಳಿ, ಹಣ್ಣು, ಕಾಯಿ ಕೊಡಬೇಕು ಎಂದು ನಿರ್ಧರಿಸಿ ಫಲ ಕೊಡುತ್ತಿದೆ. ಅದರಂತೆ ಏನು ಅರಿಯದ, ಜೀವನ ನಡೆಸುವ ಪದ್ಧತಿಯೇ ಗೊತ್ತಿಲ್ಲದ ಮಕ್ಕಳಿಗೆ ಬಡತನ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯ ಕಾರಣಗಳಿಂದ ಬಾಲ್ಯವಿವಾಹ ಎಂಬ ಸಂಕೋಲೆಗಳಿಗೆ ದೂಡುತ್ತಾರೆ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವುದಲ್ಲದೇ, ಶಿಶು ಮರಣ ಮತ್ತು ತಾಯಿ ಮರಣ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಬಾಲ್ಯ ವಿವಾಹ ನಿಲ್ಲಿಬೇಕಾಗಿದೆ. ಬಾಲ್ಯವಿವಾಹ ನಿರ್ಮೂಲನೆಗೆ ಗ್ರಾಮೀಣ ಮಟ್ಟದಿಂದ ಅನೇಕ ಸಮಿತಿಗಳನ್ನು ಅನುಷ್ಠಾನಗೊಳಿಸಿದೆ. ಆದರೆ ಅವುಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯವಹಿಸದೇ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಮತ್ತಷ್ಟು ಅರಿವು ಮೂಡಿಸುವ ಕೆಲಸ ಮಾಡಬೆಕು ಎಂದು ತಾಕೀತು ಮಾಡಿದರು.
ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ, ದೈಹಿಕ ದೌರ್ಜನ್ಯ, ಪೋಕ್ಸೋ ಕುರಿತು ಮಾಹಿತಿ ತಿಳಿದು ಬಂದಲ್ಲಿ ಸಂಬAಧಪಟ್ಟ ಇಲಾಖೆ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ ಪೊಲೀಸ್ ಸಹಾಯವಾಣಿ 112ಗೆ ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಾಲ್ಯವಿವಾಹ ಮತ್ತು ಪೋಕ್ಸೋ ಕಾಯ್ದೆ ಕುರಿತ ಕಾನೂನಾತ್ಮಕವಾಗಿ ಸಂಕ್ಷಿಪ್ತವಾಗಿ ಮಾಹಿತಿ ನೀಡಿ, ಅಧಿಕಾರಿಗಳ ಕೇಳಿದ ಪ್ರಶ್ನೆಗಳಿಗೆ ಹಾಗೂ ಅವರಲ್ಲಿನ ಗೊಂದಲ, ಸಮಸ್ಯೆಗಗಳಿಗೆ ಸೂಕ್ತ ಪರಿಹಾರ ನೀಡಿದರು.
Read also : ಪ.ಪಂಗಡಗಳ ಅಭಿವೃದ್ದಿ ನಿಗಮ: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಜಿ.ಪಂ ಸಿಇಓ ಗಿತ್ತೆ ಮಾಧವ ವಿಠಲ ರಾವ್ ಮಾತನಾಡಿ, ಬಾಲ್ಯ ವಿವಾಹದಿಂದ ಮಕ್ಕಳ ಹಕ್ಕುಗಳು ಕಸಿದುಕೊಂಡAತೆ ಆಗುತ್ತದೆ. ಅವರಿಗೆ ಸರಿಯಾದ ರೀತಿಯಲ್ಲಿ ಹಕ್ಕು ದೊರಕಿಸಿ ಕೊಡಬೇಕಾದರೆ, ಅಧಿಕಾರಿಗಳು ಕಾನೂನಾತ್ಮವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಬಾಲ್ಯವಿವಾಹ ತಡೆದಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಹಕ್ಕುಗಳನ್ನು ಒದಗಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ನ್ಯಾ. ಮಹಾವೀರ ಮ ಕರೆಣ್ಣವರ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಸಹಾಯವಾಣಿ ಸಂಖ್ಯೆ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯ ಡಿ.ಶಂಕರಪ್ಪ ಉಪನ್ಯಾಸ ನೀಡಿದರು.
ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಡಿಡಿಪಿಐ ಕೊಟ್ರೇಶ್, ಸ್ಪೂರ್ತಿ ಸಂಸ್ಥೆಯ ರೂಪನಾಯ್ಕ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.