ಜಗಳೂರು : ಸಮಾಜವನ್ನು ತಿದ್ದುವಂತಹ ಕೆಲಸವನ್ನು ಮಾಧ್ಯಮ ಸಮೂಹವು ಮಾಡುತ್ತಿದ್ದು ಈ ಸಂಘದ ಮೂಲಕ ಅಭಿವೃದ್ಧಿಯಾಗಬೇಕಾಗಿದೆ ಎಂದು ಹಿರಿಯೂರು ಆದಿಜಾಂಭವ ಮಠದ ಷಡಕ್ಷರಿ ಮುನಿಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂವಿಧಾನದ 3 ಅಂಗಗಳ ಕಾರ್ಯ ವೈಖರಿಗಳನ್ನು ಸಮಾಜಕ್ಕೆ ತಿಳಿಸುವಂತಹ ಕೆಲಸವನ್ನು ಮಾಧ್ಯಮ ಸಮೂಹವು ವಿಶ್ವಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ದಾರಿ ತಪ್ಪಿದವರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದೆ ಪತ್ರಕರ್ತರು ಬುದ್ದಿವಂತರಾಗಿದ್ದಾರೆ ಆದರೆ ಬಂಡವಾಳವಿಲ್ಲದೆ ಸಂಕಷ್ಟದಲ್ಲಿದ್ದು ಸರ್ಕಾರ ನೆರವಾಗಿ ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ಪತ್ರಕರ್ತರ ಸಂಘದಲ್ಲಿ ಅಧಿಕಾರ ನಿಂತನೀರಾಗದೆ,ಸಮಬಾಳು,ಸಮಪಾಲಿನಡಿ ಹಂಚಿಕೆಯಾಗಬೇಕು.ಸಮಾಜದಲ್ಲಿ ಅಂಕುಡೊಂಕು ಗಳನ್ನು ತಿದ್ದುವಮೂಲಕ ಪತ್ರಿಕಾರಂಗ ಅಂಕುಶವಾಗಿ ಕೆಲಸಮಾಡುತ್ತದೆ. ನಿಲುಗನ್ನಡಿಯಾಗಿ ನಾನು ಸ್ವೀಕರಿಸುವೆ.ನಿಷ್ಠುರ,ಪಾರದರ್ಶಕ ಸುದ್ದಿಗಳನ್ನು ಭಿತ್ತರಿಸಬೇಕು. ನೆನೆಗುದಿಗೆ ಬಿದ್ದಿರುವ ತಾಲ್ಲೂಕು ಪತ್ರಕರ್ತರ ಸಂಘ ಭವನ ಪೂರ್ಣಗೊಳಿಸಲು ವೈಯಕ್ತಿಕವಾಗಿ ರೂ.10ಲಕ್ಷ ಒದಗಿಸುವೆ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ಬಂದು ಸದ್ಬಳಕೆಮಾಡಿ ಕೊಳ್ಳಬೇಕು.ನನ್ನ ತಾಯಿಯ ಸ್ಮರಣಾರ್ಥವಾಗಿ ರೂ.3 ಲಕ್ಷ ದತ್ತಿದೇಣಿಗೆ ನೀಡುವೆ.ಹಂತಹಂತವಾಗಿ ಪತ್ರಕರ್ತರ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ನನ್ನ ಆಡಳಿತಾವಧಿಯಲ್ಲಿ ಪಟ್ಟಣ ಪಂಚಾಯಿತಿ ಒಳಪಟ್ಟಿದ್ದ ಭವನದ ಕಟ್ಟಡವನ್ನು ಶಾಸಕರ ಅನುದಾನದಲ್ಲಿ ರೂ.12 ವೆಚ್ಚ ಭರಿಸಿ ಅಭಿವೃದ್ದಿಪಡಿಸಿ,ಕಂಪ್ಯೂಟರ್ ಇತರೆ ಮೂಲಸೌಕರ್ಯ ಒದಗಿಸಿದ್ದೆ.ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಐತಿಹಾಸಿಕ ಸ್ಥಳಗಳನ್ನು ಬರವಣಿಗೆ ಮೂಲಕ ಗುರುತಿಸಬೇಕು.ಪತ್ರಕರ್ತರ ಜೀವನ ಸಂಕಷ್ಟದಲ್ಲಿದ್ದು ಅವರನ್ನು ಬೆಳೆಸಬೇಕಿದೆ ಎಂದು ತಿಳಿಸಿದರು.
ಕಾನಿಪ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟಿ ಮಾತನಾಡಿ,ಪತ್ರಿಕಾರಂಗ ಜವಾಬ್ದಾರಿಯುತ ವೃತ್ತಿಯಾಗಿದ್ದು,ವೃತ್ತಿಬದ್ದತೆ ಉಳಿಸಬೇಕು.ಸಂಘದಲ್ಲಿ ಅಧಿಕಾರ ಶಾಶ್ವತವಲ್ಲ , ಸಂಘಕ್ಕೆ ಸ್ಥಳೀಯವಾಗಿ ಲಭ್ಯವಾಗುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು.ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರ ನಿವೇಶನ ಹಂಚಿಕೆಯಲ್ಲಿ ಶೇ.10 ರಷ್ಟು ಮೀಸಲಿಟ್ಟು ಪತ್ರಕರ್ತರಿಗೆ ನಿವೇಶನ ಒದಗಿಸಲು ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದ ಭಾರತಿ ಅಕ್ಕ ಮಾತನಾಡಿ,ಪತ್ರಕರ್ತರು ಸುದ್ದಿಯಲ್ಲಿ ಬಳಸುವ ಶಬ್ದಗಳು ಮತ್ತೊಬ್ಬರಿಗೆ ಅಪಮಾನವಾಗದಿರಲಿ,ಪ್ರತಿಯೊಬ್ಬ ಪತ್ರಕರ್ತರೂ ಚಿಂತನಾಶೀಲತೆ ಮೈಗೂಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿರಿ ಎಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಡಿ.ಶ್ರೀನಿವಾಸ್ ಮಾತನಾಡಿ,ಸ್ಥಳೀಯ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕಿದೆ.ಜಿಲ್ಲೆಯಲ್ಲಿ ಹೊರಗಿನ ರಾಜ್ಯದವರಿಗೆ,ಹೊರಗಿನ ಜಿಲ್ಲೆಯವರಿಗೆ ವಿಶೇಷ ಸೌಲಭ್ಯ,ನಿವೇಶನ ಕಲ್ಪಿಸಿದ್ದಾರೆ. ಪತ್ರಕರ್ತರಿಗೆ ನಿವೇಶನ,ಸೂರಿಲ್ಲ,ನೆನೆಗುದಿಗೆ ಬಿದ್ದಿರುವ ಪತ್ರಿಕಾಭವನ ಕಟ್ಟಡ ಪೂರ್ಣಗೊಳಿಸಲು ಶಾಸಕ ಬಿ.ದೇವೇಂದ್ರಪ್ಪ ಅವರು ಕೈಜೋಡಿಸಬೇಕು ಎಂದು ಮನವಿಮಾಡಿದರು.
ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು,ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಎಸ್.ಚಿದಾನಂದ,ನೂತನ ತಾಲ್ಲೂಕು ಅಧ್ಯಕ್ಷ ಲೋಕೇಶ್ ಎಂ. ಮಾತನಾಡಿದರು.
ಇದೇ ವೇಳೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾನಿಪ ಸಂಘದ ಜಿಲ್ಲಾ ಖಜಾಂಚಿ ವೀರೇಶ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಬದ್ರಿನಾಥ್, ಚುನಾವಣೆ ಅಧಿಕಾರಿ ಜೈಮುನಿ,ರಾಜ್ಯಪರಿಷತ್ ಸದಸ್ಯ ಚಂದ್ರಣ್ಣ, ಜಿಲ್ಲಾ ಉಪಾಧ್ಯಕ್ಷ ಬಿ.ಪಿ.ಸುಬಾನ್,ವಕೀಲ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಬಸವರಾಜ್, ಪತ್ರಕರ್ತ ಕೊಟ್ರೇಶ್,ಕೂಡ್ಲಿಗಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹುಡೇಂ ಕೃಷ್ಣ ಮೂರ್ತಿ,ಮುಖಂಡರಾದ ಬಿ.ಮಹೇಶ್ವರಪ್ಪ, ಪೂಜಾರ ಸಿದ್ದಪ್ಪ,ಗುತ್ತಿದುರ್ಗ ರುದ್ರೇಶ್,ಕುಬೇಂದ್ರಪ್ಪ,ಮೋರಾರ್ಜಿ, ಕುಬೇರಪ್ಪ,ಬಸವರಾಜ್, ಸೇರಿದಂತೆ ತಾಲ್ಲೂಕು ಕಾನಿಪ ಸಂಘ ದ ಪದಾಧಿಕಾರಿಗಳು ಇದ್ದರು.
