ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಸಮೀಪದ ಕಾಟೇಮಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ರೈತನೊಬ್ಬನಿಗೆ ಸೇರಿದ ಸುಮಾರು 300 ಅಡಿಕೆ ಮರಗಳನ್ನು ಕಡಿದು ಹಾಕಿರುವ ಘಟನೆ ನಡೆದಿದೆ.
ಈ ಘಟನೆಯಿಂದ ರೈತ ನಾಗರಾಜ್‌ಗೆ ಸುಮಾರು 6 ಲಕ್ಷ ರೂಪಾಯಿಗಳ ನಷ್ಟವಾಗಿದೆ. ನಾಲ್ಕು ವರ್ಷಗಳಿಂದ ಶ್ರಮವಹಿಸಿ, ಸಾಲ ಮಾಡಿ, ಮಳೆಯಾಶ್ರಿತ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿ ಅಡಿಕೆ ಮರಗಳನ್ನು ಉಳಿಸಿಕೊಂಡಿದ್ದ ರೈತ ನಾಗರಾಜ್‌ರ ಕುಟುಂಬ ಈ ಘಟನೆಯಿಂದ ತೀವ್ರವಾಗಿ ನಲುಗಿದೆ.
ತಡರಾತ್ರಿ ಆಗಮಿಸಿದ ದುಷ್ಕರ್ಮಿಗಳು ಫಲಕ್ಕೆ ಬಂದಿದ್ದ ಈ ಮರಗಳನ್ನು ಕಡಿದು ಹಾಕಿದ್ದಾರೆ.ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಜಗಳೂರು ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.ರೈತನ ಕಷ್ಟದ ಫಸಲನ್ನು ಧ್ವಂಸಗೊಳಿಸಿದ ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.