ದಾವಣಗೆರೆ ಫೆ.7: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಆರೋಪಿಗೆ ದಾವಣಗೆರೆಯ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ : 2022ರ ಫೆಬ್ರವರಿಯಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ತನ್ನ ಅಜ್ಜಿಯ ಮನೆಗೆ ಹೋಗಿದ್ದ 15 ವರ್ಷ 4 ತಿಂಗಳ ಬಾಲಕಿಯನ್ನು ಆರೋಪಿ ಸಿದ್ದಪ್ಪ (27) ಪುಸಲಾಯಿಸಿ ಬೆಂಗಳೂರು ಸೇರಿದಂತೆ ವಿವಿಧೆಡೆ ಕರೆದೊಯ್ದಿದ್ದನು. ಬಾಲಕಿ ಅಪ್ರಾಪ್ತ ವಯಸ್ಸಿನವಳೆಂದು ತಿಳಿದಿದ್ದರೂ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಬಾಲಕಿಯ ತಂದೆ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ನೀಡಿದ್ದಾರೆ.
ಆರೋಪಿ ಸಿದ್ದಪ್ಪನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 35,000 ರೂ. ದಂಡ ವಿಧಿಸಿದೆ. ಸಂತ್ರಸ್ತ ಬಾಲಕಿಗೆ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
Read also : ಮಾಕುಂಟೆ ಗೊಲ್ಲರಹಟ್ಟಿಗೆ ನುಗ್ಗಿದ ಕರಡಿ ಭಯಭೀತರಾದ ಗ್ರಾಮಸ್ಥರು
ದಾವಣಗೆರೆ ಗ್ರಾಮಾಂತರ ಪೊಲೀಸ್ ನಿರೀಕ್ಷಕರಾದ ಲಿಂಗನಗೌಡ ನೆಗಳೂರ್ ಅವರು ಈ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲರಾದ ಬಸವರಾಜ್ ಎ. ಎಂ. ಅವರು ಸಂತ್ರಸ್ತೆಯ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.
ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತನಿಖಾಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
