ಶಿವಮೊಗ್ಗ: ನಮೂನೆ 35 ಬಿಗೆ ಸಂಬಂಧಿಸಿದ ಸೆಸ್ ಸಮಸ್ಯೆ ಇತ್ಯರ್ಥ್ಯಕ್ಕೆ ಶೀಘ್ರದಲ್ಲಿ ಎಥನಾಲ್ ಫ್ಯಾಕ್ಟರಿ ಮಾಲೀಕರು ಹಾಗೂ ಮೆಕ್ಕೆಜೋಳ ಖರೀದಿದಾರರ ಸಭೆ ಕರೆಯಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ,ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಬೆಂಗಳೂರಿನ ಕೃಷಿ ಮಾರಾಟ ಇಲಾಖೆ ಕಚೇರಿ ಸಭಾಂಗಣದಲ್ಲಿ ಬುಧವಾರ ಎಂಎಲ್ಸಿ ಡಿ.ಎಸ್. ಅರುಣ್ ನೇತೃತ್ವದಲ್ಲಿ ಆಗಮಿಸಿದ್ದ ದಾವಣಗೆರೆ, ಶಿವಮೊಗ್ಗ ಚಿತ್ರದುರ್ಗ ಜಿಲ್ಲೆ ಎಪಿಎಂಸಿ ಮೆಕ್ಕೆಜೋಳ ಖರೀದಿದಾರರ ಅಹವಾಲು ಆಲಿಸಿದ ಸಚಿವರು, ಆನ್‌ಲೈನ್ ಮೂಲಕ ಸೆಸ್ ಪಾವತಿ ವ್ಯವಸ್ಥೆ ಈಗಾಗಲೆ ದಾವಣಗೆರೆ ಜಿಲ್ಲೆಯ ಎಲ್ಲ ಎಪಿಎಂಸಿಯಲ್ಲಿ ಜಾರಿಯಲ್ಲಿದ್ದು ಹಂತ ಹಂತವಾಗಿ ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ಆನ್‌ಲೈನ್‌ನಲ್ಲಿ ಸೆಸ್ ಪಾವತಿ ಮಾಡಿದ್ದರೆ ಸಂಬಂಧಪಟ್ಟ ರಸೀದಿಗೆ ಎಪಿಎಂಸಿ ಅಧಿಕಾರಿಗಳ ಸಹಿ ಮತ್ತು ಸೀಲಿನ ಅವಶ್ಯಕತೆ ಇರುವುದಿಲ್ಲ. ಈ ಸಂಬಂಧ ಎಲ್ಲ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ವಿಚಾರದಲ್ಲಿ ಖರೀದಿದಾರರು ಮತ್ತು ಸಂಸ್ಕರಣ ಘಟಕಗಳ ಮಾಲೀಕರ ಸಭೆಯಲ್ಲಿ ತಿಳಿವಳಿಕೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಎಪಿಎಂಸಿ ವ್ಯಾಪ್ತಿಯ ಆಸ್ತಿಗಳಿಗೆ ಕಂದಾಯವನ್ನು ನಗರಪಾಲಿಕೆ ಇಲ್ಲವೆ ನಗರಸಭೆಗಳಿಗೆ ಪಾವತಿಸುವ ಬದಲಿಗೆ ಎಪಿಎಂಸಿಗಳಿಗೆ ಪಾವತಿ ಮಾಡಬೇಕು ಎಂಬ ವರ್ತಕರ ಬೇಡಿಕೆ ಗಮನದಲ್ಲಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಕೈಗೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಪಿಎಸಿಗಳಲ್ಲಿ ಸಾಕಷ್ಟುಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೈತರು ಮತ್ತು ವರ್ತಕ ಸ್ನೇಹಿ ಪರಿಸರವನ್ನು ನಿರ್ಮಿಸಲಾಗುತ್ತಿದೆ. ಎಲ್ಲ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗುತ್ತಿದ್ದು, ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ ಎಂದರು.
ನಮೂನೆ 35 ಬಿ ಪದ್ಧತಿ ಬೇಡ, ನಮೂನೆ 35 ಎ ಪದ್ಧತಿ ಮಾತ್ರ ಜಾರಿಯಲ್ಲಿ ಇರಬೇಕು ಎಂದು ಮೆಕ್ಕೆಜೋಳ ಖರೀದಿ ದಾರರು ಬೇಡಿಕೆ ಇಟ್ಟರು. ನಮೂನೆ 35 ಬಿ ಆನ್‌ಲೈನ್‌ನಲ್ಲಿ ಪಡೆದಿದ್ದರೂ ಸಹಿ ಮತ್ತು ಸೀಲು ಇಲ್ಲ ಎಂಬ ಕಾರಣಕ್ಕೆ ಕೆಲವು ಎಥನಾಲ್ ಕಂಪನಿಯವರು ಮೆಕ್ಕೆಜೋಳ ಖರೀದಿ ಹಣ ಪಾವತಿ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ವರ್ತಕರು ದೂರಿದರು.
ಸಂಸ್ಕರಣ ಘಟಕಗಳ ಮಾಲೀಕರು 35 ಬಿ ಪರಿಶೀಲಿಸಿದ ನಂತರ ಮೆಕ್ಕೆಜೋಳ ಖರೀದಿ ಹಣ ಪಾವತಿ ಮಾಡುತ್ತೆವೆ ಎಂದು ಹೇಳುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದ್ದು, ಮೂರುತಿಂಗಳು ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಮನವಿ ಮಾಡಿದರು.
ಚಿತ್ರದುರ್ಗದಲ್ಲಿ ವರ್ತಕರು ವಿದ್ಯುತ್ ಶುಲ್ಕವನ್ನು ಎಪಿಎಂಸಿಗೆ ಪಾವತಿ ಮಾಡುತ್ತಿದ್ದು, ಇದೇ ರೀತಿ ಅಸ್ತಿ ಕಂದಾಯವನ್ನೂ ಎಪಿಎಂಸಿಗೆ ಪಾವತಿ ಮಾಡುವ ವ್ಯವಸ್ಥೆ ಜಾರಿಗೆಬರಲಿ. ನಗರಸಭೆಯಗಳು ಎಪಿಎಂಸಿ ವ್ಯಾಪ್ತಿಯಲ್ಲಿ ಯಾವುದೆ ಸೌಲಭ್ಯ ಕೊಡುವುದಿಲ್ಲ. ಹೀಗಾಗಿ ಇದನ್ನುಬದಲ ಅವಣೆ ಮಾಡಿ ಎಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಡಿ.ಎಸ್. ಅರಣ್, ರಾಜ್ಯ ಸರ್ಕಾರ ಎಪಿಎಂಸಿಗಳಲ್ಲಿ ಹಲವಾರು ಸುಧಾರಣೆ ಮಾಡಿದೆ. ಈಸಮಸ್ಯೆಯನ್ನೂ ತ್ವರಿತವಾಗಿ ಪರಿಹರಿಸಬೇಕು ಎಂದು ಮನವಿ ಮಾಡಿದರು.
ಕೃಷಿ ಮಾರಾಟ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಹೆಚ್ಚುವರಿ ನಿರ್ದೇಶಕ ನಜೀಬುಲ್ಲಾಖಾನ್, ವರ್ತಕರಾದ ಕೆ. ಜಾವಿದ್, ಶ್ರೀನಿವಾಸ್, ನಂಜನಗೌಡ, ಗಿರೀಸ್, ಕುಬೇರಪ್ಪ, ಪ್ರಕಾಶ್ ಮತ್ತಿತರರು ಇದ್ದರು.